ಎಷ್ಟೇ ಸಮಸ್ಯೆಗಳಿದ್ದರೂ ವಾರಕ್ಕೆರಡು ಶಿರಾ ಭೇಟಿ
ಕ.ಪ್ರ.ವಾರ್ತೆ ಶಿರಾ ಮೇ 26
ಎಷ್ಟೇ ಸಮಸ್ಯೆಗಳಿದ್ದರೂ ವಾರಕ್ಕೆರಡು ಬಾರಿ ಶಿರಾ ಕ್ಷೇತ್ರಕ್ಕೆ ಭೇಟಿ ನೀಡಿ ಜನತೆಯ ಸಮಸ್ಯೆ ಆಲಿಸುವುದಾಗಿ ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಭರವಸೆ ನೀಡಿದರು.
ಅವರು ಸಚಿವರಾದ ನಂತರ ಮೊದಲ ಬಾರಿಗೆ ಶಿರಾಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಚಿವರಾದ ನಂತರ ಕ್ಷೇತ್ರಕ್ಕೆ ತಡವಾಗಿ ಭೇಟಿ ನೀಡುತ್ತಿರುವುದಕ್ಕೆ ಕ್ಷಮೆಯಾಚಿಸುವುದಾಗಿ ತಿಳಿಸಿದ ಅವರು, ಶಿರಾದ ಇತಿಹಾಸದಲ್ಲಿ ಸತತವಾಗಿ ಎರಡನೇ ಬಾರಿ ಶಾಸಕರಾದ ಉದಾಹರಣೆಯಿಲ್ಲ. ತಮಗೆ ಆ ಭಾಗ್ಯ ಲಭಿಸಿದೆ. ಶಿರಾದ ಜನತೆ ತಮ್ಮನ್ನು ಗೆಲ್ಲಿಸುವ ಮೂಲಕ ಇತಿಹಾಸ ಬರೆದಿದ್ದಾರೆ. ಜನತೆಗೆ ಕೃತಜ್ಞರಾಗಿರುವುದಾಗಿ ತಿಳಿಸಿದ ಜಯಚಂದ್ರ, ಜನತೆಯ ಮನೆ ಬಾಗಿಲಿಗೆ ತೆರಳಿ ಸಮಸ್ಯೆ ಇತ್ಯರ್ಥಕ್ಕೆ ಶ್ರಮಿಸುವುದಾಗಿ ಘೋಷಿಸಿದರು.
ಆಡಳಿತ ಬೆಂಗಳೂರಿನಲ್ಲಿ ಕೇಂದ್ರೀಕರಣಗೊಳ್ಳುವುದು ತಮಗಿಷ್ಟವಿಲ್ಲ. ಮಂತ್ರಿಯಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ತಮಗೆ ಮಹತ್ತರ ಜವಾಬ್ದಾರಿಗಳಿವೆ. ಜವಾಬ್ದಾರಿಗಳ ನಡುವೆ ವಾರಕ್ಕೆರಡು ಬಾರಿ ಶಿರಾಕ್ಕೆ ಭೇಟಿ ನೀಡುವುದಾಗಿಯೂ, ಆಡಳಿತ ರಾಜಧಾನಿಯಲ್ಲೂ ಇರಲಿ, ಹಳ್ಳಿಯಲ್ಲೂ ಇರಲಿ ಎಂಬುದು ತಮ್ಮ ಆಶಯ ಎಂದು ಜಯಚಂದ್ರ ತಿಳಿಸಿದರು.
ನೀರಾವರಿ ಖಾತೆ ಸಿಕ್ಕಿಲ್ಲ: ಜನತೆಯ ನಿರೀಕ್ಷೆಯಂತೆ ತಮಗೆ ನೀರಾವರಿ ಖಾತೆ ಸಿಕ್ಕಿಲ್ಲ ಎಂಬುದು ನಿಜ. ಆದರೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದು ತಮ್ಮ ಮೊದಲ ಆದ್ಯತೆ. ಇದೇ ತಮ್ಮ ಹೆಗ್ಗುರಿ ಎಂದು ಜಯಚಂದ್ರ ತಿಳಿಸಿದರು.
