ಪುರಸಭೆಗೆ ಸೇರಿದ ಸ್ವತ್ತು ಸ್ವಾಧೀನ ಪಡಿಸಿಕೊಳ್ಳಲು ಯತ್ನ
ಕ.ಪ್ರ. ವಾರ್ತೆ ಕುಣಿಗಲ್ ಮೇ 26
ಪುರಸಭೆಗೆ ಸೇರಿದ ಬಾವಿ ಹಾಗೂ ಸ್ವತ್ತನ್ನು ಖಾಸಗಿ ವ್ಯಕ್ತಿಯೊಬ್ಬರು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿ, ಸಾರ್ವಜನಿಕರ ಆಕ್ಷೇಪದ ನಡುವೆ, ವಾದ-ವಿವಾದ ನಡೆದು ಗೊಂದಲದ ಸ್ಥಿತಿ ನಿರ್ಮಾಣವಾಗಿ, ತಹಸೀಲ್ದಾರ್ ಮಧ್ಯಪ್ರವೇಶದಿಂದ ಪರಿಸ್ಥಿತಿ ತಾತ್ಕಾಲಿಕವಾಗಿ ತಣ್ಣಗಾದ ಘಟನೆ ಪಟ್ಟಣದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.
13ನೇ ವಾರ್ಡ್ನಲ್ಲಿ ತುಮಕೂರು ರಸ್ತೆಗೆ ಹೊಂದುಕೊಂಡಂತೆ ಪುರಸಭೆಗೆ ಸೇರಿದ ತೆರದಬಾವಿ ಹಾಗೂ ನಿವೇಶನವಿದ್ದು, ಸದರಿ ಪ್ರದೇಶವು ತಮ್ಮದಾಗಿದೆ ಎಂದು ಖಾಸಗಿ ವ್ಯಕ್ತಿಯೊಬ್ಬ, ಪ್ರತಿಪಾದಿಸಿ, ಬಾವಿ ಮುಚ್ಚಲು ಕಳೆದ ಕೆಲದಿನದ ಹಿಂದೆ ಮುಂದಾಗಿದ್ದರು. ಆಗ ಸಾರ್ವಜನಿಕರು, ವಾರ್ಡ್ನ ನೂತನ ಪುರಸಭೆಸದಸ್ಯೆ ಜಯಶೀಲ, ಮುಖಂಡರಾದ ನಾಗರಾಜ್, ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಹರೀಶ್, ಮಧ್ಯಪ್ರವೇಶಿಸಿ ಪುರಸಭೆ ಸ್ವತ್ತಿನ ಸಂರಕ್ಷಣೆಯಾಗಬೇಕೆಂದು ಆಗ್ರಹಿಸಿ, ತಡೆಯೊಡ್ಡಿ, ಮುಖ್ಯಾಧಿಕಾರಿ, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಸ್ವಾಧೀನ ಪ್ರಕ್ರಿಯೆಯನ್ನು ನಿಲ್ಲಿಸಿದ್ದರು.
ಗೊಂದಲದ ವಾತಾವರಣ: ಕಳೆದ ಹಲವು ದಿನಗಳಿಂದ ಪುರಸಭೆ ಸ್ವತ್ತಿನ ಸಂರಕ್ಷಣೆ ನಿಟ್ಟಿನಲ್ಲಿ ಪುರಸಭೆ ಮುಖ್ಯಾಧಿಕಾರಿ, ಕಂದಾಯ ನಿರೀಕ್ಷಕ ಸೇರಿದಂತೆ ಸಿಬ್ಬಂದಿ ನಿರ್ಲಕ್ಷ್ಯವಹಿಸಿದ ಕಾರಣ, ರಜೆ ದಿನವಾದ ಭಾನುವಾರ ಬೆಳಿಗ್ಗೆ ಪುರಸಭೆ ಬಾವಿ ಮುಚ್ಚಲು ಖಾಸಗಿ ವ್ಯಕ್ತಿ ಮುಂದಾದರು. ಇದನ್ನು ಸ್ಥಳೀಯರು ಆಕ್ಷೇಪಿಸಿ ಪ್ರಶ್ನಿಸಿದಾಗ, ಖಾಸಗಿ ವ್ಯಕ್ತಿಯ ಕಡೆಯವರು ಸ್ಥಳೀಯರ ಮೇಲೆ ಹಲ್ಲೆಗೆ ಮುಂದಾದಾಗ, ಸ್ಥಳೀಯರು ತೀವ್ರ ಪ್ರತಿಭಟಿಸಿ, ಪ್ರತ್ಯುತ್ತರ ನೀಡಲು ಮುಂದಾದರು. ಇದರಿಂದ ಪ್ರದೇಶದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
ವಿಷಯ ತಿಳಿದು ಪುರಸಭೆ ಮಾಜಿ ಅಧ್ಯಕ್ಷ, ಸದಸ್ಯ ಕೆ.ಎಲ್.ಹರೀಶ್, ಪ್ರಮುಖರಾದ ನಾಗರಾಜ್, ರಾಜು ಇತರರು ಸ್ಥಳಕ್ಕೆ ತೆರಳಿ, ಮುಖ್ಯಾಧಿಕಾರಿಗೆ ಕರೆ ಮಾಡಿದಾಗ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ವಿಧಿ ಇಲ್ಲದೆ ತಹಸೀಲ್ದಾರ್ ಅವರ ಗಮನಕ್ಕೆ ತಂದ ಮೇರೆಗೆ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಜಗದೀಶ್, ಸದರಿ ಸ್ವತ್ತಿನ ಮಾಲೀಕತ್ವದ ಇತ್ಯರ್ಥವಾಗುವವರೆಗೂ ಯಾವುದೇ ಕಾಮಗಾರಿ ನಿರ್ವಹಿಸದಂತೆ ಆದೇಶ ನೀಡಿದ ಮೇರೆಗೆ ಪರಿಸ್ಥಿತಿ ತಾತ್ಕಾಲಿಕವಾಗಿ ತಣ್ಣಗಾಯಿತು.
ಅಸಮಾಧಾನ: ಪುರಸಭೆಯ ಅಯಕಟ್ಟಿನ ಅಧಿಕಾರಿಗಳ್ಯಾರು ಸ್ಥಳಕ್ಕೆ ಬಾರದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹರೀಶ್, ಪುರಸಭೆ ಸ್ವತ್ತಿನ ಸಂರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿ,
ಕಂದಾಯಾಧಿಕಾರಿಗಳಿಗೆ ಮನವಿ ನೀಡಿ ಹಲವು ದಿನಗಳೇ ಆಗಿವೆ. ಆದರೆ ಯಾವುದೇ ಅಧಿಕಾರಿಗೂ ಬದ್ಧತೆ ಇಲ್ಲ. ಅಧಿಕಾರಿಗಳು ಸದರಿ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು ನಿಜಕ್ಕೂ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ. 1966ರ ಪುರಸಭೆ ದಾಖಲೆಗಳ ಪ್ರಕಾರ ಈ ಸ್ವತ್ತು ಎಲೆಕ್ಟ್ರಿಕ್ ಪಂಪ್ ಹಾಗೂ ನಿವೇಶನ ಎಂದಿದೆ. ಈಗಲೂ ಪುರಸಭೆ ಸ್ವತ್ತು ಅಂತ ದಾಖಲೆ ಇದೆ. ಅದರೆ ಖಾಸಗಿ ವ್ಯಕ್ತಿ ತಮ್ಮದೆಂದು, ಸಾರ್ವಜನಿಕ ಉದ್ದೇಶಕ್ಕೆ ಇರುವ ತೆರೆದ ಬಾವಿಯನ್ನು ರಾಜರೋಷವಾಗಿ ಮುಚ್ಚಲು ಮುಂದಾಗಿದ್ದಾರೆ. ಇದು ಸರಿಯಲ್ಲ ಎಂದರು.
ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ, ಪುರಸಭೆ ಸ್ವತ್ತು ಸಂರಕ್ಷಣೆ ಮಾಡುವಲ್ಲಿ ನಿಜಕ್ಕೂ ವಿಫಲರಾಗಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿ, ತಾ. ದಂಡಾಧಿಕಾರಿ ಖುದ್ದು ಪರಿಶೀಲನೆ ನಡೆಸಿ, ಸಾರ್ವಜನಿಕ ಆಸ್ತಿ ಸಂರಕ್ಷಣೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಸಕಾರಾತ್ಮಕವಾಗಿ ಸ್ಪಂದಿಸಿದ ತಹಸೀಲ್ದಾರ್, ಎರಡೂ ಕಡೆ ದಾಖಲೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರಲ್ಲದೆ, ಸ್ಥಳಕ್ಕೆ ತಡವಾಗಿ ಆಗಮಿಸಿದ ಪಿಎಸೈ ಗುರುಪ್ರಸಾದ್ ಅವರಿಗೆ, ವಿವಾದಿತ ಪ್ರದೇಶದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದರು.