ಬೆಸ್ಕಾಂ ನಿವೃತ್ತ ನೌಕರನಿಗೆ ಆತ್ಮೀಯ ಬೀಳ್ಕೊಡುಗೆ
ಕ.ಪ್ರ.ವಾರ್ತೆ ತುಮಕೂರು ಸೆ.1
ತುಮಕೂರಿನ ಬೆಸ್ಕಾಂ ಕಚೇರಿಯಲ್ಲಿ ಕಚೇರಿ ಸಹಾಯಕರಾಗಿದ್ದ ಎನ್. ವಿಶ್ವಮೂರ್ತಿ ಅವರು ನಿವೃತ್ತರಾದ ಹಿನ್ನೆಲೆಯಲ್ಲಿ ಬೆಸ್ಕಾಂ ಕಚೇರಿ ಸಭಾಂಗಣದಲ್ಲಿ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ತುಮಕೂರು ಉಪವಿಭಾಗದ ಬೆಸ್ಕಾಂನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಟರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 39 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಎನ್. ವಿಶ್ವಮೂರ್ತಿ ಅವರ ಸೇವೆಯನ್ನು ಸಿಬ್ಬಂದಿ ವರ್ಗ ಕೊಂಡಾಡಿತು. ಈ ಸಂದರ್ಭದಲ್ಲಿ ಮಾತನಾಡಿದ ಎಇಇ ನಟರಾಜ್, ವಿದ್ಯುತ್ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ಅಮೂಲ್ಯವಾದುದ್ದು, ನಿಮ್ಮ ಸೇವಾ ಅವಧಿಯಲ್ಲಿ ಕಚೇರಿಯ ಎಲ್ಲ ಸಿಬ್ಬಂದಿಯನ್ನು ಗಣನೆಗೆ ತೆಗೆದುಕೊಂಡು ಕೆಲಸ ಮಾಡಿದರೆ ಪರಸ್ವರ ಸೌಹಾರ್ದತೆ ಬೆಳೆದು ಕಚೇರಿಯಲ್ಲಿ ಉತ್ತಮ ವಾತಾವರಣ ಉಂಟಾಗಲು ಸಾಧ್ಯವೆಂದರು.
ಬೆಸ್ಕಾಂ ನಮಗೆ ಅನ್ನಕೊಡುವ ಇಲಾಖೆ. ನಾವು ಇಲ್ಲಿ ಕೆಲಸ ಮಾಡುವಷ್ಟು ದಿನ ಪ್ರಾಮಾಣಿಕತೆ ಮತ್ತು ದಕ್ಷತೆಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಆಗ ತಾವು ಬೆಳೆಯುವುದರ ಜೊತೆಗೆ ಕಂಪನಿಯನ್ನು ಉತ್ತುಂಗದತ್ತ ತೆಗೆದುಕೊಂಡು ಹೋಗಬಹುದು.ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಗಮನಹರಿಸಬೇಕೆಂದು ತಿಳಿಸಿದ ನಟರಾಜ್, ನಮ್ಮ ಲೈನ್ಮನ್ಗಳು ತಮ್ಮ ಜೀವದ ಹಂಗು ತೊರೆದು ಕೆಲವೊಮ್ಮೆ ಕೆಲಸ ಮಾಡುತ್ತಾರೆ. ಇದನ್ನು ಗಮನಿಸಿ ಬೆಸ್ಕಾಂ ಅವರಿಗೆ ಅಗತ್ಯವಾದ ಜೀವ ರಕ್ಷಣ ಪರಿಕರಗಳನ್ನು ವಿತರಿಸಿದ್ದು, ಕೆಲಸ ಪ್ರಾರಂಭಿಸುವ ಮುನ್ನ ಅವುಗಳನ್ನು ಧರಿಸಿ ಕೆಲಸ ಆರಂಭಿಸುವುದರಿಂದ ವಿದ್ಯುತ್ ಅವಘಡಗಳು ಸಂಭವಿಸಿದಾಗ ತಮ್ಮ ಪ್ರಾಣಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ ಎಂದರು.
ನೌಕರರಾದ ಚಿಕ್ಕಣ್ಣ, ಜಗದೀಶ್, ಲೆಕ್ಕಾಧಿಕಾರಿಗಳಾದ ನಾಗರಾಜು ಮತ್ತು ಆಶಾ ಮತ್ತಿತರರು ಉಪಸ್ಥಿತರಿದ್ದರು.