ಬಿಜೆಪಿಯಿಂದ ಹೇಮೆಗಾಗಿ ಪಾದಯಾತ್ರೆ
ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿಯ ಸಾರ್ಥವಳ್ಳಿ ಸೇರಿದಂತೆ ಆಜುಬಾಜಿನ ಕೆರೆಗಳಿಗೆ ಹೊನ್ನವಳ್ಳಿ ಏತ ನೀರಾವರಿ ಮೂಲಕ ನೀರು ಹರಿಸಿಲ್ಲವೆಂದು ಬಿಜೆಪಿ ವತಿಯಿಂದ ಇಂದು ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ಸಾರ್ಥವಳ್ಳಿಯಿಂದ ಹೊರಟ ಪಾದಯಾತ್ರೆ ನಗರದ ಉಪವಿಭಾಗಾಧಿಕಾರಿ ಕಚೇರಿವರೆಗೆ ಆಗಮಿಸಿ ಕೂಡಲೆ ಕೆರೆಗಳಿಗೆ ನೀರು ತುಂಬಿಸಬೇಕೆಂದು ಆಗ್ರಹಿಸಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಬಿ.ಸಿ.ನಾಗೇಶ್ ಮತ್ತು ತಾ.ಅಧ್ಯಕ್ಷ ಗಂಗಾಧರ್ ತಾಲೂಕಿನಲ್ಲಿ ಬರ ತಾಂಡವವಾಡುತ್ತಿದೆ. ಹೊನ್ನವಳ್ಳಿ ಹೋಬಳಿ ಸದಾ ಬರದಿಂದ ಕೂಡಿದ್ದು ತೆಂಗಿನ ಮರಗಳೆಲ್ಲ ಒಣಗಿ ಹೋಗಿವೆ. ಮಳೆ ಇಲ್ಲದೆ ಅಂತರ್ ಜಲ ಬತ್ತಿ ಹೋಗಿದೆ. ಮುಂದಿನ ಬೇಸಿಗೆಗೆ ಈ ಭಾಗಗಳಲ್ಲಿ ಕುಡಿಯುವ ನೀರಿಗೂ ಸಂಚಕಾರ ಒದಗಲಿದ್ದು, ತಾಲೂಕು ಮತ್ತು ಜಿಲ್ಲಾಡಳಿತ ಕೂಡಲೆ ಹೇಮಾವತಿ ನೀರು ಹರಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ತಾ.ಪಂ. ಅಧ್ಯಕ್ಷ ಭಾನುಪ್ರಕಾಶ್, ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಬಿಸಲೇಹಳ್ಳಿ ಜಗದೀಶ್, ತಾ.ಪಂ. ಮಾಜಿ ಅಧ್ಯಕ್ಷೆ ವಸಂತಗಂಗಾಧರ್, ಗ್ರಾ.ಪಂ.ಅಧ್ಯಕ್ಷೆ ಈರಮ್ಮ, ಮಾಜಿ ಅಧ್ಯಕ್ಷ ಚಂದ್ರಶೇಖರಯ್ಯ, ಮತ್ತಿಹಳ್ಳಿ ಗಂಗಾಧರ್, ಯುವ ಮೋರ್ಚಾ ಅಧ್ಯಕ್ಷ ಕಾಂತರಾಜು, ಕೃಷ್ಣಮೂರ್ತಿ, ಗಂಗರಾಜು ಮತ್ತಿತರರಿದ್ದರು.