ದಲಿತ ಉದ್ಯಮಿಗಳಿಗೆ ಕೇವಲ 120 ಎಕರೆ
ಕ.ಪ್ರ.ವಾರ್ತೆ ತುಮಕೂರು ನ. 25
ರಾಜ್ಯದಲ್ಲಿ ಕೆಐಎಡಿಬಿ ಸುಮಾರು 36 ಸಾವಿರ ಎಕರೆ ವಶಪಡಿಸಿಕೊಂಡು ಕೈಗಾರಿಕೋದ್ಯಮಿಗಳಿಗೆ ವಿತರಿಸಿದೆ. ಇದರಲ್ಲಿ ಸುಮಾರು 10 ರಿಂದ 15 ಸಾವಿರ ಎಕರೆ ದಲಿತರಿಗೆ ಸೇರಿದ ಭೂಮಿಯೇ ಆಗಿದೆ. ಆದರೆ ದಲಿತ ಉದ್ಯಮಿಗಳಿಗೆ ನೀಡಿರುವುದು ಕೇವಲ 120 ಎಕರೆ ಭೂಮಿ ಮಾತ್ರ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಸಾಹಿತಿ ಡಾ.ಎಲ್. ಹನುಮಂತಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಅವರು ತುಮಕೂರಿನ ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ವರ್ತಮಾನ ಬಳಗ, ಬೆಂಗಳೂರು ಮತ್ತು ತುಮಕೂರಿನ ಭೀಮ್-ರಾಮ್ ಸಮಾಜ ಕಲ್ಯಾಣ ಸಂಸ್ಥೆ ಸಂಯುಕ್ತವಾಗಿ ಏರ್ಪಡಿಸಿದ್ದ ದಲಿತರು ಮತ್ತು ಉದ್ಯಮ ಶೀಲತೆ ಎಂಬ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಜಿ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರ ಕಾಲದಲ್ಲಿ ದಲಿತರಿಗೆ ಭೂಮಿ ನೀಡುವ ವಿಚಾರವಾಗಿ ಸಮಿತಿಯೊಂದನ್ನು ರಚಿಸಲಾಗಿತ್ತು. ಆ ವರದಿಯ ಪ್ರಕಾರ ಲಭ್ಯವಿರುವ ಭೂಮಿಯನ್ನು ದಲಿತರಿಗೆ ವಿತರಿಸಲು ಶಿಫಾರಸು ಮಾಡಲಾಗಿತ್ತು. ಆದರೆ ಇದುವರೆಗೂ ಈ ವರದಿ ಜಾರಿಗೆ ಬಂದಿಲ್ಲ. ಜಾಗತೀಕರಣದ ಫಲವಾಗಿ ಖಾಸಗಿ ಉದ್ದಿಮೆಗಳು ನಾಗಾಲೋಟದಲ್ಲಿ ಓಡುತ್ತಿವೆ. ಮೇಲ್ಜಾತಿ ಉದ್ಯಮಿಗಳಿಗೆ ಸರ್ಕಾರ ನಿರಂತರವಾಗಿ ಮಣೆ ಹಾಕುತ್ತಲೇ ಬಂದಿದ್ದು, ದಲಿತರನ್ನು ನಿರಂತರವಾಗಿ ಕಡೆಗಣಿಸುತ್ತಲೇ ಇದೆ. ಇದಕ್ಕೆ ಕೆಐಎಡಿಬಿ ದಲಿತರಿಗೆ ಉದ್ಯಮ ಸ್ಥಾಪಿಸಲು ನೀಡಿರುವ ಕೇವಲ 120 ಎಕರೆ ಭೂಮಿಯೇ ಸಾಕ್ಷಿ. ಈ ತಾರತಮ್ಯ ಕೂಡಲೇ ನಿವಾರಣೆಯಾಗಬೇಕು ಎಂದು ಒತ್ತಾಯಿಸಿದರು.
ಶೇ. 4 ಬಡ್ಡಿದರದಲ್ಲಿ ಸಾಲ: ದಲಿತರು ಉದ್ದಿಮೆ ಸ್ಥಾಪಿಸಲು ಸರಕಾರಿ ಹಣಕಾಸು ಸಂಸ್ಥೆಗಳಿಂದ ಶೇ. 4 ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರೆಯುತ್ತಿದೆ. ಬಡ್ಡಿ ರಹಿತ ಸಾಲ ನೀಡುವಂತೆ ಸರಕಾರವನ್ನು ಒತ್ತಾಯಿಸಲಾಗಿದೆ. ಆದ್ದರಿಂದ ಯುವಕರು ತಾವು ಇನ್ನೊಬ್ಬರ ಬಳಿ ಗುಲಾಮರಾಗಿ ಕೆಲಸ ಮಾಡುವ ಬದಲು ತಾವೇ ಉದ್ಯಮಿಗಳಾಗಲು ಮುಂದಾದರೆ ಅಗತ್ಯವಿರುವ ಎಲ್ಲಾ ರೀತಿಯ ನೆರವನ್ನು ನೀಡಲು ವರ್ತಮಾನನ ಬಳಗ ಸಿದ್ದವಿದೆ. ಈ ನಿಟ್ಟಿನಲ್ಲಿ ಯುವಕರು ಚಿಂತನೆ ನಡೆಸಬೇಕಾಗಿದೆ ಎಂದರು.
ದಲಿತರು ಬಂಡವಾಳಶಾಹಿಗಳಾಗುವ ಮೂಲಕ ಜಾಗತೀಕರಣದ ಲಾಭ ಪಡೆಯಲು ಮುಂದಾಗಬೇಕಿದೆ. ದಲಿತರು ಬೆಲೆಯೇ ಇಲ್ಲದ ತಮ್ಮ ಕುಲ-ಕಸುಬುಗಳಿಂದ ಹೊರಬಂದು ಉದ್ಯಮ ಶೀಲರಾಗುವ ಮೂಲಕ ಜಾಗತೀಕರಣದ ಅನುಕೂಲ ಪಡೆಯುವಂತೆ ಹನುಮಂತಯ್ಯ ಕರೆ ನೀಡಿದರು.
ಖಾಸಗಿಯಲ್ಲಿ ಮೀಸಲು ಅನಿವಾರ್ಯ: ದಲಿತರಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾದಂತೆ ಉದ್ಯೋಗಗಳ ಸಂಖ್ಯೆ ಹೆಚ್ಚಾಗುತ್ತಿಲ್ಲ. ಇದರಿಂದಾಗಿ ಪದವಿ ಪಡೆದವರು ಸರ್ಕಾರಿ ಕೆಲಸ ದೊರೆಯದೆ, ಕೂಲಿ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳು ಹಂತ-ಹಂತವಾಗಿ ಬಾಗಿಲು ಮುಚ್ಚುತ್ತಿರುವುದರಿಂದ, ಮೀಸಲಾತಿ ಇದ್ದರೂ ಉಪಯೋಗಕ್ಕೆ ಬಾರದಂತಾಗಿದೆ. ಆದ್ದರಿಂದ ಜಾಗತೀಕಣರದ ಫಲವಾಗಿ ಲಕ್ಷಾಂತರ ಉದ್ಯೊಗ ಸೃಷ್ಟಿಯಾಗುತ್ತಿರುವ ಖಾಸಗಿ ವಲಯದಲ್ಲಿ ಮೀಸಲಾತಿಗಾಗಿ ದಲಿತರು ಹೋರಾಟ ರೂಪಿಸುವ ಅಗತ್ಯವಿದೆ. ಇದರ ಜೊತೆಗೆ ಸ್ವಯಂ ಪ್ರೇರಣೆಯಿಂದ ತಮ್ಮ ಕಾಲ ಮೇಲೆ ತಾವು ನಿಲ್ಲುವಂತಹ ಸ್ವಯಂ ಉದ್ಯೋಗ ಆರಂಭಿಸಿ ತಾವು ಉದ್ಯೋಗಕ್ಕಾಗಿ ಅಲೆಯುವ ಬದಲು ತಾವೇ ಉದ್ಯೋಗ ನೀಡುವಂತಹ ಸ್ಥಿತಿಗೆ ಬರಬೇಕೆಂದು ಹನಮಂತಯ್ಯ ಸಲಹೆ ನೀಡಿದರು.
ಆಂಧ್ರ ಮಾದರಿ ಕೈಗಾರಿಕಾ ನೀತಿ: ದಲಿತರು ಖಾಸಗಿ ಮೀಸಲಾತಿಗಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆದರೆ ಪ್ರಯೋಜನವಾಗಿಲ್ಲ. ಸರ್ಕಾರ ಆಂಧ್ರಪ್ರದೇಶ ಮಾದರಿಯಲ್ಲಿ ದಲಿತರಿಗೆ ಕೈಗಾರಿಕಾ ನೀತಿ ರೂಪಿಸಬೇಕು. ಆಂಧ್ರಪ್ರದೇಶ ಸರ್ಕಾರ ಉದ್ಯಮ ಸ್ಥಾಪಿಸಲು ಮುಂದಾಗುವ ದಲಿತರಿಗೆ ವಿಶೇಷ ಅನುದಾನ, ಪ್ರತಿ ಯೂನಿಟ್ ವಿದ್ಯುತ್ಗೆ 1 ರು. ಸಹಾಯ ಧನ ನೀಡುತ್ತಿದೆ. ಬ್ಯಾಂಕ್ ಸಾಲ ನೀಡಲು ಸರ್ಕಾರವೇ ಭದ್ರತೆ ನೀಡುತ್ತಿದೆ. ಇದೇ ಮಾದರಿ ಕರ್ನಾಟಕದಲ್ಲೂ ಜಾರಿಯಾಗಬೇಕು. ರಾಜ್ಯ ಸರ್ಕಾರದ ಹೊಸ ಕೈಗಾರಿಕಾ ನೀತಿಯಲ್ಲಿ ಎಸ್ಸಿ, ಎಸ್ಟಿ ಪಂಗಡದವರಿಗೆ ವಿಶೇಷ ನೀತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಆಸ್ತಿ ಸಮಾನ ಹಂಚಿಕೆ: ಸಮಾಜದ ಆಸ್ತಿ ಸಮಾನವಾಗಿ ಹಂಚಿಕೆಯಾಗಬೇಕು. ಇದು ಜನಸಂಖ್ಯೆ ಆಧಾರದ ಮೇಲೆ ಆಗಬೇಕು. ಬೆಂಗಳೂರಿನಲ್ಲಿ ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ ಸಮುದಾಯದ ಶಿಕ್ಷಣ ಸಂಸ್ಥೆಗಳ ಸುಪರ್ದಿನಲ್ಲಿ ಸುಮಾರು 10 ಸಾವಿರ ಎಕರೆಗಿಂತಲೂ ಹೆಚ್ಚು ಭೂಮಿಯಿದೆ. ಆದರೆ ದಲಿತರಿಗೆ ಒಂದು ಎಕರೆ ಭೂಮಿ ರಾಜಧಾನಿಯಲ್ಲಿ ದೊರಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಸ್ಲಿಮರು ಸ್ವಂತ ಬಲದಿಂದ ತಮ್ಮ ಕಾಲ ಮೇಲೆ ನಿಲ್ಲುವ ಶಕ್ತಿ ಬೆಳೆಸಿಕೊಂಡಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ಹೆಚ್ಚು-ಹೆಚ್ಚು ತೆರೆಯುವ ಶಕ್ತಿ ದಲಿತರಿಗೆ ಬರಬೇಕು ಎಂದರು.
ಹೋರಾಟದ ಮಾರ್ಗ ಬದಲಾವಣೆ: ಕೆಲ ತಿಂಗಳ ಹಿಂದೆ ನಡೆದ ದೆಹಲಿ ಅತ್ಯಾಚಾರ ಪ್ರಕರಣವೊಂದರಲ್ಲಿ ನಡೆದ ಸಾರ್ವಜನಿಕ ಹೋರಾಟದ ಫಲವಾಗಿ ಬಹುಬೇಗ ನ್ಯಾಯ ದೊರೆಯಿತು. ಆದರೆ ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆದು ಹತ್ತಾರು ವರ್ಷಗಳೇ ಕಳೆದಿದ್ದರೂ ಇದುವರೆಗೂ ವಿಚಾರಣೆ ಪೂರ್ಣಗೊಂಡಿಲ್ಲ. ಹಾಗಾಗಿ ದಲಿತರು ತಮ್ಮ ಹೋರಾಟದ ಮಾರ್ಗವನ್ನು ಬದಲಾಯಿಸಿಕೊಳ್ಳುವ ಅಗತ್ಯವಿದೆ. ಮಲ ಸುರಿದುಕೊಂಡು, ಅರೆಬೆತ್ತಲೆ ಮೆರವಣಿಗೆ ಕೈಬಿಟ್ಟು, ಕೈಗೆ ಖಡ್ಗ ಎತ್ತಿಕೊಳ್ಳುವ ಅಗತ್ಯ ಬಂದೊದಗುವ ವಾತಾವರಣ ನಿರ್ಮಾಣವಾಗುತ್ತಿರುವುದು ವಿಷಾದನೀಯ ಸಂಗತಿ ಎಂದರು.
ವರ್ತಮಾನ ಬಳಗದ ರವಿಕೃಷ್ಣಾರೆಡ್ಡಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ದಲಿತರಲ್ಲಿ ಕೈಗಾರಿಕಾ ಪ್ರಜ್ಞೆ ಮೂಡಿಸುವ ಉದ್ದೇಶದಿಂದ ಕೆಲಸ ಮಾಡಲಾಗುತ್ತಿದೆ. ಹಾಸನದಲ್ಲಿ ಇದೇ ರೀತಿಯ ಕಾರ್ಯಕ್ರಮದ ಮೂಲಕ ಹೊಸ ಚಿಂತನೆಗಳನ್ನು ಹರಿಯಬಿಡಲಾಗಿದೆ. ಇದು ಎರಡನೇ ಕಾರ್ಯಕ್ರಮವಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಪ್ರಗತಿಪರ ಹೋರಾಟಗಾರ ಚೇಳೂರು ವೆಂಕಟೇಶ್, ಬಿ.ಆರ್.ವೆಂಕಟೇಶಪ್ಪ, ವಕೀಲ ಮೋಹನ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು. ಒಂದು ನೂರಕ್ಕೂ ಹೆಚ್ಚು ದಲಿತ ಯುವಕರು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಬಂದೂಕಿನ ಶಂಕರ ಬಿದರಿ, ಮಚ್ಚಿನ ಹನುಮಂತಯ್ಯ
ತುಮಕೂರು: ಭ್ರಷ್ಟ ವ್ಯವಸ್ಥೆಯಿಂದಾಗಿ ದೇಶ ಅಸಹನೀಯ ವಾತಾವರಣದತ್ತ ಜಾರುತ್ತಿರುವ ಕುರಿತಂತೆ ರಾಜ್ಯದ ಇಬ್ಬರು ಗಣ್ಯರು ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅತ್ತ ಹುಬ್ಬಳ್ಳಿಯಲ್ಲಿ ಭ್ರಷ್ಟ ರಾಜಕಾರಣಿಗಳನ್ನು, ಅಧಿಕಾರಿಗಳನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲುವಂತೆ ರಾಜ್ಯ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರಿ ಬಿದರಿ ಕರೆ ನೀಡಿದ ಬೆನ್ನಲ್ಲೇ,ಇತ್ತ ತುಮಕೂರಿನಲ್ಲಿ ಸಾಹಿತಿ, ವಿಧಾನಪರಿಷತ್ ಮಾಜಿ ಸದಸ್ಯ ಡಾ.ಎಲ್. ಹನುಮಂತಯ್ಯ ಸರ್ಕಾರಿ ಸೌಲಭ್ಯ ದೊರಕುವುದು ವಿನಾಕಾರಣ ವಿಳಂಬವಾದರೆ ಮಚ್ಚು ಹಿಡಿದು ಸವಲತ್ತು ಪಡೆದುಕೊಳ್ಳುವಂತೆ ದಲಿತರಿಗೆ ಸಲಹೆ ನೀಡಿದ್ದಾರೆ.
