ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಕ್ಕಳ ಹಕ್ಕುಗಳಿಗೆ ಹೆಚ್ಚಿನ ಪ್ರಚಾರ ಅಗತ್ಯ

Srinivasa Murthy VN
Updated On : 22 Nov 2013, 12:22 pm

ತುಮಕೂರು: ಮಕ್ಕಳ ಹಕ್ಕುಗಳ ಕುರಿತಂತೆ ಹೆಚ್ಚಿನ ಪ್ರಚಾರ ನೀಡುವ ಅಗತ್ಯವಿದೆ. ಮಕ್ಕಳ ಹಕ್ಕುಗಳು, ಅನಾಥ ಮಕ್ಕಳಿಗಾಗಿ ಇರುವ ಪುನರ್ವಸತಿ ವ್ಯವಸ್ಥೆ ಇತ್ಯಾದಿ ಅವಕಾಶಗಳ ಬಗ್ಗೆ ಸಮಾಜದಲ್ಲಿ ಹೆಚ್ಚೆಚ್ಚು ಪರಿಚಯ ಆಗಬೇಕಿದೆ ಎಂದು ತುಮಕೂರು ವಿವಿ ಸ್ನಾತಕೋತ್ತರ ಸಮಾಜ ಕಾರ್ಯ ಮತ್ತು ಅಧ್ಯಯನ ವಿಭಾಗದ ಅತಿಥಿ ಉಪನ್ಯಾಸಕ ಶಶಿಕಾಂತರಾವ್ ಅಭಿಪ್ರಾಯಪಟ್ಟರು.
   ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರ ಹಾಗೂ ಎಂಪ್ರೆಸ್ ಬಾಲಕಿಯರ ಪದವಿಪೂರ್ವ ಕಾಲೇಜು, ಎನ್‌ಎಸ್‌ಎಸ್ ಘಟಕದ ವತಿಯಿಂದ ಮಕ್ಕಳ ಮೇಲಿನ ದೌರ್ಜನ್ಯ ತಡೆ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ವಿಷಯ ಮಂಡಿಸಿ ಮಾತನಾಡಿದರು.
ನಮ್ಮಲ್ಲಿ ಬಡತನ, ನಿರುದ್ಯೋಗ ಸಮಸ್ಯೆ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹಸಿವು ನೀಗಿಸಿಕೊಳ್ಳಲು ಯಾವುದಾದರೊಂದು ಉದ್ಯೋಗಕ್ಕಾಗಿ ಅಲೆಯಬೇಕು. ಇಂತಹ ಸಂದರ್ಭದಲ್ಲಿ ದೌರ್ಜನ್ಯ ನಿರಂತರವಾಗಿರುತ್ತವೆ. ಈ ಅಸಹಾಯಕತೆಯನ್ನೇ ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.
11 ಕೋಟಿ ಬಾಲ ಕಾರ್ಮಿಕರು: ಮನೆಯಲ್ಲಿನ ಹಲವು ಸಮಸ್ಯೆಗಳಿಂದಾಗಿ ಮಕ್ಕಳು ದುಡಿಮೆಗೆ ಹೋಗುತ್ತಿದ್ದಾರೆ. ದೇಶದಲ್ಲಿಂದು 11 ಕೋಟಿ ಬಾಲಕಾರ್ಮಿಕರಿದ್ದಾರೆ. ಇದನ್ನೆಲ್ಲ ಗಮನಿಸಿಯೇ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಮಕ್ಕಳ ಮೇಲಿನ ದೌರ್ಜನ್ಯ ಸಹಿಸತಕ್ಕ ವಿಷಯವಲ್ಲ. 18 ವರ್ಷದೊಳಗಿನ ಮಕ್ಕಳಿಗಾಗಿ ಬಾಲನ್ಯಾಯ ಕಾಯ್ದೆ ರೂಪುಗೊಂಡಿದೆ. ಅಶಕ್ತ ಮಕ್ಕಳಿಗಾಗಿ ಪುನರ್ವಸತಿ ಕೇಂದ್ರಗಳು ಇವೆ. ಯುವಜನತೆ ಇಂದು ಅಡ್ಡದಾರಿಯತ್ತ ಸಾಗುತ್ತಿದ್ದು, ಇವರಿಗೆ ನೈತಿಕ ಮೌಲ್ಯ ತುಂಬಬೇಕಾದ ಅವಶ್ಯಕತೆಯಿದೆ. ಎನ್‌ಎಸ್‌ಎಸ್ ಘಟಕಗಳು, ಸಮುದಾಯ ಸಂಘಟನೆಗಳು ಇತ್ತ ಗಮನಹರಿಸಬೇಕಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಎಂಪ್ರೆಸ್ ಕಾಲೇಜಿನ ಪ್ರಾಂಶುಪಾಲ ಬಿ. ಮರುಳಯ್ಯ ಮಾತನಾಡಿ, ದೌರ್ಜನ್ಯ ನಮ್ಮ ಸುತ್ತಮುತ್ತ ಇರುವವರಿದಂಲೇ ಹೆಚ್ಚಾಗಿ ಆಗುತ್ತಿವೆ. ಅಂತಹ ಸಂದರ್ಭ ಬಂದಾಗ ಸುಮ್ಮನಿರಬಾರದು. ಆದರೆ ಯಾವುದೇ ಕಾರಣಕ್ಕೂ ಕಾನೂನಿನ ದುರುಪಯೋಗ ಸಲದು ಎಂದರು.
