ಇಂದಿನಿಂದ ಜುಂಜಪ್ಪ ಸ್ವಾಮಿ ಜಾತ್ರೆ
ತುಮಕೂರು: ತುಮಕೂರು ಗ್ರಾಮಾಂತರದ ಕೋರ ಹೋಬಳಿಯ ಬಹುಜನಹಳ್ಳಿಯಲ್ಲಿ (ಕೋಳಲುಕುಂಟೆ) ಕರಿಯಮ್ಮದೇವಿ ಮತ್ತು ಜುಂಜಪ್ಪಸ್ವಾಮಿ ಜಾತ್ರಾ ಮಹೋತ್ಸವ ಮೇ 27 ಹಾಗೂ 28 ರಂದು ನಡೆಯಲಿದೆ. 27 ರಂದು ಗಂಗಾಪೂಜೆ, ಮಂಗಳಾರತಿ, ಬಾನ, ಕಳಸೋತ್ಸವ ನಡೆಯಲಿದೆ. ನಂತರ ಗ್ರಾಮಸ್ಥರಿಂದ ಆರತಿ, ದೇವಿಯ ಅಗ್ನಿಕುಂಡ ನೆರವೇರಲಿದೆ. ಸಂಜೆ 7-30 ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಹರಿಕಥಾ ವಿದ್ವಾನ್ ನರಸಿಂಹದಾಸ್ ಮತ್ತು ತಂಡದವರಿಂದ ನಲ್ಲತಂಗಿ ಹರಿಕಥೆ ಏರ್ಪಾಟಾಗಿದೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜಪ್ಪ ಅಪ್ಪಿನಕಟ್ಟೆ ಹಾಗೂ ಸ್ಥಳೀಯ ಮುಖಂಡರು ಬಾಗವಹಿಸಲಿದ್ದಾರೆ. ಮೇ 28 ರಂದು ಶ್ರೀದೇವಿ ಮತ್ತು ಸ್ವಾಮಿಯ ಉತ್ಸವ, ಸೋಮನ ಕುಣಿತ ಹಾಗೂ ಓಂ ಭೂತರಾಯನಸ್ವಾಮಿ ಪೂಜೆ ಜರುಗಲಿದೆ.
ಇಸ್ಪೀಟ್ ಆಟ7 ಮಂದಿ ಸೆರೆ
ಪಾವಗಡ: ಇಸ್ಪೀಟ್ ಆಟಗಾರರ ಮೇಲೆ ದಾಳಿ ನಡೆಸಿದ ಪಾವಗಡ ಪೊಲೀಸರು ಆಟದಲ್ಲಿ ನಿರತರಾಗಿದ್ದ 7 ಮಂದಿಯನ್ನು ಬಂಧಿಸಿ ಅವರಲ್ಲಿದ್ದ 8 ಸಾವಿರ ರು. ನಗದು ಮತ್ತು ಒಂದು ಮಾರುತಿ ಕಾರು, 4 ಬೈಕ್, 6 ಮೊಬೈಲ್ ಸೇರಿ ಒಟ್ಟು 4.5 ಲಕ್ಷ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪುರಸಭೆ ಮಾಜಿ ಸದಸ್ಯ ನಾಗೇಶ್, ವಿ.ಎಸ್. ಕಾನ್ವೆಂಟ್ನ ಮುತ್ಯಾಲಪ್ಪ, ಗಂಗಾಧರ್, ಬ್ರಹ್ಮೇಂದ್ರಕುಮಾರ್, ರಾಮಕೃಷ್ಣಪ್ಪ, ಹನುಮಂತರಾಯಪ್ಪ, ಬಾಬು ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ಪುರಸಭೆ ಸದಸ್ಯ ಬಾಲು ತಲೆಮರೆಸಿಕೊಂಡಿದ್ದಾರೆ. ಪಟ್ಟಣದ ಹೊರವಲಯದ ದಾಳಿಂಬೆ ತೋಟದಲ್ಲಿ ಆಟವಾಡುತ್ತಿದ್ದಾಗ ಭಾನುವಾರ ಸಂಜೆ ಸಿಪಿಐ ಭಾನುಪ್ರಕಾಶ್, ಪಿಎಸ್ಐ ರಾಮಕೃಷ್ಣಯ್ಯ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದರು.
