ಆಂಧ್ರ ಅಪಹರಣಕಾರರ ಸೆರೆ
ರಾಮದುರ್ಗ: ಅಪಹರಣ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಸಿನಿಮೀಯ ರೀತಿಯಲ್ಲಿ ಮೂವರು ಆರೋಪಿಗಳ ಪೈಕಿ ಒಬ್ಬನನ್ನು ಆಂಧ್ರದ ನಾರಾಯಣಪೇಠ ಪೊಲೀಸರು ಭಾನುವಾರ ಬೆಳಗಾವಿ ಜಿಲ್ಲೆಯ ರಾಮದುರ್ಗ ಬಳಿ ಬಂಧಿಸಿ, 6 ಲಕ್ಷ ನಗದು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ಬಂಧಿಸುವ ಸಂದರ್ಭದಲ್ಲಿ ನಡೆದ ದಾಳಿ, ಪ್ರತಿ ದಾಳಿಯಲ್ಲಿ ಬಂಧಿತ ಆರೋಪಿ ಹಾಗೂ ಇಬ್ಬರು ಪೊಲೀಸರಿಗೆ ಗಾಯವಾಗಿದ್ದು, ಬೆಳಗಾವಿ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಂಧ್ರಪ್ರದೇಶದ ಮೆಹಬೂಬ ನಗರ ಜಿಲ್ಲೆಯ ನಾರಾಯಣಪೇಠ ಪೊಲೀಸ್ ಠಾಣೆಯ ವ್ಯಾಪ್ತಿಯ ನಿವಾಸಿ ಮೋಹಸೀನಬಾಬಾ ಮೌಲಾನಾ ಎಂಬವರನ್ನು ಮೂವರು ಸೇರಿ ಅಪಹರಣ ಮಾಡಿ ಆತನ ಬಿಡುಗಡೆಗೆ 15 ಲಕ್ಷ ಬೇಡಿಕೆ ಇಟ್ಟಿದ್ದರು. ಬಾಗಲಕೋಟೆ ಜಿಲ್ಲೆಯ ಲೋಕಾಪುರ ಬಳಿ ಭಾನುವಾರ ಹಣ ಪಡೆದು ಪರಾರಿಯಾಗುತ್ತಿದ್ದ ಸುದ್ದಿ ಅರಿತ ಆಂಧ್ರ ಪೊಲೀಸರು ಮುಧೋಳ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಾರ್ಯಪ್ರವೃತ್ತರಾದ ಸಿಪಿಐ ಎಸ್.ಬಿ.ಗಿರೀಶ ನೇತೃತ್ವದ ತಂಡ ದಾಳಿ ನಡೆಸಲು ತೆರಳಿದಾಗ ರಾಮದುರ್ಗ ತಾಲೂಕಿನ ಮುಳ್ಳೂರು ಘಾಟ್ ಬಳಿ ಆರೋಪಿಗಳು ಕಲ್ಲು ತೂರಾಟ ನಡೆಸಿದ್ದಾ. ಆಗ ಆತ್ಮರಕ್ಷಣೆಗೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಒಬ್ಬನನ್ನು ಬಂಧಿಸಿದ್ದು ಇನ್ನಿಬ್ಬರು ಪರಾರಿಯಾಗಿದ್ದಾರೆ ಎಂದು ಆಂಧ್ರದ ನಾರಾಯಣಪೇಠ ಠಾಣೆಯ ಪಿಎಸ್‌ಐ. ಡಿ.ಅಲರೆಡ್ಡಿ ಹೇಳಿದರು.
ಚಿರತೆ ಪ್ರತ್ಯಕ್ಷ, ಗಾಬರಿಗೊಂಡ ಜನತೆ
ಹಾಸನ: ಚಿರತೆಯೊಂದು ಗ್ರಾಮದಲ್ಲಿ ಕಾಣಿಸಿಕೊಂಡ ಪರಿಣಾಮ ಭಾನುವಾರ ತಾಲೂಕಿನ ದೊಡ್ಡಹೊನ್ನೇನಹಳ್ಳಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ತಾಲೂಕಿನ ಯಡಿಯೂರು ಬಳಿಯ ದೊಡ್ಡಹೊನ್ನೇನಹಳ್ಳಿಯ ಗ್ರಾಮಸ್ಥರು ಚಿರತೆಯನ್ನು ಕಂಡು ಗಾಬರಿಗೊಂಡಿದ್ದಾರೆ. ಚಿರತೆ ಮೊದಲು ಯಡಿಯೂರು ಗ್ರಾಮದಲ್ಲಿ ಕಾಣಿಸಿಕೊಂಡು ನಂತರ ಅಲ್ಲಿಂದ ಪಲಾಯನ ಮಾಡಿದೆ. ದೊಡ್ಡಹೊನ್ನೆನಹಳ್ಳಿ ಗ್ರಾಮಸ್ಥರು ವಾಹನದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಎದುರಿಗೆ ಬಂದಂತಹ ಚರಿತೆಯನ್ನು ಕಂಡು ಗಾಬರಿಗೊಂಡಿದ್ದಾರೆ. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿಯನ್ನು ಮುಟ್ಟಿಸಿದ್ದು, ಸ್ಥಳಕ್ಕಾಗಮಿಸಿದರು ಸಿಬ್ಬಂದಿ ಚಿರತೆಯ ಹುಡುಕಾಟ ನಡೆಸಿ ವಾಪಸ್ ತೆರಳಿದರು.