ಎಪಿಎಂಸಿ ಗಾದಿ ಬಿಜೆಪಿ ತೆಕ್ಕೆಗೆ
ಕ.ಪ್ರ.ವಾರ್ತೆ ತುಮಕೂರು ನ. 22
ಬಹುಮತವಿದ್ದರೂ ಭಿನ್ನಮತದಿಂದಾಗಿ ಕಾಂಗ್ರೆಸ್ ತುಮಕೂರು ಎಪಿಎಂಸಿ ಅಧ್ಯಕ್ಷ ಗಾದಿಯನ್ನು ಕಳೆದುಕೊಂಡಿದೆ.
ತುಮಕೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಅಧ್ಯಕ್ಷಗಿರಿ ಬಿಜೆಪಿ ಪಾಲಾಗಿದ್ದು, ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್‌ಗೌಡ ಬೆಂಬಲಿಗ ಗೂಳೂರು ಶಿವಕುಮಾರ್ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಹೊಳವನಹಳ್ಳಿಯ ಅಶ್ವತ್ ನಾರಾಯಣ್ ಅವರನ್ನು 2 ಮತಗಳ ಅಂತರದಿಂದ ಗೂಳೂರು ಶಿವಕುಮಾರ್ ಸೋಲಿಸುವುದರೊಂದಿಗೆ ಕಾಂಗ್ರೆಸ್ ಮುಖಭಂಗಕ್ಕೆ ಕಾರಣರಾಗಿದ್ದಾರೆ.
ಒಟ್ಟು 16 ಮಂದಿ ಸದಸ್ಯರಿರುವ ತುಮಕೂರು ಎಪಿಎಂಸಿಯಲ್ಲಿ ಶಿವಕುಮಾರ್ 9 ಮತಗಳನ್ನು ಪಡೆದರೆ, ಅಶ್ವತ್ ನಾರಾಯಣ್ 6 ಮತಗಳನ್ನು ಪಡೆದರು. ಎಪಿಎಂಸಿ ಯಲ್ಲಿ ಒಟ್ಟು ಪಕ್ಷಗಳ ಬಲಾಬಲ ಇಂತಿದೆ. ಕಾಂಗ್ರೆಸ್ 6, ಬಿಜೆಪಿ 4, ಕೆಜೆಪಿ 2, ಜೆಡಿಎಸ್ 1, ನಾಮನಿರ್ದೇಶಿತ 3 ಸದಸ್ಯರಿದ್ದರು. ಬಿಜೆಪಿ, ಕಾಂಗ್ರೆಸ್ ಕೆಜೆಪಿ ಬೆಂಬಲಿತ 13 ಸದಸ್ಯರು ಅ.29ರಂದು ಅಧ್ಯಕ್ಷೆ ತಾರಾದೇವಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಅಧ್ಯಕ್ಷ ಪದವಿಯಿಂದ ಕೆಳಗಿಳಿಸಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನದ ಮುಂದಿನ ಅವಧಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಗೂಳೂರು ಶಿವಕುಮಾರ್ ಆಯ್ಕೆಯಾಗಿದ್ದಾರೆ.
ಅಪವಿತ್ರ ಮೈತ್ರಿ ಮಾಡಿಕೊಂಡಿದ್ದವು: ತಾರಾದೇವಿಯವರನ್ನು ಕೆಳಗಿಳಿಸಲು ಅಪವಿತ್ರ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್, ಬಿಜೆಪಿ ಹಾಗೂ ಕೆಜೆಪಿ ಪಕ್ಷಗಳು ಗುರುವಾರ ನಡೆದ ಚುನಾವಣೆಯಲ್ಲಿ ಮಾತ್ರ ಪರಸ್ಪರ ಸ್ಪರ್ಧೆಗಿಳಿದಿದ್ದವು. ಬಿಜೆಪಿಯಿಂದ ಗೂಳೂರು ಕ್ಷೇತ್ರದ ಶಿವಕುಮಾರ್ ಹಾಗೂ ಕಾಂಗ್ರೆಸ್‌ನಿಂದ ಹೊಳವನಹಳ್ಳಿ ಕ್ಷೇತ್ರದ ಅಶ್ವತ್ಥ್ ನಾರಾಯಣ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.
ಎಪಿಎಂಸಿಯಲ್ಲಿ ಬೆಳಗ್ಗೆ 10.30ರಿಂದ 1.45ರವರೆಗೆ ನಡೆದ ಈ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ. ಸುರೇಶ್‌ಗೌಡ ಬೆಂಬಲಿಗ, ಮಾಜಿ ತಾಂ.ಪಂ. ಅಧ್ಯಕ್ಷರೂ ಆದ ಗೂಳೂರು ಶಿವಕುಮಾರ್ ಆಯ್ಕೆಯಾಗಿದ್ದಾರೆ. ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ. ಸುರೇಶ್‌ಗೌಡ ನಡೆಸಿದ ರಾಜಕೀಯ ತಂತ್ರಗಾರಿಕೆ ಫಲ ನೀಡಿದೆ. ಹೆಚ್ಚಿನ ಸದಸ್ಯರ ಬೆಂಬಲ ಹಾಗೂ ರಾಜ್ಯದಲ್ಲಿ ಅಧಿಕಾರ ಹೊಂದಿದ್ದರೂ ಅಧಿಕಾರ ಪಡೆಯುವಲ್ಲಿ ಕಾಂಗ್ರೆಸ್ ವಿಫಲವಾಗಿರುವುದು ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ಅಸಮದಾನ ಮೂಡಿಸಿದೆ.
ಕೊನೆ ಕ್ಷಣದ ಯತ್ನ ನಡೆಯಲಿಲ್ಲ: ನಾಮನಿರ್ದೇಶನದ 3 ಸದಸ್ಯರ ಜತೆಗೆ ಚುನಾಯಿತ 6 ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ಅಧ್ಯಕ್ಷ ಪದವಿ ಚುನಾವಣೆಯಲ್ಲಿ ಸೋಲು ಅನುಭವಿಸುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ.
ಜಿಲ್ಲೆಯ ಕಾಂಗ್ರೆಸ್ ಮುಖಂಡರು ತುಮಕೂರು ಎಪಿಎಂಸಿಯಲ್ಲಿ ಅಧಿಕಾರ ಪಡೆಯಲು ಕೊನೆ ಕ್ಷಣದಲ್ಲಿ ನಡೆಸಿದರಾದರೂ 2 ಅಡ್ಡ ಮತಗಳು ಬಿಜೆಪಿಗೆ ಚಲಾವಣೆಯಾದ್ದರಿಂದ ಪ್ರಯತ್ನ ಕೈಗೂಡಲಿಲ್ಲ. ನಾಯಕರ ನಡುವಿನ ಸಮನ್ವಯತೆಯಿಂದಾಗಿ ಕಾಂಗ್ರೆಸ್ ಎಪಿಎಂಸಿ ಗದ್ದುಗೆ ಕಳೆದುಕೊಂಡಿದೆ ಎಂಬ ಮಾತುಗಳು ಕೇಳಿ ಬಂದಿವೆ. ಜತೆಗೆ ಎರಡು ರಾಷ್ಟ್ರೀಯ ಪಕ್ಷಗಳ ಜಿದ್ದಾಜಿದ್ದಿಯಲ್ಲಿ ಬಿಜೆಪಿಗೆ ಜಯಲಭಿಸಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್‌ಗೌಡ ತಂತ್ರಗಾರಿಕೆ ರೂಪಿಸುವಲ್ಲಿ ಯಶಸ್ವಿಯಾದರೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್. ಷಫಿ ಅಹಮದ್ ಸೋತಿದ್ದಾರೆ. ಕಾಂಗ್ರೆಸ್ ಪಕ್ಷದ ಆಂತರಿಕ ಕಲಹ ಬೀದಿಗೆ ಬಂದಂತಾಗಿದ್ದು, ಭಿನ್ನಮತಕ್ಕೆ ಎಡೆ ಮಾಡಿಕೊಟ್ಟಿದೆ.
ಚುನಾವಣೆ ನಡೆದದ್ದು ಹೀಗೆ...
ತುಮಕೂರು ಎಪಿಎಂಸಿ ಆಡಳಿತ ಕಚೇರಿ ಸಭಾಂಗಣದಲ್ಲಿ 10.30ರಿಂದ 11.30ರವರೆಗೆ ನಾಮಪತ್ರ ಸಲ್ಲಿಕೆಗೆ ಸಮಯ ನಿಗದಿಪಡಿಸಲಾಗಿತ್ತು. ಮಧ್ಯಾಹ್ನ 12.30ಕ್ಕೆ ಚುನಾವಣಾ ಸಭೆ ಆರಂಭಗೊಂಡಿತು.12.45ರಿಂದ 1 ಗಂಟೆಯವರೆಗೆ ನಾಮಪತ್ರ ಪರಿಶೀಲನೆ ನಡೆಯಿತು. 1 ಗಂಟೆಯಿಂದ 1.45ರವರೆಗೆ ಉಮೇದುವಾರಿಕೆ ವಾಪಸ್ ಪಡೆಯಲು ಅವಕಾಶ ನೀಡಲಾಗಿತ್ತು. ನಂತರ ನಡೆದ ರಹಸ್ಯ ಮತದಾನ ಪ್ರಕ್ರಿಯೆಯಲ್ಲಿ ಗೂಳೂರು ಶಿವಕುಮಾರ್ ಆಯ್ಕೆಯಾದರು. 1.40ಕ್ಕೆ ಚುನಾವಣಾಧಿಕಾರಿಗಳೂ ಆದ ತಹಸೀಲ್ದಾರ್ ಏಕೇಶ್‌ಬಾಬು ವಿಜೇತ ಅಭ್ಯರ್ಥಿ ಶಿವಕುಮಾರ್ ಹೆಸರನ್ನು ಅಧಿಕೃತವಾಗಿ ಘೋಷಿಸಿದರು.