'ಅಗ್ಗದ ಮದ್ಯ ಮರುಚಿಂತನೆ ಮಾಡಿ ಸಿಎಂ'
ಹಾಸನ: ಅಗ್ಗದ ಮದ್ಯದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮರುಚಿಂತನೆ ಮಾಡಬೇಕೆಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ.ಶಿವಣ್ಣ ತಿಳಿಸಿದ್ದಾರೆ. ಗಾಂಧೀಜಿಯವರ ಆಶಯ, ತತ್ವ ಸಿದ್ಧಾಂತಗಳಿಗೆ ವ್ಯತಿರಿಕ್ತವಾಗಿದೆ. ಸುಖೀ ಸಮಾಜ ನಿರ್ಮಾಣಕ್ಕೆ ಸಂಪೂರ್ಣ ಮದ್ಯಪಾನ ನಿಷೇಧವಾಗಬೇಕು ಎಂದಿದ್ದಾರೆ. ಕುಡಿತದ ಅಮಲಿನಿಂದಾಗುತ್ತಿರುವ ಕೊಲೆ, ಸುಲಿಗೆ, ಅತ್ಯಾಚಾರಗಳ ಬಗ್ಗೆ ಪ್ರತಿದಿನ ಮಾಧ್ಯಮಗಳ ಮೂಲಕ ತಿಳಿಯುತ್ತೇವೆ. ಹೀಗಿದ್ದೂ ಮುಖ್ಯಮಂತ್ರಿಗಳು ನೀಡಿರುವ ಹೇಳಿಕೆ ಸಾಮಾಜಿಕ ಪರಿವರ್ತನೆಗೆ ವ್ಯತಿರಿಕ್ತವಾಗಿದೆ.ಈ ಕಾರಣದಿದಂ ಮುಖ್ಯಮಂತ್ರಿಗಳು ಅಗ್ಗದ ಮದ್ಯದ ಯೋಚನೆ ಕೈ ಬಿಟ್ಟು ಸಂಪೂರ್ಣ ಮದ್ಯಪಾನ ನಿಷೇಧದ ಬಗ್ಗೆ ಚಿಂತನೆ ಮಾಡಿ ಉತ್ತಮ ನಾಗರಿಕ ಸಮಾಜದ ಹರಿಕಾರರಾಗಲೆಂದು ಆಗ್ರಹಿಸಿದ್ದಾರೆ.
ನೀಲಕಂಠೇಶ್ವರ ಸ್ವಾಮಿ ಉತ್ಸವ
ತುಮಕೂರು: ತುಮಕೂರಿನ ಹೊರಪೇಟೆಯಲ್ಲಿರುವ ನೀಲಕಂಠೇಶ್ವರಸ್ವಾಮಿ ಉತ್ಸವ ಇತ್ತೀಚೆಗೆ ನಡೆಯಿತು. ನೀಲಕಂಠೇಶ್ವರಸ್ವಾಮಿ ಟ್ರಸ್ಟ್ ವತಿಯಿಂದ ಏರ್ಪಾಟಾಗಿದ್ದ ಈ ಉತ್ಸವ ವಿವಿಧ ಕಲಾ ತಂಡಗಳೊಂದಿಗೆ ಯಶಸ್ವಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಟಿ.ಎಚ್. ಶಿವಾನಂದ್, ಟಿ.ಪಿ. ನರಸಿಂಹಮೂರ್ತಿ, ಎಸ್.ವಿ. ವೆಂಕಟೇಶ್, ಎಲ್.ಸಿ. ಗೋಪಾಲಯ್ಯ, ಪ್ರಕಾಶ್, ಸೋಮಶೇಖರ್, ದೀಪು ಇತರರು ಉಪಸ್ಥಿತರಿದ್ದರು.
ಪ್ರಸನ್ನ ಕಶ್ಯಪ್ ನೇಮಕ
ತುಮಕೂರು: ತುಮಕೂರು ನಗರ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯನ್ನಾಗಿ ಎಸ್ಐಟಿ ಬಡಾವಣೆಯ ಟಿ.ಎನ್. ಪ್ರಸನ್ನ ಕಶ್ಯಪ್ ಅವರನ್ನು ನೇಮಿಸಿರುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್. ಷಫಿ ಅಹಮದ್ ತಿಳಿಸಿದ್ದಾರೆ. ಅವರು ಈ ಕುರಿತು ಹೇಳಿಕೆ ನೀಡಿದ್ದಾರೆ.
ರಮೇಶ್ ನೇಮಕ
ತುಮಕೂರು: ತುಮಕೂರಿನ ಅಶೋಕ ನಗರದ ಎಲ್. ರಮೇಶ್ ಅವರನ್ನು ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಎಸ್.ಸಿ. ಘಟಕದ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಆದೇಶಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್. ಷಫಿ ಅಹಮದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಣ್ಣು, ಬ್ರೆಡ್ ವಿತರಣೆ
ತುಮಕೂರು: ತುಮಕೂರಿನ ವಾಸವಿ ಯುವಜನ ಸಂಘದ ವತಿಯಿಂದ 44 ನೇ ವರ್ಷದ ವಾಸವಿ ಜಯಂತಿ ಅಂಗವಾಗಿ ಜಿಲ್ಲಾಸ್ಪತ್ರೆಯಲ್ಲಿ ಹಣ್ಣು, ಬ್ರೆಡ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಟಿ.ಎಸ್. ಶಶಿಕುಮಾರ್, ಯುವಜನ ಸಂಘದ ಅಧ್ಯಕ್ಷ ಬಿ. ಅಮರ್ನಾಥ್, ರಾಘವೇಂದ್ರ, ನವೀನ್ ಇತರರು ಉಪಸ್ಥಿತರಿದ್ದರು.