ಮೈಸೂರು ಪಾಕ್ನಿಂದ ತುಲಾಭಾರ: ಶಿರಾದ ಕಾಂಗ್ರೆಸ್ ನಗರಸಭಾ ಸದಸ್ಯ ಚಾಂದ್ ಪಾಷಾ ಅವರ ನಿವಾಸಕ್ಕೆ ಭೇಟಿ ನೀಡಿದ ವೇಳೆ ಜಯಚಂದ್ರ ಅವರಿಗೆ ಮೈಸೂರು ಪಾಕ್ನಿಂದ ತುಲಾಭಾರ ನಡೆಸಲಾಯಿತು. ನಂತರ ಜಯಚಂದ್ರ ಶಿರಾ ತಾಲೂಕಿನ ದೊಡ್ಡಆಲದಮರ, ಬಾಲೇನಹಳ್ಳಿ ದೇವಸ್ಥಾನ, ಮಾಗೋಡು ರಂಗನಾಥಸ್ವಾಮಿ ದೇವಾಲಯ ಸೇರಿದಂತೆ ಇತರೆ ಸ್ಥಳಗಳಿಗೆ ಭೇಟಿ ನೀಡಿ ಬೆಂಗಳೂರಿಗೆ ವಾಪಸಾದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಶಶಿಧರಗೌಡ, ಜಿಪಂ ಸದಸ್ಯ ಅರೆಹಳ್ಳಿ ರಮೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಂದಕುಂಟೆ ರವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾವೇರಿ ಸಮಸ್ಯೆ ಇತ್ಯರ್ಥಕ್ಕೆ ಪ್ರಧಾನಿ ಭೇಟಿ
ತುಮಕೂರು: ಕಾವೇರಿ ಸಮಸ್ಯೆ ಇತ್ಯರ್ಥಕ್ಕೆ ಒತ್ತು ನೀಡುವುದಾಗಿ, ಇನ್ನು 4 -5 ತಿಂಗಳಲ್ಲಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಯತ್ನಿಸುವುದಾಗಿ ಸಚಿವ ಟಿ.ಬಿ. ಜಯಚಂದ್ರ ಭರವಸೆ ನೀಡಿದರು. ಅವರು ಶಿರಾಕ್ಕೆ ಸಚಿವರಾದ ನಂತರ ಮೊದಲ ಬಾರಿಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕೂಲಂಕಶವಾಗಿ ಪ್ರತಿಪಕ್ಷಗಳೊಂದಿಗೆ ಚರ್ಚಿಸುವುದಾಗಿಯೂ, ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಸಮಗ್ರವಾಗಿ ಚರ್ಚಿಸುವುದಾಗಿಯೂ ತಿಳಿಸಿದರು. ಕಾವೇರಿ ಸಮಸ್ಯೆ ಕುರಿತಂತೆ ಪ್ರಧಾನಿ ಹಾಗೂ ಕಾನೂನು ಸಚಿವರೊಂದಿಗೆ ಚರ್ಚಿಸಲು ಶೀಘ್ರದಲ್ಲೇ ದೆಹಲಿಗೆ ಭೇಟಿ ನೀಡುವುದಾಗಿ ಸಚಿವರು ತಿಳಿಸಿದರು. ಮುಂದಿನ ವಿಧಾನಸಭಾ ಅಧಿವೇಶನದ ವೇಳೆ ಕಾಂಗ್ರೆಸ್ ನೀತಿ ಕುರಿತಂತೆ ಜನತೆಗೆ ಸಮಗ್ರ ಮಾಹಿತಿ ದೊರಕಲಿದೆ ಎಂದು ಜಯಚಂದ್ರ ತಿಳಿಸಿದರು.
ಜಿಲ್ಲಾ ಕೇಂದ್ರವಾಗಿ ಶಿರಾ
ತುಮಕೂರು: ಶಿರಾ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಪ್ರಯತ್ನಿಸುವುದಾಗಿ ಶಿರಾ ಶಾಸಕ ಹಾಗೂ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು. ಅವರು ಶಿರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಿರಾದಲ್ಲಿ ಮಿನಿ ವಿಧಾನಸೌಧ ಕಟ್ಟಲು ಶ್ರಮಿಸುವುದಾಗಿ, ತಾಲೂಕು ಕೇಂದ್ರವಾಗಿರುವ ಶಿರಾವನ್ನು ಜಿಲ್ಲಾ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವ ಇರಾದೆ ತಮಗಿದೆ ಎಂದು ತಿಳಿಸಿದರು.