ಅವರು ತುಮಕೂರಿನಲ್ಲಿ ಏರ್ಪಾಟಾಗಿದ್ದ ದಲಿತರು ಹಾಗೂ ಉದ್ಯಮಶೀಲತೆ ಎಂಬ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರಿ ಇಲಾಖೆಗಳ ವಿಳಂಬ ಧೋರಣೆ, ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಮೇಲ್ಮನೆಯ ಮಾಜಿ ಸದಸ್ಯರೂ ಆಗಿರುವ ಡಾ.ಎಲ್. ಹನುಮಂತಯ್ಯ ಕಿಡಿ ಕಾರಿ, ಖಡ್ಗ ಹಿಡಿದು ಕೆಲಸ ಮಾಡಿಸಿಕೊಳ್ಳುವುದು ಅನಿವಾರ್ಯವಾಗುತ್ತಿರುವ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ವಿಷಾದಿಸಿದರು.
ಸೌಲಭ್ಯಗಳನ್ನು ಒದಗಿಸಲು ಸರ್ಕಾರಿ ಅಧಿಕಾರಿಗಳು ಮುಂದಾಗದಿದ್ದರೆ, ದಲಿತರು ಮಚ್ಚು ಹಿಡಿದು ಸರ್ಕಾರಿ ಕಚೇರಿಗಳಿಗೆ ಹೋಗಬೇಕು. ಆಗ ಎಲ್ಲ ಸರ್ಕಾರಿ ಸವಲತ್ತುಗಳು ತಮ್ಮಷ್ಟಕ್ಕೇ ತಾವೇ ಬರುತ್ತವೆ. ಅಲ್ಪಸಂಖ್ಯಾತರು ಅನ್ಯಾಯವಾದರೆ ಸಹಿಸಿಕೊಳ್ಳುವುದಿಲ್ಲ. ಆದ್ದರಿಂದಲೇ ಅವರು ಎಲ್ಲ ರಂಗಗಳಲ್ಲೂ ಮುಂದಿದ್ದಾರೆ. ಕೇವಲ ಕಡಿಮೆ ಬೆಲೆಗೆ ಅದೂ 38 ರು. ನೀಡಿದರೆ ಮಚ್ಚು ಸಿಗುತ್ತದೆ ಎಂದು ಹೇಳಿದರು.
ಹೋರಾಟದ ಮಾರ್ಗ ಬದಲಾವಣೆ: ಕೆಲ ತಿಂಗಳ ಹಿಂದೆ ನಡೆದ ದೆಹಲಿ ಅತ್ಯಾಚಾರ ಪ್ರಕರಣವೊಂದರಲ್ಲಿ ನಡೆದ ಸಾರ್ವಜನಿಕ ಹೋರಾಟದ ಫಲವಾಗಿ ಬಹುಬೇಗ ನ್ಯಾಯ ದೊರೆಯಿತು. ಆದರೆ ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆದು ಹತ್ತಾರು ವರ್ಷಗಳೇ ಕಳೆದಿದ್ದರೂ ಇದುವರೆಗೂ ವಿಚಾರಣೆ ಪೂರ್ಣಗೊಂಡಿಲ್ಲ. ಹಾಗಾಗಿ ದಲಿತರು ತಮ್ಮ ಹೋರಾಟದ ಮಾರ್ಗವನ್ನು ಬದಲಾಯಿಸಿಕೊಳ್ಳುವ ಅಗತ್ಯವಿದೆ. ಮಲ ಸುರಿದುಕೊಂಡು,ಅರೆಬೆತ್ತಲೆ ಮೆರವಣಿಗೆ ಕೈಬಿಟ್ಟು, ಕೈಗೆ ಖಡ್ಗ ಎತ್ತಿಕೊಳ್ಳುವ ಸಮಯ ಬಂದೊದಗುವ ವಾತಾವರಣ ನಿರ್ಮಾಣವಾಗುತ್ತಿರುವುದು ವಿಷಾದನೀಯ ಸಂಗತಿ ಎಂದರು.