ಕೆಟ್ಟದ್ದಕ್ಕೆಲ್ಲಾ ಹೆಣ್ಣನ್ನೇ ದೂಷಿಸಬೇಡಿ: ಎಂ.ಸಿ.ಲಲಿತಾ
ಕ.ಪ್ರ.ವಾರ್ತೆ ತುಮಕೂರು ನ. 25
ಕೆಟ್ಟದ್ದಕ್ಕೆಲ್ಲಾ ಹೆಣ್ಣನ್ನೇ ದೂಷಿಸಬೇಡಿ. ಘಟನೆಗೆ ಕಾರಣ ಅರಿಯುವ ಪ್ರಯತ್ನ ಮಾಡಿ. ಮೂಢರಂತೆ ವರ್ತಿಸುವುದನ್ನು ಬಿಡಿ. ಮೌಢ್ಯ ಬಿಡಿ ಎಂದು ಲೇಖಕಿ ಎಂ.ಸಿ. ಲಲಿತಾ ಮಾರ್ಮಿಕವಾಗಿ ನುಡಿದರು.
ಅವರು ರಾಷ್ಟ್ರೀಯ ಭಾವೈಕ್ಯತಾ ಸಪ್ತಾಹದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ತುಮಕೂರಿನ ಬಾಲಭವನದಲ್ಲಿ ಆಯೋಜಿಸಿದ್ದ ಮಹಿಳಾ ದಿನ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿದರು.
ಕುಟುಂಬದಲ್ಲಿ ನಡೆಯುವ ಎಲ್ಲಾ ಕೆಟ್ಟ ಘಟನೆಗಳಿಗೂ ಆ ಮನೆಯ ಹೆಣ್ಣೇ ಕಾರಣ ಎಂದು ಕೆಲವರು ದೂಷಿಸುವುದು ಉಂಟು. ಆದರೆ ಯಾವುದೇ ಕಾರಣಕ್ಕೂ ಹೆಣ್ಣನ್ನು ಹೊಣೆಗಾರಳನ್ನಾಗಿ ಮಾಡಬೇಡಿ. ಕುರುಡು ನಂಬಿಕೆಗಳನ್ನು ಬಿಟ್ಟು, ವೈಚಾರಿಕ ನೆಲೆಗಟ್ಟಿನಲ್ಲಿ, ವಸ್ತುಸ್ಥಿತಿ ಅರಿಯುವ ಪ್ರಯತ್ನ ಮಾಡಿ ಎಂದು ಸಲಹೆ ನೀಡಿದರು.
ಕೆಲವೊಂದು ಸಂದರ್ಭದಲ್ಲಿ ಕುಟುಂಬದಲ್ಲಿ ಸಣ್ಣ-ಪುಟ್ಟ ಅವಘಡಗಳು ಸಂಭವಿಸುತ್ತವೆ. ಇದಕ್ಕೆ ಹೆಣ್ಣು ಹೊಣೆಗಾರಳಲ್ಲ. ಕಾರಣ ಬೇರೆಯೇ ಇರುತ್ತದೆ. ಆದರೆ ಆಕೆಯನ್ನು ದೂಷಿಸುತ್ತಾ ಕಾಲು ಗುಣ ಸರಿಯಿಲ್ಲ ಎಂದೆಲ್ಲಾ ಹೇಳಿ ಗೌರವ ಕಳೆಯಬಾರದು ಎಂದರು.
ಹೆಣ್ಣಿಗೆ ಅನಾದಿಕಾಲದಿಂದಲೂ ತನ್ನದೇ ಆದ ಗುಣಗಳಿರುವದನ್ನು ಕಾಣಬಹುದಾಗಿದೆ. ರಾಮಾಯಣದಲ್ಲಿ ಗಾಂಧಾರಿಯು ರಾಜನೀತಿ ಅನುಸರಿಸಿದ ಪ್ರಸಂಗ ನಮ್ಮ ಕಣ್ಣ ಮುಂದೆ ಇದೆ. ಧೃತರಾಷ್ಟ್ರ ಮಕ್ಕಳಿಗಾಗಿ ಕುರುಡು ಪ್ರೇಮ ಪ್ರದರ್ಶಿಸಿದರು. ಗಾಂಧಾರಿ ರಾಜನೀತಿ ಅನುಸರಿಸುತ್ತಲೇ ಧರ್ಮಕ್ಕೆ ಜಯವಾಗಲಿ ಎಂದು ಹಾರೈಸಿದಳು. 12 ನೇ ಶತಮಾನದಲ್ಲಿ ಅಕ್ಕಮಹಾದೇವಿಯು ಹೆಣ್ಣಿನ ಆಯ್ಕೆ ಸ್ವಾತಂತ್ರದ ಬಗ್ಗೆ ಪ್ರತಿಪಾದಿಸಿದಳು. ವಚನಕಾರ್ತಿಯರು ಆಗಲೇ ಮಹಿಳಾ ಸ್ವಾತಂತ್ಯ್ರದ ಬಗ್ಗೆ ಪ್ರಸ್ತಾಪಿಸಿದ್ದು, ಆನಂತರದ ದಿನಗಳಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾದವು. ಒನಕೆ ಓಬವ್ವ, ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ ಮುಂತಾದವರ ಯಶೋಗಾತೆಯನ್ನು ಸ್ಮರಿಸಿಕೊಂಡರೆ ವೀರ ಮಹಿಳೆಯರ ಹೋರಾಟ ಇಂದಿನವರಿಗೆ ಸ್ಫೂರ್ತಿಯಾಗಬೇಕು. ಭಾರತೀಯ ಮಹಿಳೆ ವಿಶ್ವ ಮಟ್ಟದಲ್ಲಿ ತನ್ನದೇ ಆದ ಸ್ಥಾನ ಪಡೆದುಕೊಂಡಿದ್ದಾಳೆ ಎಂದು ವಿವರಿಸಿದರು.
