ಬೆಳೆ ಪರಿಹಾರಕ್ಕೆ ನಿತ್ಯ ಅಲೆವ ಸ್ಥಿತಿ
ಶಿರಾ: ತಹಸೀಲ್ದಾರ್ ಕಚೇರಿಯಲ್ಲಿ ವಿವಿಧ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಏಜೆಂಟರನ್ನು ನೇಮಕ ಮಾಡಿಕೊಳ್ಳಲಾಗಿದೆ. ಬೆಳೆ ನಷ್ಟ ಪರಿಹಾರದ ಹಣ ಪಡೆಯಲು ಸಣ್ಣ ಹಿಡುವಳಿದಾರರು ಸರ್ಟಿಫಿಕೆಟ್ ಪಡೆಯಲು ನಿತ್ಯ ಅಲೆಯುವಂತಹ ಸ್ಥಿತಿ ತಾಲೂಕಿನಲ್ಲಿ ನಿರ್ಮಾಣವಾಗಿದೆ ಎಂದು ಜಿ.ಪಂ. ಸದಸ್ಯರಾದ ಸಿ.ಆರ್.ಉಮೇಶ್, ಬಿ.ಕೆ.ಬಡೀರಣ್ಣ ಕಂದಾಯ ಇಲಾಖೆ ಆಡಳಿತ ವೈಖರಿ ಬಗ್ಗೆ ಕಿಡಿಕಾರಿದರು.
ಅವರು ನಗರದ ತಾ.ಪಂ. ಸಭಾಂಗಣದಲ್ಲಿ ಸಚಿವ ಟಿ.ಬಿ.ಜಯಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ (ಕೆ.ಡಿ.ಪಿ.) ಸಬೆಯಲ್ಲಿ ಮಾತನಾಡುತ್ತಿದ್ದರು.
ಸಂಧ್ಯಾ ಸುರಕ್ಷಾ, ವಿಧವಾ ವೇತನ ಸೇರಿದಂತೆ ವಿವಿಧ ಯೋಜನೆಗಳಿಗಾಗಿ ದಾಖಲಾತಿಯನ್ನು ನೀಡುವಾಗ ಫಲಾನುಭವಿಗಳು ನೂರಾರು ರು.ಗಳನ್ನು ನೀಡಬೇಕಾಗಿದೆ ಎಂದು ಆರೋಪಿಸಿದ ಅವರು, ಸಣ್ಣ ಹಿಡುವಳಿದಾರರು 2000 ರು. ಸಹಾಯಧನ ಪಡೆಯಲು 1000 ರು. ಖರ್ಚು ಮಾಡಬೇಕಾಗಿದೆ ಎಂದು ಸಭೆಯಲ್ಲಿ ತಮ್ಮ ವಾದ ಮುಂದಿಟ್ಟರು.
ಇಲಾಖೆ ಮೇಲಿನ ಗಂಭಿರ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಿದ ತಹಸೀಲ್ದಾರ್ ಕುಲಕರ್ಣಿ ಅವರು ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ನಿಖರ ದೂರು ನೀಡಿದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದರು.
47 ರೈತರ ಆತ್ಮಹತ್ಯೆ: ತಾಲೂಕಿನಲ್ಲಿ 2003-04 ರಿಂದ 2013 ನೇ ಸಾಲಿನವರೆಗೆ ಒಟ್ಟು 47 ರೈತರು
ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಸಂಭವಿಸಿದ್ದು, ಇದರಲ್ಲಿ 27 ಕುಟುಂಬಗಳಿಗೆ ಸಹಾಯ ಧನದ ಚೆಕ್ ವಿತರಿಸಲಾಗಿದೆ. 15 ಅರ್ಜಿಗಳು ತಿರಸ್ಕೃತಗೊಂಡಿದ್ದು, 5 ಪ್ರಕರಣಗಳಿಗೆ ಸಹಾಯಧನವನ್ನು ನೀಡಬೇಕಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೆಶಕರಾದ ಡಾ.ನಾಗರಾಜ್ ಸಭೆಗೆ ವಿವರಿಸಿದರು.
ಪರಿಹಾರವಾಗಲ್ಲ: ಈ ವಿವರಣೆಗೆ ಪ್ರತಿಕ್ರಿಯಿಸಿದ ಜಿ.ಪಂ. ಸದಸ್ಯ ಸಿ.ಆರ್.ಉಮೇಶ್ ಅವರು ರೈತರ ಆತ್ಮಹತ್ಯೆ ಪ್ರಕರಣಗಳಿಗೆ 1 ಲಕ್ಷ ರು.ಗಳ ಸಹಾಯಧವನ್ನು ಸರ್ಕಾರ ನೀಡುತ್ತಿದ್ದು, ಇದರಿಂದ ರೈತರ ಸಮಸ್ಯೆ ಖಂಡಿತ ಪರಿಹಾರ ಆಗುವುದಿಲ್ಲ. ರೈತರ ಕುಟುಂಬಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸುವಂತಹ ಕೆಲಸ ಆಡಳಿತದಿಂದ
ಆಗಬೇಕು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿ ಎಂದು ಸಭೆಯಲ್ಲಿ ಹಾಜರಿದ್ದ, ಸಚಿವರ ಮುಂದೆ ಮನವಿ ಮಾಡಿದರು.
