ಕನಕದಾಸರು ಅನಿಷ್ಟ ಪಿಡುಗುಗಳ ವಿರೋಧಿ: ಶಾಸಕ ಎಂ.ಟಿ.ಕೃಷ್ಣಪ್ಪ
ಕನ್ನಡಪ್ರಭ ವಾರ್ತೆ, ತುರುವೇಕೆರೆ, ನ,24
ಸಮಾಜದಲ್ಲಿ ಬೀಡುಬಿಟ್ಟಿದ್ದ ಅನಿಷ್ಟ ಪದ್ಧತಿಗಳು, ಜಾತಿ ಪದ್ಧತಿಗಳು ಹಾಗೂ ಅಸಮಾನತೆಗಳ ವಿರುದ್ಧ 16 ನೇ ಶತಮಾನದಲ್ಲೇ ಕನಕದಾಸರು ಹೋರಾಟ ಮಾಡಿದ ಮಹಾನುಭಾವ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ತಾಲ್ಲೂಕು ಆಡಳಿತ ಹಾಗೂ ತಾಲೂಕು ಕುರುಬ ಸಮಾಜದ ವತಿಯಿಂದ ನಡೆದ ಕನಕದಾಸರ 526 ನೇ ಜಯಂತ್ಯುತ್ಸವವನ್ನು ಉದ್ಘಾಟನೆ ಮಾಡಿ ಅವರು ಮಾತನಾಡುತ್ತಿದ್ದರು. ಜಾತಿ ವಿರೋಧಿಯಾಗಿದ್ದ ಕನಕದಾಸರು ಅಂದೇ ಕ್ರಾಂತಿಕಾರಿ ನಿಲುವುಗಳನ್ನು ತೆಗೆದುಕೊಂಡು ಜನಸಾಮಾನ್ಯರಲ್ಲಿ ಜಾಗೃತಿಯನ್ನು ಉಂಟು ಮಾಡಿದ್ದರು. ಈಗ ಪ್ರತಿಯೊಬ್ಬರಲ್ಲೂ ಜಾಗತಿಕ ಬದಲಾವಣೆಯ ಗಾಳಿ ಬೀಸಿದೆ. ಆದಾಗ್ಯೂ ಇನ್ನೂ ಕೆಲವು ಅನಿಷ್ಠ ಪದ್ಧತಿಗಳು ಇದ್ದು ಮುಗ್ಧ ಜನರನ್ನು ಶೋಷಣೆ ಮಾಡಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ರಾಜನಾಗಿ ಜೀವನದ ಸಕಲ ವೈಭವವನ್ನು ಸಂಪೂರ್ಣ ಅನುಭವಿಸಿದ್ದ ಕನಕದಾಸರಿಗೆ ನಿಜವಾದ ಜೀವನ ಮೌಲ್ಯದ ಅರಿವು ಆಗಿ ಸರ್ವವನ್ನೂ ತ್ಯಾಗ ಮಾಡಿದುದು ಆದರ್ಶನೀಯ ಎಂದರು. ತಮ್ಮ ಜೀವನದ ಅನುಭವವದ ಸಾರವನ್ನೇ ಜನಸಾಮಾನ್ಯರ ಅರಿವಿಗೆ ಬರುವಂತೆ ವಚನಗಳ ಮೂಲಕ ಜಾಗೃತಿ ಮೂಡಿಸಿದರು ಎಂದರು.
ನೆರವು ನೀಡಿ: ತಾಲೂಕು ಕುರುಬ ಸಮಾಜದ ಅಧ್ಯಕ್ಷ ಎಚ್.ಕೆ.ನಾಗೇಶ್ ಮಾತನಾಡಿ ಪಟ್ಟಣದಲ್ಲಿ ಕನಕ ಭವನ ನಿರ್ಮಿಸಲಾಗುತ್ತಿದೆ. ಸಂಪೂರ್ಣಗೊಳ್ಳಲು ಇನ್ನೂ ಲಕ್ಷಾಂತರ ರು.ಗಳ ಅಗತ್ಯವಿರುವುದರಿಂದ ಎಲ್ಲಾ ಜನಪ್ರತಿನಿಧಿಗಳು ಸೂಕ್ತ ನೆರವು ನೀಡಬೇಕು ಎಂದು ವಿನಂತಿಸಿಕೊಂಡರು. ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಕಂಚೀರಾಯಪ್ಪ ಕನಕ ದಾಸರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ತಾಲೂಕು ಪಂಚಾಯ್ತಿ ಸದಸ್ಯ ಮಲ್ಲೇಶ್ ಪ್ರಾಸ್ತಾವಿಕ ಭಾಷಣ ಮಾಡಿದರು.
ಸಾರ್ವಜನಿಕರ ಸಭೆಗೆ ಮುನ್ನ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕನಕದಾಸರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ನಡುವನಹಳ್ಳಿಯ ಬೀರಲಿಂಗೇಶ್ವರ ಉತ್ಸವ, ರಾಜ್ಯ ಪ್ರಶಸ್ತಿ ಪುರಸ್ಕೃತ ಲಕ್ಕಣ್ಣ ತಂಡದವರ ಸೋಮನ ಕುಣಿತ, ಲಿಂಗದೇವರ ಕುಣಿತ, ಕೋಲಾಟ, ನಾಸಿಕ್ ಡೋಲ್, ಸಂಗೊಳ್ಳಿ ರಾಯಣ್ಣ, ಕನಕದಾಸರ ವೇಷಭೂಷಣಗಳು ಗಮನ ಸೆಳೆದವು. ಕುರುಬ ಸಮಾಜದ ಪದಾದಿಕಾರಿಗಳು ಕನಕದಾಸರ ಕಟೌಟ್ಗೆ ಕ್ಷೀರಾಭಿಷೇಕ ಮಾಡಿದರು.
ವಿದ್ಯಾರ್ಥಿಗಳಿಗೆ ಪುರಸ್ಕಾರ: ಸಮಾರಂಭದಲ್ಲಿ 10 ಕ್ಕೂ ಹೆಚ್ಚು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ತಹಸೀಲ್ದಾರ್ ನಂಜಪ್ಪ, ಇಓ ವಾಳ್ವೇಕರ್, ಬಿಇಓ ರಂಗಧಾಮಯ್ಯ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಕುಮಾರ್, ತಾಲೂಕು ಪಂಚಾಯ್ತಿ ಅಧ್ಯಕ್ಷ ಲಕ್ಷ್ಮೀಕಾಂತ್, ಎಪಿಎಂಸಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ತಾಲೂಕು ಪಂಚಾಯ್ತಿ ಸದಸ್ಯ ವಿ.ಟಿ. ವೆಂಕಟರಾಮಯ್ಯ, ಪ.ಪಂ.ಮಾಜಿ ಅಧ್ಯಕ್ಷ ಆರ್.ಮಲ್ಲಿಕಾರ್ಜುನ್, ಕುರುಬ ಸಮಾಜದ ಅಧ್ಯಕ್ಷ ಎಚ್.ಕೆ.ನಾಗೇಶ್, ರೇವಣ್ಣ, ಪರುಶುರಾಮಯ್ಯ, ನಿಂಗಪ್ಪ ಮೊದಲಾದವರು ಭಾಗವಹಿಸಿದ್ದರು.