ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತಿಪಟೂರನ್ನು ಬರಗಾಲ ಪೀಡಿತ ತಾಲೂಕನ್ನಾಗಿ ಘೋಷಿಸಿ

Srinivasa Murthy VN
Updated On : 26 May 2013, 11:22 am

ಕ.ಪ್ರ. ವಾರ್ತೆ ತಿಪಟೂರು ಮೇ 26
ಕಳೆದ ವರ್ಷ ಮಳೆ ಬಾರದೆ ಮುಂಗಾರು ಮತ್ತು ಹಿಂಗಾರು ಸಂಪೂರ್ಣ ವಿಫಲವಾಗಿ ತಾಲೂಕು ಬರಗಾಲಕ್ಕೆ ತುತ್ತಾಗಿದೆ. ಈ ವರ್ಷದ ಪೂರ್ವ ಮುಂಗಾರೂ ಸಂಪೂರ್ಣ ವಿಫಲವಾಗಿರುವ ಪ್ರಯುಕ್ತ ರೈತರು ಸಂಕಷ್ಟಕ್ಕೀಡಾಗಿದ್ದು, ಜಾನುವಾರುಗಳಿಗೆ ಮೇವು-ನೀರು ಇಲ್ಲದಂತಾಗಿ ಪರಿತಪಿಸುವಂತಾಗಿದೆ. ತಾಲೂಕಿನ ಜೀವನಾಡಿ ಬೆಳೆ ತೆಂಗು ಬರಗಾಲಕ್ಕೆ ತುತ್ತಾಗಿ ರೈತರು ತೀವ್ರ ನಷ್ಠಕ್ಕೀಡಾಗಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೆ ತಾಲೂಕನ್ನು ಬರಗಾಲ ಪೀಡಿತ ತಾಲೂಕೆಂದು ಘೋಷಿಸಬೇಕೆಂದು ಕೆಜೆಪಿ ಮುಖಂಡ ಲೋಕೇಶ್ವರ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಕೆಜೆಪಿ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 3-4 ವರ್ಷಗಳಿಂದ ಮಳೆಯಿಲ್ಲದೆ ಯಾವುದೇ ಕೆರೆಕಟ್ಟೆಗಳಲ್ಲಿ ನೀರಿಲ್ಲ. ಅಂತರ್ಜಲ ಸಂಪೂರ್ಣ ಬತ್ತಿಹೋಗಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಗ್ರಾಮಗಳಲ್ಲಿರುವ ಬೋರ್‌ವೆಲ್ ನೀರನ್ನೇ ಜಾನುವಾರುಗಳು ಆಶ್ರಯಿಸಬೇಕಾಗಿರುವುದರಿಂದ ಕೂಡಲೆ ಪ್ರತಿ ಗ್ರಾಮಕ್ಕೆ ಎರಡು ತೊಟ್ಟಿಗಳನ್ನು ಕಟ್ಟುವ ಮೂಲಕ ಜಾನುವಾರುಗಳಿಗೆ ನೀರೊದಗಿಸಬೇಕು. ಮೇವಿಲ್ಲದೆ ರೈತರು ಜಾನುವಾರುಗಳನ್ನು ಕೇಳಿದಷ್ಟು ಬೆಲೆಗೆ ಮಾರುವ ಪರಿಸ್ಥಿತಿ ಬಂದೊದಗಿದ್ದು, ಸರ್ಕಾರ ಕೂಡಲೇ ಎರಡು ಗ್ರಾ.ಪಂಗೆ ಒಂದರಂತೆ ಗೋಶಾಲೆಗಳನ್ನು ಪ್ರಾರಂಭಿಸುವ ಮೂಲಕ ರೈತರಿಗೆ ನೆರವಾಗುವುದಲ್ಲದೆ ಗೋಸಂಪತ್ತನ್ನು ಉಳಿಸಿ ಬೆಳೆಸುವತ್ತ ದಿಟ್ಟ ಹೆಜ್ಜೆ ಇಡಬೇಕೆಂದು ಲೋಕೇಶ್ವರ ಒತ್ತಾಯಿಸಿದರು.
