ಕುಣಿಗಲ್ನ ಸಮಗ್ರ ಮಾಹಿತಿವುಳ್ಳ ಸ್ಮರಣ ಸಂಚಿಕೆ ತರಲು ನಿರ್ಧಾರ
ಕುಣಿಗಲ್: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ, 2014ರ ಜನವರಿಯಲ್ಲಿ ನಡೆಯಲಿರುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕುಣಿಗಲ್ನ ಸಮಗ್ರ ಮಾಹಿತಿಯನ್ನು ಹೊಂದಿರುವ ಸ್ಮರಣ ಸಂಚಿಕೆ ಹೊರತರುವ ಉದ್ದೇಶ ಹೊಂದಿದ್ದು, ತಾಲೂಕಿನ ಬಗ್ಗೆ ಮಾಹಿತಿ ಹೊಂದಿರುವ ಎಲ್ಲಾ ಜನತೆಯಿಂದ ಸೂಕ್ತ ಮಾಹಿತಿಗಳನ್ನು, ಭಾವಚಿತ್ರಗಳನ್ನು ನೀಡುವಂತೆ ಅಧ್ಯಕ್ಷ ದಿನೇಶ ಕುಮಾರ್ ಮನವಿ ಮಾಡಿದ್ದಾರೆ.
ಈ ಸಂಬಂಧ ಕುಣಿಗಲ್ ಪರಿಸರದ ಇತಿಹಾಸ ಮತ್ತು ಪುರಾತತ್ವ, ತಾಲೂಕಿನ ಮೌಖಿಕ ಕಥನಗಳು, ಕೋಟೆ ಕೊತ್ತಲಗಳು, ಶಾಸನಗಳು, ಸಾಂಸ್ಕೃತಿಕ ಪರಂಪರೆಗಳು, ಅನನ್ಯ ಪಾರಂಪರಿಕ ಜಲಮೂಲಗಳು, ತಾಲೂಕಿನ ರಂಗಭೂಮಿ, ತತ್ವಪದಕಾರರು, ವಚನಕಾರರು, ಸಾಹಿತ್ಯ ಪರಿಸರ, ಲೇಖಕರು, ಸಾಹಿತಿಗಳು, ಸಂಶೋಧನೆಗಳು, ಈ ಭಾಗದ ಜನಪದ ಒಗಟುಗಳು, ವ್ಯವಸಾಯ ಸಂಬಂಧದ ಆಚರಣೆಗಳು, ಜಾತ್ರೆ, ಹಬ್ಬಗಳು, ಕೃಷಿ, ದೇಸಿ ಆಹಾರ ಪದ್ಧತಿ, ಪ್ರೇಕ್ಷಣೀಯ ಸ್ಥಳಗಳು, ವಿವಿಧ ಇಲಾಖೆಗಳ ಅಭಿವೃದ್ಧಿ ಆಯಾಮಗಳೊಂದಿಗೆ ಅಂದಿನ ಮತ್ತು ಇಂದಿನ ಮಾಹಿತಿಗಳು, ರಾಜಕೀಯವಾಗಿ ಸಾಧನೆ ಮಾಡಿರುವ ವ್ಯಕ್ತಿಗಳ ಪರಿಚಯ, ಸ್ವಾತಂತ್ರ್ಯ ಹೋರಾಟಗಾರರ ವ್ಯಕ್ತಿಗತ ಪರಿಚಯ, ಕರಕುಶಲ, ಗುಡಿ ಕೈಗಾರಿಕೆ ಹಾಗೂ ಕೈಗಾರಿಕೆಗಳ ಮಾಹಿತಿ, ಜಿಲ್ಲೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ತಾಲೂಕಿನ ಮೂಲ ನಾಗರಿಕರು, ಅಧಿಕಾರಿಗಳು, ಕ್ರೀಡಾಪಟುಗಳು, ಚಲನಚಿತ್ರ ನಟರು, ನಿರ್ದೇಶಕರು, ಮತ್ತು ತಂತ್ರಜ್ಞರ ವಿವರ, ತಾಲೂಕು ಕೇಂದ್ರದಿಂದ ಊರಿಗಿರುವ ಅಂತರ, ಜನಸಂಖ್ಯೆ, ವಿಶೇಷತೆ, ಭೌಗೋಳಿಕ ಲಕ್ಷಣ, ಜಲಮೂಲ, ನೋಡಬಹುದಾದ ಸ್ಥಳ, ಪುರಾತನ ದಾಖಲೆಗಳು (ವೀರಗಲ್ಲು, ಮಾಸ್ತಿಗಲ್ಲು, ಕಲ್ಯಾಣಿಗಳು, ಅವಶೇಷಗಳು ಇತ್ಯಾದಿ), ಪ್ರಮುಖ ಬೆಳೆಗಳು, ದೇವಸ್ಥಾನಗಳು, ಹಬ್ಬ ಹರಿದಿನಗಳ ಆಚರಣೆ, ಊರಿನ ಇತಿಹಾಸ, ಗ್ರಾಮೀಣ ಕ್ರೀಡೆಗಳು, ಸಾಂಸ್ಕೃತಿಕ ಚಟುವಟಿಕೆಗಳು, ಜಾನಪದ ಕತೆ, ಕವನಗಳು, ವಿಶೇಷ ವ್ಯಕ್ತಿಗಳು ಹೀಗೆ ತಾಲೂಕಿನ ಪ್ರತಿಯೊಂದು ಮಾಹಿತಿಯೂ ಸ್ಮರಣ ಸಂಚಿಕೆಗೆ ಅವಶ್ಯಕವಾಗಿದೆ. ಲೇಖನಗಳನ್ನು ಮತ್ತು ಕವನಗಳನ್ನು ಹಾಳೆಯ ಒಂದು ಬದಿಯಲ್ಲಿ ಬರೆದು, ಅಥವಾ ಡಿ.ಟಿ.ಪಿ. ಮಾಡಿ, ದಿನೇಶ ಕುಮಾರ್, (ಮೊ. 9845230720.) ಅಧ್ಯಕ್ಷರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕುಣಿಗಲ್ ಇವರಿಗೆ ಅಂಚೆ ಮೂಲಕ ದಿ. 05-01-2014ರ ಒಳಗೆ ಲೇಖನಗಳನ್ನು ತಲುಪಿಸಲು ಕೋರಿದ್ದಾರೆ.