ರು.10 ಸಾವಿರ ಮಾಸಿಕ ವೇತನಕ್ಕೆ ಹಿಂದೇಟು
ಕ.ಪ್ರ.ವಾರ್ತೆ ತುಮಕೂರು ಸೆ.1
ಶ್ರೀಮಂತರು, ಬಹುರಾಷ್ಟಿಯ ಕಂಪನಿಗಳು ಹಾಗೂ ಆಯ್ದ ವ್ಯಕ್ತಿಗಳಿಗೆ ವಾರ್ಷಿಕ 5 ಲಕ್ಷ ಕೋಟಿ ತೆರಿಗೆ ವಿನಾಯ್ತಿ ನೀಡುವ ಸರ್ಕಾರ, ಕಾರ್ಮಿಕರಿಗೆ ಮಾಸಿಕ 10 ಸಾವಿರ ರು. ಸಂಬಳ ನೀಡಲು ಹಿಂದೇಟು ಹಾಕುತ್ತಿರುವುದು ವಿಷಾದನೀಯ ಸಂಗತಿ ಎಂದು ರಾಜ್ಯ ಸಿಐಟಿಯು ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಅಭಿಪ್ರಾಯಪಟ್ಟರು.
ಅವರು ತುಮಕೂರಿನಲ್ಲಿ ಏರ್ಪಾಟಾಗಿದ್ದ ಜಿಲ್ಲಾ ಮಟ್ಟದ ಕಾರ್ಮಿಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಕಳೆದ 10 ವರ್ಷಗಳಿಂದ ನಿರಂತರವಾಗಿ ಬೆಲೆ ಏರಿಕೆ ನಡೆದೇ ಇದೆ. ಆದರೆ ಬೆಲೆ ಏರಿಕೆಗೆ ಅನುಗುಣವಾಗಿ ಕಾರ್ಮಿಕರು, ಬಡಜನತೆ, ರೈತರ ಆದಾಯದಲ್ಲಿ ಏರಿಕೆಯಾಗಿಲ್ಲ. ಕಾರ್ಮಿಕರಿಗೆ, ದಿನಗೂಲಿ ನೌಕರರಿಗೆ ಕನಿಷ್ಠ ಮಾಸಿಕ 10 ಸಾವಿರ ರು. ನಿಗದಿಪಡಿಸುವಂತೆ ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಫೆಬ್ರವರಿಯಲ್ಲಿ 10 ಸಾವಿರ ರು. ವೇತನ ನಿಗದಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಸೆಪ್ಟೆಂಬರ್ವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ 10 ಸಾವಿರ ರು. ನೀಡಬೇಕೇ ಬೇಡವೇ ಎಂಬ ಅಧ್ಯಯನ ನಡೆಯುತ್ತಿದೆಯಂತೆ. ಆದರೆ ಪ್ರತಿವರ್ಷ ಶ್ರೀಮಂತರ ಪರ ಸರ್ಕಾರಗಳು ಬಜೆಟ್ ಮಂಡಿಸುತ್ತಲೇ ಬಂದಿವೆ. ಲಕ್ಷ ಕೋಟಿ ರು.ಗಳಲ್ಲಿ ತೆರಿಗೆ ವಿನಾಯ್ತಿ ನೀಡುತ್ತಲೇ ಬಂದಿವೆ. ಇದೊಂದು ಶ್ರೀಮಂತ - ಬಡವರ ನಡುವೆ ಸರ್ಕಾರದ ತಾರತಮ್ಯದ ಧೋರಣೆಗೆ ನಿರಂತರ ಉದಾಹರಣೆಯಾಗಿದೆ ಎಂದರು.
ಪ್ರಧಾನಿ ಬುದ್ಧಿ ಮಟ್ಟ: ಚಿನ್ನ ಕೊಳ್ಳಬೇಡಿ ರೂಪಾಯಿ ಅಪಮೌಲ್ಯಗೊಳ್ಳುತ್ತದೆ ಎಂದು ಪ್ರಧಾನಿ ಮನನೋಹನ್ಸಿಂಗ್ ಬೇಡಿಕೊಳ್ಳುತ್ತಾರೆ. ಆದರೆ ಶೇ. 60 ರಷ್ಟಿರುವ ಕಾರ್ಮಿಕರು, ರೈತರಿಗೆ ದಿನ ನಿತ್ಯದ ಜೀವನಕ್ಕೇ ತೊಂದರೆಯಾಗಿರುವಾಗ ಚಿನ್ನ ಕೊಳ್ಳುವುದಾದರೂ ಹೇಗೆ? ಇದು ಪ್ರಧಾನಿ ಮನಮೋಹನ್ ಸಿಂಗ್ ಅವರ ಬುದ್ಧಿ ಮಟ್ಟ ತೋರಿಸುತ್ತದೆ ಎಂದು ಲೇವಡಿ ಮಾಡಿದರು. ಕೈಗಾರಿಕಾ ರಂಗ ಕುಸಿದಿದ್ದು, ಅಪಾಯಕಾರಿ ಹಂತ ತಲುಪಿದೆ. ಶೇ. 4.4 ರಷ್ಟಕ್ಕೆ ಇಳಿದಿದೆ. ಸಾರ್ವಜನಿಕರ ಪ್ರತಿ ಚಟುವಟಿಕೆಯ, ಸಣ್ಣ-ಪುಟ್ಟ ಖರೀದಿಯ ಹಿಂದೆ ಸರ್ಕಾರಕ್ಕೆ ತೆರಿಗೆ ಸಂದಾಯವಾಗುತ್ತದೆ. ಸರ್ಕಾರ ನಡೆಯುತ್ತಿರುವುದೇ ಸಾಮಾನ್ಯ ನಾಗರಿಕರ ತೆರಿಗೆ ಹಣದಿಂದ ಎಂಬುದು ಗಮನಾರ್ಹ. ಆದರೆ ಸಾಮಾನ್ಯ ನಾಗರಿಕರು, ರೈತರು, ಕಾರ್ಮಿಕರ ಪರ ಸರ್ಕಾರದ ಒಲವು ಅಷ್ಟಕಷ್ಟೆ ಎಂಬುದು ಜಗಜ್ಜಾಹೀರು ಎಂದು ಮಾರ್ಮಿಕವಾಗಿ ನುಡಿದರು.
ರೋಗಿಷ್ಟ ವಿಶ್ಲೇಷಣೆ : ದೇಸೀ ಮಾರುಕಟ್ಟೆ ಶ್ರೀಮಂತಗೊಳಿಸಲು ಶಕ್ತಿ ಕೊಡಿ ಅಂದರೆ ಸರ್ಕಾರ ಕೇಳಲ್ಲ. ಪಾರ್ಲಿಮೆಂಟ್ ಸಿದ್ಧವಿಲ್ಲ. ಗುತ್ತಿಗೆ ಪದ್ಧತಿ ನಿರ್ಮೂಲನೆ ಮಾಡಿ. ಕೆಲಸ ಕಾಯಂ ಮಾಡಿ ಎಂದರೆ ಸರ್ಕಾರ ಸಿದ್ಧವಿಲ್ಲ. ದಿನಗೂಲಿ 26, ರು. 33 ರು. ಇದ್ದರೆ ಆತ ಅಥವಾ ಆಕೆ ಸಂತೃಪ್ತರು ಎಂಬ ರೋಗಿಷ್ಟ ವಿಶ್ಲೇಷಣೆ ಬೇರೆ. ಜತೆಗೆ ಎಂಎಲ್ಎಗಳು, ಎಂಪಿಗಳು ಶ್ರೀಮಂತರ ಸೇವೆಗೆ ಸದಾ ಸಿದ್ಧವಾಗಿರುತ್ತಾರೆ. ಹೀಗಿರುವಾಗ ಕಾರ್ಮಿಕರ ಪರ ಹೋರಾಟ ಮಾಡಲು ಯಾರೂ ಸಿದ್ಧರಿಲ್ಲ. ಹೀಗಾಗಿ ಕಾರ್ಮಿಕರ ಪರ ಇರದ ಪಕ್ಷಗಳಿಗೆ ಎಚ್ಚರ ನೀಡುವುದು ಅನಿವಾರ್ಯವಾಗಿದೆ. ಹೀಗಾಗಿ ಹೋರಾಟವೊಂದೇ ದಾರಿ ಎಂಬುದನ್ನು ಎಲ್ಲ ಕಾರ್ಮಿಕರು ಮನಗಾಣಬೇಕು ಎಂದರು. ಸಮಾರಂಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಹ್ಮಣ್ಯ, ