ಮೂಢನಂಬಿಕೆಗಳೇ ದೇಶದ ಹಿನ್ನಡೆಗೆ ಕಾರಣ
ತುಮಕೂರು: ಮೂಢನಂಬಿಕೆಗಳೇ ಸಮಾಜದ ಹಿನ್ನೆಡೆಗೆ ಕಾರಣ ಎಂದು ತುಮಕೂರು ವಿವಿ ಕನ್ನಡ ಪ್ರಾಧ್ಯಾಪಕ ಡಾ. ನಾಗಭೂಷಣ್ ಬಗ್ಗನಡು ಪ್ರತಿಪಾದಿಸಿದರು.
ಅವರು ಕೊರಟಗೆರೆ ತಾಲೂಕು ಬಿ.ಡಿ.ಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾಹಿತ್ಯ ಮತ್ತು ವೈಚಾರಿಕತೆ ವಿಷಯ ಕುರಿತಂತೆ ಮಾತನಾಡಿದರು. ನಮ್ಮ ಸಾಮಾಜಿಕ ಬದುಕಿನಲ್ಲಿ ನಿರಂತರವಾಗಿ ಎಡಬಿಡದೆ ಕಾಡುತ್ತಿರುವುದು ಮೂಢನಂಬಿಕೆ. ಮನುಷ್ಯನಿಗೆ ನಂಬಿಕೆ ಬೇಕು. ಆದರೆ ಮೂಢನಂಬಿಕೆಯಲ್ಲ. ಮನುಷ್ಯರು ದೇವರು, ದೆವ್ವ ಮುಂತಾದವುಗಳಿಂದ ಮಾನಸಿಕವಾಗಿ ಜರ್ಜರಿತವಾಗುತ್ತಿದ್ದಾರೆ. ಅವರಿಗೆ ಇಂತವುಗಳಿಂದ ಬಿಡುಗಡೆ ಸಿಗುವುದು ಶಿಕ್ಷಣದಿಂದ. ಶಿಕ್ಷಣ ಸಾಮಾಜಿಕ ಅರಿವನ್ನು, ಎಚ್ಚರವನ್ನು ನೀಡುತ್ತದೆ. ಹೀಗಾಗಿ ಸಮಾಜದಲ್ಲಿ ಬಲವಂತವಾಗಿ ಹೇರಿದ ವಿಷಯಗಳಿಂದ ಬಿಡುಗಡೆ ಪಡೆಯಲು ಇರುವ ಏಕೈಕ ಉಪಾಯ ಎಲ್ಲವನ್ನು ಪ್ರಶ್ನಿಸುವುದು. ಅರಿವಿಗೆ ಬಂದರೆ ಮಾತ್ರ ಒಪ್ಪಿಕೊಳ್ಳುವುದು. ಇಲ್ಲದಿದ್ದರೆ ನಿರ್ದಾಕ್ಷಿಣ್ಯವಾಗಿ ನಿರಾಕರಿಸಬೇಕು. ಆ ಮೂಲಕ ಉತ್ತಮ ಸಮಾಜವನ್ನು ನಿಮ್ಮಂತಹ ಮಕ್ಕಳಿಂದ ಕಟ್ಟಲು ಸಾಧ್ಯ ಎಂದು ತಿಳಿಸಿದರು.
ಭಕ್ತಿಗಿಂತ ಭಯವೇ ಜಾಸ್ತಿ: ನಮ್ಮಲ್ಲಿ ದೇವರು ಎಂದರೆ ಭಕ್ತಿಗಿಂತ ಭಯವೇ ಜಾಸ್ತಿ. ದೇವರ ಬಗ್ಗೆ ಭಯ ಹುಟ್ಟಲು, ನಂಬಿಕೆ ಹುಟ್ಟಲು ಭಯವೇ ಕಾರಣ. ವಿದ್ಯಾರ್ಥಿಗಳು ಈಗಾಗಲೇ ಇರುವ ಯತಾಸ್ಥಿತಿ ವಾದವನ್ನು ಪರೀಕ್ಷಿಸದೆ ಒಪ್ಪಿಕೊಳ್ಳದೆ, ಪ್ರಶ್ನಿಸುವುದನ್ನು ಕಲಿಯಬೇಕು. ದೇವರು ಎನ್ನುವುದು ನಂಬಿಕೆಯೇ ಹೊರತು ಸತ್ಯವಲ್ಲ. ಸಾಮಾನ್ಯರಲ್ಲಿ ದೇವರ ಬಗ್ಗೆ ಭಯ ಭಿತ್ತಿ, ಸ್ವಸ್ಥ ಸಮಾಜವನ್ನು ಭ್ರಮೆಯಲ್ಲಿ ಮುಳುಗಿಸಿದ್ದಾರೆ ಎಂದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಡಾ.ರವಿಕುಮಾರ್ ನೀಹ, ಸಾಮಾಜಿಕ ಬದುಕಿಗೆ ಸಾಹಿತ್ಯ ದೀವಿಗೆಯಂತೆ ಕೆಲಸ ಮಾಡುತ್ತದೆ. ಸಾಹಿತ್ಯದ ಓದು ಏನು ನೀಡದಿದ್ದರೂ ಅರಿವನ್ನಂತೂ ನೀಡುತ್ತದೆ. ಅರಿವು ನೀಡದ, ವೈಚಾರಿಕತೆ ಬೆಳೆಸದ ಓದು, ಶಿಕ್ಷಣ ನಿರರ್ಥಕ. ಈ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿಯನ್ನು, ಸಾಮಾಜಿಕ ಎಚ್ಚರವನ್ನು ಉಂಟುಮಾಡುತ್ತವೆ ಎಂದು ತಿಳಿಸಿದರು.
ಶ್ಲಾಘನೀಯ: ಮುಖ್ಯ ಅತಿಥಿಯಾಗಿದ್ದ ಕೊರಟಗೆರೆ ತಾಲೂಕು ಪ್ರೌಢಶಾಲಾ ಕನ್ನಡ ಶಿಕ್ಷಕರ ಸಂಘದ ಅಧ್ಯಕ್ಷ ಎಲ್.ರಮೇಶ್ ಮಾತನಾಡಿ, ಅತ್ಯಂತ ಹಿಂದುಳಿದಿರುವ ಮತ್ತು ತುಂಬಾ ಬಡತನ ಮೌಢ್ಯ ತುಂಬಿರುವ ಇಂಥ ಗ್ರಾಮೀಣ ಪ್ರದೇಶಗಳಲ್ಲಿ ಸಾಹಿತ್ಯದ ಮೂಲಕ ವೈಚಾರಿಕತೆಯನ್ನು, ಅರಿವನ್ನುಂಟು ಮಾಡುತ್ತಿರುವ ಈ ಕಾಲೇಜು ಮತ್ತು ಪ್ರೌಢಶಾಲೆ ಕಾರ್ಯ ಶ್ಲಾಘನೀಯ ಎಂದರು
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಮುದ್ದಪ್ಪನವರು ಮಾತನಾಡಿ ಇಂಥಹ ಕಾರ್ಯಕ್ರಮಗಳ ಮೂಲಕ ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೇ ಕೇವಲ ಓದು, ಪಠ್ಯಕ್ಕೇ ಸೀಮಿತವಾದ ಶಿಕ್ಷಣವನ್ನು ಒಂದಷ್ಟು ಬದಲಾಯಿಸಿ ಹೊಸ ಕ್ರಮದ ಪಠ್ಯೇತರ ನೋಟವನ್ನು ಇವು ನೀಡುತ್ತವೆ ಎಂದರು.