ಸಹಾಯವಾಣಿಗೆ ದೂರು ನೀಡಿ: ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಹಾಗೂ ವಕೀಲ ಸಾ.ಚಿ. ರಾಜ್‌ಕುಮಾರ್ ಮಾತನಾಡಿ, 1989ರ ಮಕ್ಕಳ ಹಕ್ಕುಗಳ ಒಡಂಬಡಿಕೆಯ ನಂತರ ಹಾಗೂ 1922ರಲ್ಲಿ ಭಾರತವು ಈ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಮಕ್ಕಳ ಹಕ್ಕುಗಳು ಹಾಗೂ ಪೋಷಣೆಯ ವಿಷಯದಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ಮಕ್ಕಳ ಮೇಲೆ ನಡೆಯುವ ವಿವಿಧ ರೀತಿಯ ದೌರ್ಜನ್ಯಗಳನ್ನು ವಿರೋಧಿಸಿ ನ.19ರಂದು ಮಕ್ಕಳ ಮೇಲಿನ ದೌರ್ಜನ್ಯ ವಿರೋಧಿ ದಿನ ಆಚರಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ 2012ರಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ವಿರುದ್ಧ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದಿದೆ. ಪೋಷಣೆ, ರಕ್ಷಣೆ ಅವಶ್ಯಕತೆ ಇರುವ ಮಕ್ಕಳು, ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಸಂಪರ್ಕಿಸಬಹುದು ಎಂದರು.
ಧರ್ಮದ ದಿಕ್ಕನ್ನು ತಪ್ಪಿಸಲಾಗುತ್ತಿದೆ: ವರದಕ್ಷಿಣೆ ವಿರೋಧಿ ವೇದಿಕೆಯ ಅಧ್ಯಕ್ಷೆ ಅನ್ನಪೂರ್ಣ ವೆಂಕಟನಂಜಪ್ಪ ಮಾತನಾಡಿ, ಸಮಾಜದಲ್ಲಿ ಮಕ್ಕಳ ಕಳ್ಳಸಾಗಣೆ, ವೇಶ್ಯಾವೃತ್ತಿಯಂತಹ ಚಟುವಟಿಕೆಗಳಿಗೆ ಮಕ್ಕಳನ್ನು ಬಳಸಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ. ಈ ಬಗ್ಗೆ ಎಚ್ಚರಿಕೆ ಅಗತ್ಯ. ಮಕ್ಕಳ ಹಕ್ಕುಗಳು ಹಾಗೂ ಇತರೆ ಪ್ರಗತಿಪರ ವಿಷಯಗಳ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಇತ್ತೀಚೆಗೆ ಹೆಚ್ಚಾಗಿ ಜ್ಯೋತಿಷಿಗಳು ಹುಟ್ಟಿಕೊಳ್ಳುತ್ತಿದ್ದು, ಧರ್ಮದ ದಿಕ್ಕನ್ನು ತಪ್ಪಿಸುತ್ತಿದ್ದಾರೆ ಎಂದರು.
ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಗೀತಾ ನಾಗೇಶ್, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಸುಗುಣಾದೇವಿ, ಎನ್‌ಎಸ್‌ಎಸ್ ಘಟಕದ ಅಧಿಕಾರಿ ಕಮಲಾಕ್ಷಮ್ಮ ಮಾತನಾಡಿದರು. ಕಾವ್ಯ ಪ್ರಾರ್ಥಿಸಿದರು. ಸೌಮ್ಯ ಸ್ವಾಗತಿಸಿದರು. ದಿವ್ಯಾ ಕಾರ್ಯಕ್ರಮ ನಿರೂಪಿಸಿದರು. ಪುಷ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement