ನಿಂತಿದ್ದ ಸ್ಪಿರಿಟ್ ತುಂಬಿದ ಲಾರಿಗೆ ಗೂಡ್ಸ್ ಲಾರಿ ಡಿಕ್ಕಿ
ತುಮಕೂರು: ನಿಂತಿದ್ದ ಸ್ಪಿರಿಟ್ ಲಾರಿಗೆ ಹಿಂಬದಿಯಿಂದ ಬಂದ ಗೂಡ್ಸ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಎರಡೂ ಲಾರಿಗಳು ಬೆಂಕಿಗಾಹುತಿಯಾಗಿ ಲಕ್ಷಾಂತರ ರು. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ತುಮಕೂರು ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರ ಕೋರಾ ಬಳಿ ಗುರುವಾರ ಬೆಳಗಿನ ಜಾವ ಸುಮಾರು 5 ಗಂಟೆಗೆ ನಡೆದಿದೆ.
ಶಿರಾ ಕಡೆಯಿಂದ ಸ್ಪಿರಿಟ್ ತುಂಬಿಕೊಂಡು ಬರುತ್ತಿದ್ದ ಟ್ಯಾಂಕರ್ ಮರಳು ಲಾರಿಗೆ ಡಿಕ್ಕಿ ಹೊಡೆದು ಕೆಟ್ಟು ನಿಂತಿತ್ತು. ಇದೇ ವೇಳೆ ಹಿಂಬದಿಯಿಂದ ಅತಿವೇಗವಾಗಿ ಬಂದ ಎಲೆಕ್ಟ್ರಾನಿಕ್ ಗೂಡ್ಸ್ ತುಂಬಿದ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಟ್ಯಾಂಕರ್‌ನಲ್ಲಿದ್ದ ಸ್ಪಿರಿಟ್ ಹೊರಬಂದು, ಬೆಂಕಿಗಾಹುತಿಯಾಗಿದೆ. ಲಕ್ಷಾಂತರ ರು. ಮೌಲ್ಯದ ಸಾಮಗ್ರಿಗಳು ಸುಟ್ಟು ಕರಕಲಾಗಿವೆ.
ಅಪಘಾತ ಸಂಭವಿಸಿದ ಕೂಡಲೇ ಚಾಲಕರು ಮತ್ತಿತರ ಸಿಬ್ಬಂದಿ ಲಾರಿಯಿಂದ ಇಳಿದು ಓಡಿ ಹೋಗಿದ್ದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸತತ 3 ಗಂಟೆಗಳ ಶ್ರಮಿಸಿ ಬೆಂಕಿ ನಂದಿಸಿದ್ದಾರೆ. ಘಟನೆಯಿಂದಾಗಿ 2 ಗಂಟೆಗಳಿಗೂ ಹೆಚ್ಚು ಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.