ಪಟ್ಟಿ ಕೊಡಿ: ಸಿ.ಆರ್.ಉಮೇಶ್ ಅವರ ವಾದಕ್ಕೆ ಸ್ಪಂದಿಸಿದ ಸಚಿವರು ತಾಲೂಕಿನಲ್ಲಿ ಈವರೆಗೆ ಹಾವು ಕಡಿತ, ಮರದಿಂದ ಬಿದ್ದು, ಸಾಲಬಾಧೆಯಿಂದ ಮರಣ ಹೊಂದಿರುವ ಕುಟುಂಬಗಳ ಸಂಖ್ಯೆ 74. ಈ ಕುಟುಂಬಗಳಿಗೆ ತಾವೇ ಪ್ರತ್ಯೇಕವಾಗಿ ರು. 50000 ವೆಚ್ಚದಲ್ಲಿ ಹಾಲು ಕರೆಯುವ ಹಸುಗಳನ್ನು ನೀಡುವುದಾಗಿ ತಿಳಿಸಿದ ಸಚಿವ ಟಿ.ಬಿ.ಜಯಚಂದ್ರ ಅವರು, ಈ ಸೌಲಭ್ಯ ಶಿರಾ ತಾಲೂಕಿಗೆ ಮಾತ್ರ ಸೀಮಿತ ಎಂದು ತಿಳಿಸಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸದರಿ ಕುಟುಂಬಗಳ ಪಟ್ಟಿ ನೀಡಿ ಎಂದು ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಹಣ ಏನಾಯಿತು?: ಕುಡಿಯುವ ನೀರು ಪೂರೈಕೆ ಯೋಜನೆಯಡಿಯಲ್ಲಿ ಕೋಟ್ಯಂತರ ರು. ಹಣವಿದೆ. ಕಳೆದ 2 ವರ್ಷಗಳಿಂದ ಈವರೆಗೆ ಎಷ್ಟು ಹಣ ಬಿಡುಗಡೆಯಾಗಿದೆ, ಎಷ್ಟು ಹಣ ಖರ್ಚಾಗಿದೆ, ಸಾಧನೆ ಏನು ಎಂದು ಜಿ.ಪಂ. ಸದಸ್ಯ ಸಿ.ಆರ್.ಉಮೇಶ್ ಅವರು ಅಧಿಕಾರಿಗಳಿಗೆ ಪ್ರಶ್ನಿಸಿದರು.
ಜಿ.ಪಂ. ಸದಸ್ಯ ಬಿ.ಕೆ.ಬಡೀರಣ್ಣ ಅವರು ಮಾತನಾಡಿ ತಾಲೂಕಿನಲ್ಲಿ ನೀರಿನ ಹೆಸರಿನಲ್ಲಿ ಕೊಟ್ಯಂತರ ರು.ವೆಚ್ಚವಾಗಿದ್ದರೂ ಕುಡಿಯುವ ನೀರಿನ ಸಮಸ್ಯೆ ಮಾತ್ರ ಹಳ್ಳಿಗಳಲ್ಲಿ ಹಾಗೆ ಇದೆ. ಇದಕ್ಕೆ ಕಾರಣವಾದರೂ ಏನು ಎಂದರು.
ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಜಿ.ಪಂ. ಎಂಜಿನಿಯರಿಂಗ್ ವಿಭಾಗದ ಎ.ಇ.ಇ. ಪುಟ್ಟಸ್ವಾಮಿ ಅವರು ಮಾತನಾಡಿ ಪ್ರಸಕ್ತ ವರ್ಷ 22 ಕೋಟಿ ರು. ಅನುದಾನ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಮಂಜೂರಾಗಿದ್ದು, ಈ ಪೈಕಿ 6 ಕೋಟಿ ರು. ಬಳಕೆ ಮಾಡಲಾಗಿದೆ. ಇನ್ನೂ 16 ಕೋಟಿ ರು. ಹಣ ಇದೆ ಎಂದರು.
ಮಳೆ ಬಾರದಿದ್ದರೆ, ಅತಿ ಮಳೆ ಬಂದು ಬೆಳೆ ನಷ್ಟಗೊಂಡ ಕೇವಲ ಸಣ್ಣ ಹಿಡುವಳಿ ರೈತರಿಗಷ್ಟೆ ಅಲ್ಲದೆ ಮಧ್ಯಮ ವರ್ಗದ ರೈತರೂ ಕೂಡ ನಷ್ಟ ಅನುಭವಿಸುತ್ತಾರೆ. ಮಧ್ಯಮ ವರ್ಗದ ರೈತರೂ ಕೂಡ
ಮನುಷ್ಯರಲ್ಲವೆ. ಅವರ ಕಷ್ಟಗಳಿಗೂ ಸರ್ಕಾರ ಸ್ಪಂದಿಸುವಂತಾಗಬೇಕು ಎಂದು ಜಿ.ಪಂ. ಸದಸ್ಯ ಬಿ.ಕೆ.ಬಡೀರಣ್ಣ ಜಿಲ್ಲಾ ಸಚಿವರ ಗಮನ ಸೆಳೆದರು.
ಬಿಗೀ ಪೊಲೀಸ್ ಬಂದೋಬಸ್ತ್‌ನೊಂದಿಗೆ ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆಯನ್ನು ತಾ.ಪಂ. ಅಧ್ಯಕ್ಷೆ ಗಂಗಮ್ಮ ಸಿದ್ದಹನುಮಯ್ಯ, ವಹಿಸಿದ್ದರು. ಉಪಾಧ್ಯಕ್ಷ ಉದಯಶಂಕರ್,
ತಹಸೀಲ್ದಾರ್ ಕುಲಕರ್ಣಿ, ತಾ.ಪಂ. ಇ.ಓ. ಸನಾವುಲ್ಲಾ, ಡಿ.ಎಸ್.ಪಿ. ರಾಮಾನಾಯ್ಕ, ಸಿ.ಪಿ.ಐ. ರಾಮಕೃಷ್ಣಯ್ಯ, ಕೊಟ್ರೇಶ್, ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ತಾ.ಪಂ. ಸಭೆಯಲ್ಲಿ ಪಾಲ್ಗೊಂಡಿದ್ದರು.