ಸಂಧಾನದಿಂದ ಪ್ರಕರಣ ಇತ್ಯರ್ಥಪಡಿಸಿಕೊಳ್ಳಿ
ಕುಣಿಗಲ್: ಅಚಾತುರ್ಯದ ನೆನಪಾಗಿ ಕಹಿ ಘಳಿಗೆ ಮರೆತು ಒಮ್ಮತದ ಸಂಧಾನದ ಮೂಲಕ ನ್ಯಾಯಾಲಯ ಪ್ರಕರಣಗಳನ್ನು ಬಗೆಹರಿಸಿಕೊಂಡಲ್ಲಿ ಮಾನಸಿಕ ನೆಮ್ಮದಿ ಪಡೆಯುವ ಜೊತೆಯಲ್ಲಿ ಶಾಂತಿಯುತ ಸಮಾಜ ನಿರ್ಮಾಣ ಮಾಡಬಹುದೆಂದು ನ್ಯಾಯಾಧೀಶೆ ಆರ್. ಶಾರದಾ ತಿಳಿಸಿದರು.
ಪಟ್ಟಣದ ಇಂಡಿಯನ್ ಒವರ್‌ಸೀಸ್ ಬ್ಯಾಂಕ್‌ನ 380 ಪ್ರಕರಣಗಳನ್ನು ಮೂರು ದಿನಗಳವರೆಗೆ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಗುರುವಾರ ಆಯೋಜಿಸಿದ್ದ ಮೆಗಾ ಲೋಕ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಿನದಿಂದ ದಿನಕ್ಕೆ ನ್ಯಾಯಾಲಯದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಎರಡೂ ಕಕ್ಷಿದಾರರು ಒಪ್ಪಿದರೆ ಸಂಧಾನದ ಮೂಲಕ ಪ್ರಕರಣ ಬಗೆಹರಿಸಲು ಈ ಲೋಕ್ ಅದಾಲತ್ ಸಹಕಾರಿಯಾಗಿದೆ. ಕಕ್ಷಿದಾರರು ಮತ್ತು ವಕೀಲರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಉಚ್ಚ ನ್ಯಾಯಾಲಯದ ಸೂಚನೆ ಮೇರೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಐಒಬಿ ಬ್ಯಾಂಕ್‌ನ ಕ್ಷೇತ್ರಿಯ ಪ್ರಬಂಧಕ ಅನಿಲ್ ಮಾತನಾಡಿ, ದೇಶ ಸೇರಿದಂತೆ ವಿದೇಶಗಳಲ್ಲೂ ಮೂರು ಸಾವಿರಕ್ಕೂ ಹೆಚ್ಚಿನ ಶಾಖೆಗಳನ್ನು ಪ್ರಾರಂಭಿಸಿ ಜನತೆಗೆ ಬ್ಯಾಂಕಿಂಗ್ ಸವಲತ್ತು ನೀಡುತ್ತಿದೆ. ಆದರೆ ಕೆಲ ಗ್ರಾಹಕರು ತಮ್ಮ ಹಲವು ಕಾರ್ಯಕ್ಕೆ ಆರ್ಥಿಕ ನೆರವನ್ನು ಸಾಲವಾಗಿ ಪಡೆದು ಮರುಪಾವತಿ ಮಾಡದ ಕಾರಣ ಬ್ಯಾಂಕಿನ ಅರ್ಥಿಕ ಪ್ರಗತಿಗೆ ಮಾರಕವಾಗಿದ್ದು, ಗ್ರಾಹಕ ಹಾಗೂ ಬ್ಯಾಂಕ್ ಎರಡಕ್ಕೂ ಅನುಕೂಲವಾಗುವ ನಿಟ್ಟಿನಲ್ಲಿ ಸಾಲ ಮರುಪಾವತಿ ಮಾಡಿಸಿಕೊಂಡು ನಂತರ ಮತ್ತಷ್ಟು ಹೆಚ್ಚಿನ ಮಂದಿಗೆ ಸಾಲ ವಿತರಿಸಲು ಸಹಕಾರವಾಗುವ ನಿಟ್ಟಿನಲ್ಲಿ ಬ್ಯಾಂಕ್ ಕ್ರಮ ಕೈಗೊಂಡಿದ್ದು, ಸಾಲ ಪಡೆದವರು ಸಾಲಮನ್ನಾ ಆಗುತ್ತದೆ ಎಂಬ ಧೋರಣೆ ಅನುಸರಿಸುವುದು ಸರಿಯಲ್ಲ ಎಂದರು. ನ್ಯಾಯಾಧೀಶರಾದ ಮುನಿರಾಜು, ದಾಕ್ಷಾಯಿಣಿ, ಎಪಿಪಿ ಸುರೇಖಾ ಹಿರೇಮಠ, ವಕೀಲರ ಸಂಘದ ಅಧ್ಯಕ್ಷ ದಯಾನಂದ, ವಕೀಲರಾದ ರಹಮತ್, ನಿಸ್ಸಾರ್ ಅಹಮದ್, ಬ್ಯಾಂಕಿನ ಮುಖ್ಯಾಧಿಕಾರಿ ಶ್ರೀವತ್ಸ ಇತರರು ಇದ್ದರು.