ಹೊಸಹಳ್ಳಿ ಕಲ್ಲೇಶ್ವರ ದೇವಾಲಯ ಜೀರ್ಣೋದ್ಧಾರ
ತುರುವೇಕೆರೆ: ತಾಲೂಕಿನ ಟಿ.ಹೊಸಹಳ್ಳಿಯ ಕಲ್ಲೇಶ್ವರ ದೇವಾಲಯ ಚಾಳುಕ್ಯರ ಕಾಲದ ವಾಸ್ತು ಶಿಲ್ಪದ ನಿರ್ಮಾಣವನ್ನು ಹೊಂದಿತ್ತು. ಹಲವು ಶತಮಾನದ ಈ ದೇವಾಲಯದ ಗರ್ಭಗುಡಿ, ಪಾತಾಳಂಕಣ, ಗೋಪುರ ಮೊದಲಾದ ಪ್ರಮುಖ ಭಾಗಗಳು ಪ್ರಕೃತಿಯ ಹೊಡೆತಕ್ಕೆ ಸಿಲುಕಿ ಹಾಳಾಗಿ ಅದೆಷ್ಟೋ ವರ್ಷಗಳೂ ಕಳೆದಿದ್ದವು. ಈ ಕಲ್ಲೇಶ್ವರ ದೇವರಿಗೆ ಸಾವಿರಾರು ಭಕ್ತಾದಿಗಳು ಇದ್ದಾರೆ. ದೇವಾಲಯದ ಒಳಗೆ ಹೋಗಲೂ ಸಹ ಆಗದ ಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಮನಗಂಡ ಆ ದೇವಾಲಯದ ಅರ್ಚಕ ಪ್ರಕಾಶ್ ನೇತೃತ್ವದಲ್ಲಿ ದೇವಾಲಯ ಜೀರ್ಣೋದ್ಧಾರ ಸಮಿತಿ ರಚನೆಗೊಂಡಿತು. ಭಕ್ತಾದಿಗಳು, ಗ್ರಾಮಸ್ಥರು ಹಾಗೂ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಕಳೆದ 2010 ರಲ್ಲಿ ಜೀರ್ಣೋದ್ಧಾರ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಮುಜರಾಯಿ ಇಲಾಖೆಯಿಂದ ಸುಮಾರು 2 ಲಕ್ಷ ರು.ಗಳ ಆರ್ಥಿಕ ನೆರವು, ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ 1 ಲಕ್ಷ ರು., ಗ್ರಾಮಸ್ಥರು ಹಾಗೂ ಭಕ್ತಾದಿಗಳಿಂದ ಸುಮಾರು 2.50 ಲಕ್ಷ ರು. ಸಂಗ್ರಹ ಮಾಡಿ ದೇವಾಲಯವನ್ನು ಜೀರ್ಣೋದ್ಧಾರ ಮಾಡಲಾಗಿದೆ.