ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಶಿಕ್ಷಕರೇ ನುಡಿ-ನಡೆ ಎರಡೂ ಒಂದೇ ಆಗಿರಲಿ

Srinivasa Murthy VN
Updated On : 26 Nov 2013, 1:25 am

ತುಮಕೂರು: ಶಿಕ್ಷಕರೇ ತಮ್ಮ ಸ್ಥಾನ-ಮಾನ ಅರಿತು ನಡೆಯಿರಿ. ಸಮಾಜಕ್ಕೆ ಮಾದರಿಯಾಗಿ. ನುಡಿ-ನಡೆ ಎರಡೂ ಒಂದೇ ಆಗಿರಲಿ ಎಂದು ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಎಚ್. ಹುಚ್ಚಯ್ಯ ಮಾರ್ಮಿಕವಾಗಿ ನುಡಿದರು.
ಅವರು ತುಮಕೂರಿನಲ್ಲಿ ರಾಜ್ಯ ಸರ್ಕಾರಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಬಿವೃದ್ಧಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಶೈಕ್ಷಣಿಕ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕರು ನುಡಿ ಮತ್ತು ನಡೆ ಎರಡರಲ್ಲಿಯೂ ಸಾಮ್ಯತೆಯನ್ನು ಕಾಪಾಡಿಕೊಳ್ಳಬೇಕಾಗಿದೆ. ಶಿಕ್ಷಕರ ನಡೆಯನ್ನು ಸಮಾಜ ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಶಿಕ್ಷಕ ಸರಿಯಾಗಿದ್ದಲ್ಲಿ ಸಮಾಜ ಸರಿಯಾಗಲು ಸಾಧ್ಯ ಎಂದರು.
ನಾಗರಿಕ ಸಮಾಜ ಎನಿಸಿಕೊಳ್ಳಬೇಕಾದರೆ ಅಲ್ಲಿ ಶಿಕ್ಷಣ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದೇ ರೀತಿ ಅಭಿವೃದ್ಧಿ ಮತ್ತು ಸಂಸ್ಕೃತಿ ಇವೆರಡೂ ಕೂಡ ಶಿಕ್ಷಣವನ್ನು ಅವಲಂಬಿಸಿವೆ. ಆದ್ದರಿಂದ ಶಿಕ್ಷಣ ತನ್ನ ಮೌಲ್ಯವನ್ನು ಕಳೆದುಕೊಳ್ಳದಂತೆ ನಾವು ಎಚ್ಚರಿಕೆ ವಹಿಸಬೇಕಾಗಿದೆ ಎಂದರು.
ಹಿಂಬಾಲಕರಿಗೆ ಪ್ರಶಸ್ತಿ: ದಲಿತ ಜನಾಂಗಕ್ಕೆ ಸೇರಿದ ನೌಕರರು ಅಧಿಕಾರಿಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಸತ್ಯ ಸಂಗತಿಯಾಗಿದೆ. ಇಷ್ಟು ದೊಡ್ಡ ಜಿಲ್ಲೆಯಲ್ಲಿ ಓರ್ವ ನಿಷ್ಠಾವಂತ, ದಕ್ಷ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಲಿಲ್ಲವೆಂದರೆ ನಿಜಕ್ಕೂ ನಾಚಿಗೇಡಿನ ಸಂಗತಿಯಾಗಿದೆ. ಶಾಸಕರು, ಸಂಸದರು ಹಾಗೂ ಇನ್ನಿತರ ಜನಪ್ರತಿನಿಧಿಗಳ ಹಿಂಬಾಲಕರಿಗೆ ಪ್ರಶಸ್ತಿಗಳು ದೊರೆಯುತ್ತಿವೆ ಇದು ತಪ್ಪಬೇಕು. ಇನ್ನು ಮುಂದೆ ಶಿಕ್ಷಕರಿಗೆ ಸವಲತ್ತು ಹಂಚಿಕೆಯಲ್ಲಿ ತಾರತಮ್ಯ ನಡೆದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖಾಸಗಿ ಶಾಲೆಗಳಿಗೆ ಪ್ರೋತ್ಸಾಹ: ಸರಕಾರ ಖಾಸಗಿ ಶಾಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಸರಕಾರಿ ಶಾಲೆಗಳಿಂದ ಗುಣಮಟ್ಟದ ಶಿಕ್ಷಣ ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಂತಿದೆ. ಆದರೆ ಇದು ತಪ್ಪು ಅಭಿಪ್ರಾಯ. ಆರ್.ಟಿ.ಇ, ಮತ್ತಿತತರ ಯೋಜನೆಗಳ ಮೂಲಕ ಖಾಸಗಿ ಸಂಸ್ಥೆಗಳಿಗೆ ನೀಡುತ್ತಿರುವ ಅನುದಾನವನ್ನು ಸರಕಾರಿ ಶಾಲೆಗಳಿಗೆ ನೀಡಿ ಮೂಲಭೂತ ಸೌಕರ್ಯ ಒದಗಿಸಿದರೆ ಗುಣಮಟ್ಟದ ಶಿಕ್ಷಣ ಅಲ್ಲಿಂದಲೂ ದೊರಕಿಸಲು ಸಾಧ್ಯವೆಂದು ಹುಚ್ಚಯ್ಯ ನುಡಿದರು.
ಹೆಚ್ಚಿನ ತರಬೇತಿ ಅಗತ್ಯ: ನಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂದರೆ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಪ್ರಶಿಕ್ಷಣಾರ್ಥಿಗಳಾಗಿ ಕಲಿಯುವಾಗಲೇ ಹೆಚ್ಚಿನ ತರಬೇತಿ ನೀಡಿ ಪರಿಪಕ್ವ ಜ್ಞಾನ ನೀಡಿ, ಕೌಶಲ್ಯಭರಿತ ಶಿಕ್ಷಕರನ್ನಾಗಿ ರೂಪಿಸಿದರೆ ಮಕ್ಕಳಿಗೆ ಹೆಚ್ಚಿನ ಜ್ಞಾನ ದೊರೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರಗಳು ಮುಂದಾಗಬೇಕೆಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ವೆಂಕಟೇಶಯ್ಯ ಮಾತನಾಡಿ, ರಾಜ್ಯದ ಒಟ್ಟಾರೆ ಮಾಧ್ಯಮಿಕ ಶಿಕ್ಷಕರ ಸಂಖ್ಯೆಯಲ್ಲಿ ಶೇ. 44 ರಷ್ಟಿರುವ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಶಿಕ್ಷಕರನ್ನು ಕಡೆಗಣಿಸಲಾಗುತ್ತಿದೆ. ಶಿಕ್ಷಕರ ಸಂಘಗಳಲ್ಲಿ ಒಂದೇ ಒಂದು ಪದಾಧಿಕಾರಿ ಹುದ್ದೆ ನೀಡಿಲ್ಲ. ಜತೆಗೆ ಅವರಿಗೆ ಇನ್ನಿಲ್ಲದ ಕಿರುಕುಳ ನಡೆಯುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಸಂಘಟನೆ ಕಟ್ಟಲಾಗಿದೆ. ಅಲ್ಲದೆ ಮುಂದಿನ 2014 ರ ಜುಲೈನಲ್ಲಿ ನಡೆಯುವ ರಾಜ್ಯ ಶಿಕ್ಷಕರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ದಲಿತ ಶಿಕ್ಷಕರಿಗೆ ಶೇ. 22.75 ರ ಮೀಸಲಾತಿ ನೀಡುವ ಜೊತೆಗೆ ಪ್ರಮುಖ ಪದಾಧಿಕಾರಿ ಹುದ್ದೆ ನೀಡದಿದ್ದರೆ ಕೆ.ಎ.ಟಿ. ಮೂಲಕ ಚುನಾವಣೆ ನಡೆಯದಂತೆ ನೋಡಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸಾಕಮ್ಮ ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಿದದರು. ಡಿಡಿಪಿಐ ಈಶ್ವರಯ್ಯ,ಬಿಇಓ ಬಸವರಾಜು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿಗೆ ಸರ್ಕಾರ ಹೊಣೆ
ತುಮಕೂರು: ಸಾರ್ವಜನಿಕ ಶಿಕ್ಷಣ ಕ್ಷೇತ್ರಕ್ಕೆ ಕಡಿಮೆ ಅನುದಾನ ನೀಡುವ ಮೂಲಕ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪರೋಕ್ಷ ಬೆಂಬಲ ನೀಡುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿಗೆ ಸರ್ಕಾರವೇ ನೇರ ಹೊಣೆ ಎಂದು ಜಿಪಂ ಸದಸ್ಯ ವೈ.ಎಚ್. ಹುಚ್ಚಯ್ಯ ಆರೋಪಿಸಿದರು. ಮೇಲ್ನೋಟಕ್ಕೆ ಸವಲತ್ತುಗಳ ಪ್ರದರ್ಶನ ನೀಡುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುವ ಮುಖವಾಡ ತೊಟ್ಟಿವೆ. ಸರ್ಕಾರಿ, ಖಾಸಗಿ ಶಿಕ್ಷಣ ಗುಣಮಟ್ಟದ ಹೋಲಿಕೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಆರ್‌ಟಿಇ ಅಡಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಬಡಮಕ್ಕಳಿಗೆ ಶೇ. 25 ರಷ್ಟು ಸೀಟು ಮೀಸಲಿರಿಸಿರುವುದು ಸರ್ಕಾರಿ ಶಾಲಾ ಗುಣಮಟ್ಟವನ್ನೇ ಅನುಮಾನಿಸುವಂತಾಗಿದೆ ಎಂದು ಹುಚ್ಚಯ್ಯ ಮಾರ್ಮಿಕವಾಗಿ ನುಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement