ಗುಬ್ಬಿಗೆ ಹೆಲಿಕಾಪ್ಟರ್ ಉತ್ಪಾದನಾ ಘಟಕ
ಕ.ಪ್ರ.ವಾರ್ತೆ ತುಮಕೂರು ಸೆ. 1
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್ನಲ್ಲಿರುವ 772 ಎಕರೆ 3 ಗುಂಟೆ ಜಮೀನಿನಲ್ಲಿ ಹೆಲಿಕಾಪ್ಟರ್ ಉತ್ಪಾದನಾ ಘಟಕ ಸ್ಥಾಪನೆಗೆ ಅಗತ್ಯವಿರುವಷ್ಟು ಭೂಮಿ ನೀಡಲು ವೇದಿಕೆ ಸಜ್ಜಾಗುತ್ತಿದೆ. ಪ್ರಸ್ತುತ ಹಿಂದೂಸ್ಥಾನ್ ಏರೋನಾಟಿಕಲ್ ಲಿಮಿಟೆಡ್ (ಹೆಚ್ಎಎಲ್) ಈ ಸಂಬಂಧ ರಾಜ್ಯದ ಶಿವಮೊಗ್ಗ, ಬೀದರ್ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ, ತಾಂತ್ರಿಕ, ವಾತಾವರಣ, ಆರ್ಥಿಕ ಮತ್ತು ಮೂಲಭೂತ ಸೌಕರ್ಯಗಳ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆ ಬಹಳ ಪ್ರಾಶಸ್ತ್ಯವಾಗಿದೆ ಎಂಬ ನಿರ್ಧಾರಕ್ಕೆ ಬಂದಿದೆ.
ಆರಂಭದಲ್ಲಿ ಸುಮಾರು 4000 ಕೋಟಿ ರು. ವೆಚ್ಚದಲ್ಲಿ ಆರಂಭವಾಗುವ ಘಟಕದಿಂದ ಸುಮಾರು 3000 ಮಂದಿಗೆ ಉದ್ಯೋಗ ದೊರಕಲಿದೆ. ಮುಂದೆ 60 ಸಾವಿರ ಕೋಟಿ ರು. ವೆಚ್ಚದಲ್ಲಿ ಯೋಜನೆ ರೂಪಿಸಿ, 10 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಬಹುದಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸದ ಜಿ.ಎಸ್. ಬಸವರಾಜು, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ವಿಶೇಷ ಆಸಕ್ತಿ ವಹಿಸಿ ಯೋಜನೆಯ ಮಂಜೂರಾತಿಗೆ ಶ್ರಮಿಸುತ್ತಿವೆ.
ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ಗುಬ್ಬಿ ತಹಸೀಲ್ದಾರ್ ನೇತೃತ್ವದ ತಂಡ 1951 ರಿಂದಲೂ ಜಮೀನಿನ ಕಡತ ಪರಿಶೀಲಿಸಿ, ಸರ್ಕಾರಿ ಭೂಮಿಯನ್ನು ನೀಡಲು ಎಲ್ಲ ದಾಖಲೆಗಳನ್ನು ನೀಡಲು ಸಜ್ಜಾಗಿದ್ದಾರೆ. ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟೋನಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಯೋಜನೆಯ ಅನುಷ್ಠಾನಕ್ಕೆ ಸಕಾರಾತ್ಮಕ ನಿಲುವು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಮನವಿ: ಹೆಚ್ಎಎಲ್ ಘಟಕ ಸ್ಥಾಪಿಸಲು ಜಮೀನಿನ ಸುತ್ತ-ಮುತ್ತಲಿನ ಸುಮಾರು 2 ಕಿಮೀ ವ್ಯಾಪ್ತಿಯಲ್ಲಿ ಬರುವ ಸುತ್ತಮುತ್ತಲಿನ ಗ್ರಾಮಗಳನ್ನು ಹೆಚ್ಎಎಲ್ ಘಟಕ ದತ್ತು ಪಡೆದು ಕಾರ್ಪೋರೇಟ್ ರೆಸ್ಪಾನ್ಸಿಬಲಿಟಿ ಅನುದಾನದಡಿಯಲ್ಲಿ ಮೂಲಭೂತ ಸೌಕರ್ಯ ಒದಗಿಸಲು, ಜಮೀನು ಅನುಭವಿಸುತ್ತಿದ್ದ ರೈತರ ಮಕ್ಕಳಿಗೆ ಉದ್ಯೋಗ ನೀಡುವುದು, ಮಾದರಿ ಗ್ರಾಮಗಳನ್ನಾಗಿ ರೂಪಿಸುವುದು, ನಿವೇಶನ ನೀಡುವುದು, ಹೈಮಾವತಿ ನೀರಿನಿಂದ ರೈತರ ಜಮೀನುಗಳಿಗೆ ತುಂತುರು ನೀರಾವರಿ ಸೌಲಭ್ಯ ಕಲ್ಪಿಸುವುದು, ಘಟಕದ ವ್ಯಾಪ್ತಿಯಲ್ಲಿ ಸ್ಥಾಪಿಸುವ ಕೇಂದ್ರೀಯ ವಿದ್ಯಾಲಯದಲ್ಲಿ ರೈತರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವುದು ಸೇರಿದಂತೆ ಅನೇಕ ಯೋಜನೆಗಳನ್ನು ಎಂಓಯು ಮಾಡುವ ಹಂತದಲ್ಲಿಯೇ ಪ್ರಸ್ತಾಪಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಈಗಾಗಲೇ ಕೆಐಎಡಿಬಿಯಿಂದ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ರೈತರಿಗೆ ಮಂಜೂರಾಗಿರುವ 151-35 ಎಕರೆ ಜಮೀನನ್ನು ಅವರಿಗೆ ಬಿಡುವುದು, ಬಿದರೆಹಳ್ಳ ಕಾವಲ್ ಗ್ರಾಮದ ವ್ಯಾಪ್ತಿಯನ್ನು ಸಹ ಭೂ ಸ್ವಾಧೀನದಿಂದ ಕೈಬಿಡಲಾಗಿದೆ. ಹಾಗೂ ರೈತರ ಜಮೀನನ್ನು ಸಹ ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿದೆ ಎಂದು ಬಸವರಾಜ್ ತಿಳಿಸಿದರು.
2009 ರಿಂದ ತುಮಕೂರು ಜಿಲ್ಲೆಗೆ ಹೆಚ್ಎಎಲ್ ಘಟಕ ಮಂಜೂರು ಮಾಡಲು ವಿವಿಧ ಹಂತಗಳಲ್ಲಿ ನಿರಂತರವಾಗಿ ಶ್ರಮಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿವಮೊಗ್ಗದಲ್ಲಿ ಹಾಗೂ ಧರ್ಮ ಸಿಂಗ್ ಬೀದರ್ನಲ್ಲಿ ಹೆಚ್ಎಎಲ್ ಘಟಕ ಸ್ಥಾಪಿಸಲು ವಿಶೇಷ ಆಸಕ್ತಿ ವಹಿಸಿದ್ದರಿಂದ ಯೋಜನೆಯ ಅನುಷ್ಠಾನಕ್ಕೆ ವಿಳಂಬವಾಯಿತು ಎಂದು ಬಸವರಾಜು ಸ್ಪಷ್ಟಪಡಿಸಿದರು.