ಜೂ. 25 ರಂದು ಶಿರಾ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಕ.ಪ್ರ. ವಾರ್ತೆ ಶಿರಾ ಮೇ 26
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜೂನ್ 25 ರಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದ್ದು ಸಮ್ಮೇಳನ ಅಧ್ಯಕ್ಷರಾಗಿ ಪತ್ರಕರ್ತ ಹಾಗೂ ಸಾಹಿತ್ಯ ಪೋಷಕರಾದ ಎಸ್.ನಾಗಣ್ಣ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ವೈ.ನರೇಶ್ ಬಾಬು ತಿಳಿಸಿದರು.
ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮ್ಮೇಳನಾಧ್ಯಕ್ಷರ ಆಯ್ಕೆ ಕುರಿತು ಗೊಂದಲವನ್ನು ಸೃಷ್ಟಿಸುವುದು ಬೇಡ ಎಂದು ತಿಳಿಸಿ ಒಂದು ವಾರದ ಹಿಂದೆ ತಾಲೂಕು ಕಸಾಪ ಸಮ್ಮೇಳನ ನಡೆಸಲು ಪೂರ್ವಭಾವಿ ಸಭೆಯೊಂದನ್ನು ನಡೆಸಲಾಯಿತು. ತಾಲೂಕಿನ ಹಲವು ಆಜೀವ ಸದಸ್ಯರು ಹಿರಿಯ ಅನೇಕ ಸಾಹಿತಿಗಳು ಉಪಸ್ಥಿತರಿದ್ದ ಈ ಸಭೆಯಲ್ಲಿ 13 ಕ್ಕೂ ಹೆಚ್ಚು ಮಂದಿ ಸಮ್ಮೇಳನಾಧ್ಯಕ್ಷರ ಆಯ್ಕೆ ಬಗ್ಗೆ ಹೆಸರು ಪ್ರಸ್ತಾಪಿಸಿದರು. ಕವಿ ಎಲ್.ರಂಗನಾಥ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಪ್ರೊ. ಕೆ.ಹನುಮಂತರಾಯಪ್ಪ, ಲೇಖಕಿ ತಾ.ಸಾ. ಪುಷ್ಪ ಸೇರಿದಂತೆ ಹಲವರ ಹೆಸರುಗಳು ಪ್ರಸ್ತಾಪವಾದವು. ಈ ಸಂದರ್ಭದಲ್ಲಿ ಹಾಜರಿದ್ದ ಎಲ್ಲಾ ಹಿರಿಯರು ಪತ್ರಕರ್ತ ಎಸ್.ನಾಗಣ್ಣ ಇದೇ ತಾಲೂಕಿನವರು. ಜಿಲ್ಲಾ ಮಟ್ಟದಲ್ಲಿ ಅನೇಕ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಮುಂದಾಳತ್ವ ವಹಿಸಿ ಕ್ರಿಯಾಶೀಲತೆ ಮೆರೆದ ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡುವ ಬಗ್ಗೆ ಇಡೀ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ಮೂಡಿದ ಕಾರಣ ಎಸ್.ನಾಗಣ್ಣ ಅವರನ್ನು ಆಯ್ಕೆ ಮಾಡಲಾಯಿತು ಎಂದು ವೈ.ನರೇಶ್ ತಿಳಿಸಿದರು.
ಪರಿಷತ್ತಿನ ಆಜೀವ ಸದಸ್ಯ ಹಾಗೂ ಪ್ರಾಚಾರ್ಯ ಪಿ.ಎಚ್.ಮಹೇಂದ್ರಪ್ಪ ಮಾತನಾಡಿ ಸಮ್ಮೇಳಾಧ್ಯಕ್ಷರ ಹೆಸರನ್ನು ಪ್ರಸ್ತಾಪಿಸುವಾಗ ಹಾಜರಿದ್ದ ಪ್ರೊ. ಕೆ.ಹನುಮಂತರಾಯಪ್ಪ, ಲೇಖಕಿ ತಾ.ಸಾ. ಪುಷ್ಪ ಕೂಡ ಮಾತನಾಡಿ ಅಧ್ಯಕ್ಷ ಸ್ಥಾನಕ್ಕೆ ಎಸ್.ನಾಗಣ್ಣ ಅವರೇ ಸೂಕ್ತವೆಂದು ಸಲಹೆ ನೀಡಿದರು ಎಂದರು.
ಸುದ್ದಿಗೋಷ್ಠಿಯಲ್ಲಿ ಕಸಾಪ ಕಾರ್ಯದರ್ಶಿ ಕೋಟೆ ಚಂದ್ರಶೇಖರ್, ಖಜಾಂಚಿ ರಾಜ್‌ಕುಮಾರ್, ರಂಗಕರ್ಮಿ ಚಲಪತಿ, ಕಳ್ಳಂಬೆಳ್ಳ ಜಯರಾಂ, ಆರ್.ಲಕ್ಷ್ಮಣ್, ನವೋದಯ ವೇದಿಕೆಯ ಜಯರಾಮಕೃಷ್ಣ, ಬರಗೂರು ಚಂದ್ರಾಚಾರ್, ರೇಣುಕಾನಂದ ಮತ್ತಿತರರು ಹಾಜರಿದ್ದರು.