ನಫೆಡ್‌ನಿಂದ ಕೊಬ್ಬರಿ ಖರೀದಿ: ಕಳೆದ 15ವರ್ಷಗಳಿಂದಲೂ ಕೊಬ್ಬರಿ 4 ಸಾವಿರ ಆಸುಪಾಸಿನಲ್ಲಿದ್ದು, ಈಗಲೂ ಕ್ವಿಂಟಾಲ್ ಕೊಬ್ಬರಿಗೆ 4500 ರು.ಬೆಲೆ ಇದೆ. ಆದರೆ ರೈತರ ಅಗತ್ಯ ವಸ್ತುಗಳು ಸೇರಿದಂತೆ  ಡೀಸೆಲ್, ಪೆಟ್ರೋಲ್, ಗೊಬ್ಬರ ಎಲ್ಲವುಗಳ ದರಗಳು ನಾಲ್ಕೈದು ಪಟ್ಟು ಹೆಚ್ಚಾಗಿವೆ. ಆದರೆ ಕೊಬ್ಬರಿ ಬೆಲೆ ಮಾತ್ರ ಹೆಚ್ಚಳವಾಗಿಲ್ಲ. ಕೇಂದ್ರ ಸರ್ಕಾರ ಕೊಬ್ಬರಿಗೆ ಅವೈಜ್ಞಾನಿಕವಾಗಿ ಬೆಂಬಲ ಬೆಲೆ 5550 ರು. ನಿಗದಿಪಡಿಸಿದ್ದು, ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿದ್ದರೂ ಸರ್ಕಾರ ರೈತರ ನೆರವಿಗೆ ಧಾವಿಸಿ, ನಫೆಡ್ ಮೂಲಕ ಕೊಬ್ಬರಿ ಕೊಳ್ಳುವ ವ್ಯವಸ್ಥೆ ಮಾಡಿಲ್ಲ. ಈ ಬಗ್ಗೆ ಕೊಬ್ಬರಿ ಬೆಳೆಯುವ ಪ್ರದೇಶದ ಜನಪ್ರತಿನಿಧಿಗಳು ನಫೆಡ್ ಖರೀದಿ ಕೇಂದ್ರವನ್ನು  ಕೊಬ್ಬರಿ ಮಾರುಕಟ್ಟೆಗಳಲ್ಲಿ ಶಾಶ್ವತವಾಗಿ ತೆರೆಯುವಂತೆ ಸರ್ಕಾರವನ್ನು ಒತ್ತಾಯಿಸಬೇಕೆಂದು ಆಗ್ರಹಿಸಿದರು.
ಸಾಲಮನ್ನಾ: ಪ್ರಮುಖ ವಾಣಿಜ್ಯ ಬೆಳೆಯಾದ ಲಕ್ಷಾಂತರ ತೆಂಗಿನ ಮರಗಳು ತಾಲೂಕಿನಾದ್ಯಂತ ಒಣಗಿ ಹೋಗಿದ್ದು, ಕೊಬ್ಬರಿ ಬೆಳೆ ಹಾಗೂ ಬೆಲೆ ಎರಡೂ ರೈತರಿಗೆ ಕೈಕೊಟ್ಟಿರುವುದರಿಂದ ಜೀವನ ಸಾಗಿಸುವುದೇ ಕಷ್ಟವಾಗಿದೆ. ಆದ್ದರಿಂದ ಕೂಡಲೆ ನೂತನ ಸರ್ಕಾರ ಪಿಎಲ್‌ಡಿ, ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕ್‌ಗಳು ನೀಡಿರುವ ಬೆಳೆ,  ಟ್ರ್ಯಾಕ್ಟರ್ ಸಾಲ ಸೇರಿದಂತೆ ರೈತರ ಯಾವುದೇ ಸಾಲಗಳ ವಸೂಲಿಗೆ ಮುಂದಾಗದೆ ಅವರ ಸಂಪೂರ್ಣ ಸಾಲ ಮನ್ನಾ ಘೋಷಿಸಿ, ಈ ಬಗ್ಗೆ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ತಾಲೂಕಿನ ರೈತರ ನೆರವಿಗೆ ಧಾವಿಸಬೇಕಾಗಿದೆ ಎಂದು ಒತ್ತಾಯಿಸಿದರು.
ಮೇ 5ರಂದು ನಡೆದ ಚುನಾವಣೆಯಲ್ಲಿ ಕ್ಷೇತ್ರದ ವೀರಶೈವ ಮತಬಾಂಧವರು ಹೆಚ್ಚಿನ ಮತಗಳನ್ನು ಕೆಜೆಪಿ ಅಭ್ಯರ್ಥಿಯಾಗಿದ್ದ ನನಗೆ ನೀಡಿದ್ದಾರೆಂದು ಶಾಸಕ ಕೆ. ಷಡಕ್ಷರಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಮತಗಟ್ಟೆವಾರು ಮತದಾನಪಟ್ಟಿ ಪರಿಶೀಲಿಸಿದಾಗ ನನಗಿಂತ ಹೆಚ್ಚಿನ ವೀರಶೈವ ಮತಗಳು ಕಾಂಗ್ರೆಸ್ ಪರವಾಗಿ ಬಿದ್ದಿವೆ. ತಾಲೂಕಿನ ಪ್ರಜ್ಞಾವಂತ ಮತದಾರರು ಯಾವುದೇ ಒಂದು ಪಕ್ಷಕ್ಕೆ ಒಲವು ತೋರಿಸಿಲ್ಲ. ಎಲ್ಲಾ ಪಕ್ಷಗಳಿಗೂ ಮತ ನೀಡಿದ್ದಾರೆ. ಆದರೆ ಕಾಂಗ್ರೆಸ್‌ಗೆ ಅತಿಹೆಚ್ಚಿನ ಅನುಕಂಪದ ಮತಗಳು ಬಿದ್ದಿವೆ ಎಂದು ವಿವರಿಸಿದರಲ್ಲದೆ, 30 ವರ್ಷಗಳಿಂದ ಯಾವುದೇ ರಾಷ್ಟ್ರೀಯ ಪಕ್ಷಗಳು ಈವರೆಗೆ ದಲಿತರೊಬ್ಬರನ್ನು ತಾಲೂಕು ಅಧ್ಯಕ್ಷರನ್ನಾಗಿ ನೇಮಕ ಮಾಡಿಲ್ಲ. ಆದರೆ ತಾಲೂಕು ಕೆಜೆಪಿ ಅಂತಹ ಕೆಲಸ ಮಾಡಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement