'ರಸ್ತೆ ದುರಸ್ತಿಗೆ ಇಚ್ಛಾಶಕ್ತಿ ಕೊರತೆ'
ಮಧುಗಿರಿ: ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಮತ್ತು ನಿರ್ಲಕ್ಷ್ಯದಿಂದಾಗಿ ಪಟ್ಟಣದ ಬಹುತೇಕ ಎಲ್ಲ ರಸ್ತೆಗಳು ಮಣ್ಣು ತುಂಬಿ ಸಂಚರಿಸುವ ವಾಹನಗಳಿಂದ ಏಳುವ ಧೂಳು ಕುಡಿದು ಸಾರ್ವಜನಿಕರು, ವಿದ್ಯಾರ್ಥಿಗಳು ವಿವಿಧ ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧುಗಿರಿ ಪಟ್ಟಣದ ಕೆಲ ಪ್ರಮುಖ ರಸ್ತೆಗಳೆಲ್ಲವೂ ಡಾಂಬರು ಕಂಡು 7-8 ವರ್ಷಗಳೇ ಕಳೆದಿವೆ. ರಸ್ತೆ ತುಂಬೆಲ್ಲಾ ಮಣ್ಣು ತುಂಬಿ ಸಂಚರಿಸುವ ವಾಹನಗಳಿಂದ ಏಳುವ ಧೂಳು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದರೂ ಕೂಡ ಸಂಬಂಧಪಟ್ಟವರು ಕಂಡು ಕಾಣದಂತೆ ಜಾಣಕುರುಡು ಪ್ರದರ್ಶಿಸಿ ಜನರ ಪ್ರಾಣ ಮತ್ತು ಆರೋಗ್ಯದ ನಡುವೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಎಲ್ಲ ರಸ್ತೆಗಳನ್ನು ಸುಸ್ಸಜ್ಜಿತವಾಗಿ ಡಾಂಬರು ಹಾಕಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.