ವಾಲ್ಮೀಕಿ ಜನಾಂಗಕ್ಕೆ ಅವಮಾನ: ಆಕ್ರೋಶ
ತಿಪಟೂರು: ಪಾವಗಡದ ಜ್ಯೋತಿಷಿ ಪ್ರಕಾಶ್ ರಾವ್ ಅವರು ಟಿ.ವಿ ಸಂದರ್ಶನದಲ್ಲಿ ವಾಲ್ಮೀಕಿ ಬ್ರಾಹ್ಮಣ ಕುಲದಲ್ಲಿ ಹುಟ್ಟಿದವರು ಎಂದು ಹೇಳಿಕೆ ನೀಡಿರುವುದು ಬೇಡ, ನಾಯಕ ಹಾಗೂ ವಾಲ್ಮೀಕಿ ಜನಾಂಗಕ್ಕೆ ಮಾಡಿರುವ ಅವಮಾನವಾಗಿದೆ ಎಂದು ಮದಕರಿನಾಯಕ ಸಂಘ ತಾಲೂಕು ಶಾಖೆಯ ಗೌರವಾಧ್ಯಕ್ಷ ರಂಗಪ್ಪನಾಯಕ ಮತ್ತು ಪದಾಧಿಕಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾಲ್ಮೀಕಿಯವರು ಬೇಡ ಕುಲದಲ್ಲಿ ಹುಟ್ಟಿದವರೆಂದು ವಾಲ್ಮೀಕಿ ರಾಮಾಯಣದಲ್ಲಿ ಋಷಿ ಮಹರ್ಷಿಗಳು, ಸಂಸ್ಕೃತ ವಿದ್ವಾಂಸರು ಹಾಗೂ ಪಾಂಡಿತ್ಯ ಉಳ್ಳವರು ವಿವಿಧ ಮೂಲ ಗ್ರಂಥಗಳನ್ನು ಪರಿಶೀಲಿಸಿ ತಿಳಿಸಿರುತ್ತಾರೆ. ಹೀಗಿದ್ದರೂ ಜ್ಯೋತಿಷಿ ಪ್ರಕಾಶ್‌ರಾವ್ ಗ್ರಂಥಗಳ ಆಳ-ಅರಿವನ್ನು ಪರಿಶೀಲಿಸದೆ ಹೇಳಿಕೆ ನೀಡಿರುವುದು ಜನಾಂಗಕ್ಕೆ ಮಾಡಿರುವ ಅಪಮಾನವಾಗಿದೆ. ಆದ್ದರಿಂದ ಸರ್ಕಾರ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಸಮಾಜದ ಮುಂದೆ ಬೇಷರತ್ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದೆಂದು ಸಂಘದ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಆರೋಗ್ಯ ಉಚಿತತಪಾಸಣೆ ಶಿಬಿರ ಇಂದು
ಕುಣಿಗಲ್: ತಾಲೂಕಿನ ಯಡೆಯೂರು ಕೃಷಿಪತ್ತಿನ ಸಹಕಾರ ಸಂಘ, ಗ್ರಾಮ ಪಂಚಾಯಿತಿ ಹಾಗೂ ಬೆಂಗಳೂರು ಸಪ್ತಗಿರಿ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಇದೆ 24ರ ಭಾನುವಾರ ಬೆಳಗ್ಗೆ 10 ಗಂಟೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಡೆಯೂರಿನಲ್ಲಿ, ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಹೃದಯರೋಗ, ಕಣ್ಣಿನ ತಪಾಸಣೆ, ಕೀಲು ರೋಗ ಸೇರಿದಂತೆ ವಿವಿಧ ರೋಗಗಳ ಬಗ್ಗೆ ನುರಿತ ತಜ್ಞ ವೈದ್ಯರಿಂದ ತಪಾಸಣೆ ಹಾಗೂ ಉಚಿತ ಔಷಧ ವಿತರಣೆ ಏರ್ಪಡಿಸಲಾಗಿದೆ. ಯಡೆಯೂರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಸಂಘದ ಸಿಇಒ ಪ್ರಕಾಶ್ ಮನವಿ ಮಾಡಿದ್ದಾರೆ.
ಚಿನ್ನಾಭರಣ ಕಳವು
ಕುಣಿಗಲ್: ಮನೆಯಲ್ಲಿ ಯಾರೂ ಇಲ್ಲದ ವೇಳೆ ಟ್ರಂಕ್‌ನಲ್ಲಿದ್ದ ಚಿನ್ನಾಭರಣವನ್ನು ಕಳವು ಮಾಡಿರುವ ಘಟನೆ ಅಮೃತೂರು ಪೊಲೀಸ್ ಠಾಣೆಯ ತೆಂಗಿನಮರ ಪಾಳ್ಯ ಗ್ರಾಮದಲ್ಲಿ ಸಂಭವಿಸಿದೆ. ಯಡೆಯೂರು ಹೋಬಳಿ ತೆಂಗಿನಮರದಪಾಳ್ಯದ ಶಿವಣ್ಣ ಎಂಬುವವರ ಮನೆಯಲ್ಲಿ ಶುಕ್ರವಾರದಂದು, ಶಿವಣ್ಣನ ತಾಯಿ ಹುಚ್ಚಮ್ಮ ತೆಂಗಿನಮರದಪಾಳ್ಯದ ತಮ್ಮ ಮನೆಗೆ ಬೀಗವನ್ನು ಹಾಕಿಕೊಂಡು ದನಗಳನ್ನು ಮೇಯಿಸಲು ಹೊಲದ ಹತ್ತಿರ ಹೋಗಿದ್ದರು. ಕಳ್ಳರು ಮನೆಯ ಬೀಗವನ್ನು ಒಡೆದು ಮನೆಗೆ ಪ್ರವೇಶ ಮಾಡಿ, ಮನೆಯ ಅಲಮೇರಿನಲ್ಲಿದ್ದ ಸಾಮಾನುಗಳನ್ನು ಬಿಸಾಡಿ, ಕಬ್ಬಿಣದ ಟ್ರಂಕ್‌ಗೆ ಹಾಕಿದ್ದ ಬೀಗವನ್ನು ಕಿತ್ತು, ಟ್ರಂಕ ನಲ್ಲಿದ್ದ ಎರಡು ಎಳೆ ಮಾಂಗಲ್ಯ ಚೈನು, ಎರಡು ಬಂಗಾರದ ಬಳೆಗಳು ಹಾಗೂ ಒಂದು ಜೊತೆ ಬಂಗಾರದ ಓಲೆಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ದೂರು ನೀಡಿದ ಮೇರೆಗೆ ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.