ಕ್ಯಾಟ್‌ಫೀಶ್ ಸಾಕಾಣಿಕೆಯ 3 ಹೊಂಡ ನಾಶ: ತಹಸೀಲ್ದಾರ್ ಕೆ. ರಮೇಶ್
ಮಧುಗಿರಿ: ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಮುದ್ದೇನಹಳ್ಳಿ ಗೇಟ್ ಬಳಿ ಖಾಸಗಿ ಜಮೀನು ಮಾಲೀಕನೊಬ್ಬ 10 ಲಕ್ಷ ಬೆಲೆ ಬಾಳುವ ಕ್ಯಾಟ್‌ಫೀಶ್ ಸಾಕಾಣಿಕೆಗೆ ನಿರ್ಮಿಸಿದ್ದ 3 ಹೊಂಡಗಳನ್ನು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ನಾಶಪಡಿಸಿರುವುದಾಗಿ ಕೆ. ರಮೇಶ್ ತಿಳಿಸಿದರು.
ಜಮೀನು ಮಾಲೀಕ ಭಕ್ತರ್‌ಸಾಬ್ ಎಂಬಾತ ತನ್ನ ಸ್ವಂತ ಜಮೀನಿನಲ್ಲಿ 3 ದೊಡ್ಡ ಹೊಂಡಗಳನ್ನು ತೋಡಿ 15 ಸಾವಿರಕ್ಕೂ ಅಧಿಕ ಕ್ಯಾಟ್‌ಫೀಶ್‌ಗಳನ್ನು ಸಾಕಿದ್ದು, ಈ ಕ್ಯಾಟ್‌ಫೀಶ್‌ಗಳ ಮೌಲ್ಯ 10 ಲಕ್ಷ ಎಂದು ಅಂದಾಜಿಸಿದ್ದು, ಈ ಫೀಶ್‌ಗಳನ್ನು ಇನ್ನು 3-4 ದಿನಗಳ ಒಳಗಾಗಿ ಬಾಂಬೆ ಮಾರುಕಟ್ಟೆಗೆ ಸಾಗಿಸುವ ಯೋಜನೆಯಿತ್ತು ಎಂದು ತಿಳಿದು ಬಂದಿದೆ. ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಗುರುಮೂರ್ತಿ, ಕೊಡಿಗೇನಹಳ್ಳಿ ಪಿಎಸೈ ರಾಜು, ಕಂದಾಯ ತನಿಖಾಧಿಕಾರಿ ಜಯರಾಮಯ್ಯ, ಗ್ರಾಮ ಲೆಕ್ಕಿಗ ಶಿವರಾಮಯ್ಯ ನೇತೃತ್ವದ ತಂಡ ದಾಳಿ ನಡೆಸಿ ನಿಷೇಧಿತ ಕ್ಯಾಟ್‌ಫೀಶ್ ಹೊಂಡ ಮತ್ತು ಫೀಶ್‌ಗಳನ್ನು ನಾಶಪಡಿಸಲಾಗಿದೆ ಎಂದು ತಿಳಿಸಿದರು.
ಮರಳು ಲಾರಿ ವಶ: ಕೊಡಿಗೇನಹಳ್ಳಿ ಹೋಬಳಿ ಕುಮದ್ವತಿ ನದಿ ಪಾತ್ರದ ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ 3 ಲಾರಿಗಳನ್ನು ವೆಂಗಳಮ್ಮನಹಳ್ಳಿ ಸಮೀಪ ವಶಪಡಿಸಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಕೆ. ರಮೇಶ್ ತಿಳಿಸಿದರು.
ದೊಡ್ಡೇರಿ ಹೋಬಳಿ ಗುಬಲಗುಟ್ಟೆ ಹಾಗೂ ವಿವಿಧ ಸ್ಥಳಗಳಲ್ಲಿ ಅಕ್ರಮ ಮರಳು ಸಾಗಾಣೆ ಮಾಡುತ್ತಿದ್ದ 6 ಲಾರಿ ಸೇರಿದಂತೆ ಒಟ್ಟು 9 ಲಾರಿಗಳಲ್ಲಿ ಸಾಗಿಸುತ್ತಿದ್ದ ಲಾರಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಲಾಗಿದೆ ಎಂದು ತಿಳಿಸಿದರು. ದೊಡ್ಡೇರಿ ಉಪ ತಹಸೀಲ್ದಾರ್ ಟಿ. ರಂಗಸ್ವಾಮಿ, ಕಂದಾಯ ತನಿಖಾಧಿಕಾರಿ ಜಯರಾಮಯ್ಯ, ಗ್ರಾಮ ಲೆಕ್ಕಿಗ ಶಿವರಾಮಯ್ಯ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.