ಮನೆಕಳ್ಳತನ: ಆತಂಕದಲ್ಲಿ ನಾಗರಿಕರು
ತುರುವೇಕೆರೆ: ಕಳೆದ ಐದಾರು ತಿಂಗಳಿನಿಂದ ಯಾವುದೇ ಕಳ್ಳತನದ ಭಯವಿಲ್ಲದೇ ನೆಮ್ಮದಿಯಿಂದ ಇದ್ದ ಪಟ್ಟಣದ ನಾಗರಿಕರಿಗೆ ಈಗ ಕಳ್ಳಕಾಕರ ಕೈಚಳಕ ನಿದ್ದೆಗೆಡಿಸಿದೆ. ಕಳೆದ 15 ದಿನದ ಹಿಂದೆ ಪಟ್ಟಣದ ವಿದ್ಯಾ ನಗರದ 2 ಮನೆಗಳ ಮನೆ ಮುಂದೆ ಬೀಗ ಹಾಕಿ ನಿಲ್ಲಿಸಿದ್ದ ದ್ವಿ ಚಕ್ರ ವಾಹನಗಳು ನಾಪತ್ತೆಯಾಗಿದ್ದವು. ಕಳೆದ ಎರಡು- ಮೂರು ದಿನಗಳ ಹಿಂದೆ ಬೇಟೇರಾಯಸ್ವಾಮಿ ದೇವಾಲಯದ ಸುತ್ತ ಮುತ್ತ ಕಳ್ಳರು ಕೈ ಚಳಕ ತೋರಿಸಿದ್ದಾರೆ. ಈಗ ಸುಬ್ರಹ್ಮಣ್ಯ ಬಡಾವಣೆಯ ಕೃಷ್ಣ ಚಿತ್ರ ಮಂದಿರದ ಹಿಂಭಾಗದಲ್ಲಿರುವ ಭೈರೋಜಿ ರಾವ್ ಎಂಬುವವರ ಮನೆಗೆ ಶುಕ್ರವಾರ ರಾತ್ರಿ ಕಳ್ಳರು ನುಗ್ಗಿ ಹಣ, ಒಡವೆಗಳನ್ನು ದೋಚಿದ್ದಾರೆ. ಸುಬ್ರಹ್ಮಣ್ಯ ಬಡಾವಣೆಯಲ್ಲಿ ವಾಸವಿರುವ ಭೈರೋಜಿರಾವ್ ಅವರು ಕಳೆದ ಎಂಟತ್ತು ದಿನಗಳಿಂದ ಊರಿನಲ್ಲಿರಲಿಲ್ಲ ಎಂದು ತಿಳಿದು ಬಂದಿದೆ.