ದುಡ್ಡು ಕೊಟ್ಟರೆ ಸಾಲದು: ಮಹಿಳಾ ಇಲಾಖೆಯ ಉಪನಿರ್ದೇಶಕಿ ಎನ್. ಸುಜಾತ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರ ಮೇಲೆ ಇಂದು ಜವಾಬ್ದಾರಿ ಹೆಚ್ಚಿದೆ. ಕುಟುಂಬ ಸಾಮರಸ್ಯ ಕಾಪಾಡುವ ಜೊತೆ ಜೊತೆಗೆ ಸಮಾಜದಲ್ಲಿ ಗುರುತಿಸಿ ಕೊಳ್ಳುವ. ಆರ್ಥಿಕ ಸ್ಥಿತಿ ಸುಧಾರಿಸುವ ಮಟ್ಟಕ್ಕೆ ಮಹಿಳೆ ತಲುಪಿರುವುದು ಶ್ಲಾಘನೀಯ ಸಂಗತಿ. ಕುಟುಂಬ ಭಾಂಧವ್ಯ ಹಾಗೂ ಮಕ್ಕಳನ್ನು ಉತ್ತಮ ಹಾದಿಯತ್ತಾ ಕೊಂಡೊಯ್ಯುವ ಹೊಣೆಗಾರಿಕೆ ಸಹ ಮಹಿಳೆಯ ಮೇಲೆ ಇದ್ದು ಹೆಚ್ಚಿನ ನಿಗಾವಹಿಸುವಂತೆ ಕರೆ ನೀಡಿದರು. ಮಕ್ಕಳಿಗೆ ದುಡ್ಡು ಕೊಟ್ಟರೆ ಸಾಲದು ಅವರ ಮೇಲೆ ನಿಗಾ ಇರಿಸಬೇಕೆಂದರು.
ವಾಸ್ತು, ಜೋತಿಷ್ಯದಿಂದ ದೂರವಿರಿ: ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ. ರಾಜಕುಮಾರ್ ಮಾತನಾಡಿ, ಮಹಿಳೆಯನ್ನು ದಿಕ್ಕು ತಪ್ಪಿಸುವ ಕೆಲಸಗಳು ಸಮಾಜದಲ್ಲಿ ನಿರಂತರವಾಗಿ ಇಂದಿಗೂ ನಡೆಯುತ್ತಿವೆ. ಖಾಸಗಿ ಚಾನಲ್ಗಳು ಕೌಟುಂಬಿಕ ಸೌಹಾರ್ದ ಕೆಡಿಸುವಂತಹ ದೃಶ್ಯಗಳನ್ನೇ ಹೆಚ್ಚಾಗಿ ಪ್ರಸಾರ ಮಾಡುತ್ತಿವೆ. ಅದರಲ್ಲಿ ಬರುವ ಜ್ಯೋತಿಷಿಗಳು ಮಹಿಳೆಯರ ಭಾವನೆಗಳ ಮೇಲೆ ಲಗ್ಗೆ ಹಾಕುತ್ತಿದ್ದಾರೆ. ಅವರ ಮನಸನ್ನು ಘಾಸಿಗೊಳಿಸುತ್ತಿದ್ದಾರೆ. ಆದರೆ ಇಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ಗಮನಸಹರಿಸಬಾರದು. ಇದನ್ನು ಮೀರಿದ ಬದುಕಿನತ್ತ ಆಲೋಚನೆ ಮಾಡಬೇಕು. ಕೌಟುಂಬಿಕ ಸಾಮರಸ್ಯ ಇಂದು ಅವಶ್ಯಕವಾಗಿ ಬೇಕಾಗಿದೆ. ವಾಸ್ತು, ಜೋತಿಷ್ಯದಿಂದ ದೂರವಿರಿ ಎಂದರು.
ಇಲಾಖೆಯ ನಿರೂಪಣಾಧಿಕಾರಿ ನಟರಾಜು, ಶಿವಕುಮಾರಯ್ಯ, ಮಲ್ಲಯ್ಯ, ವಿಶ್ವನಾಥ್, ಹೊನ್ನೇಶಪ್ಪ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.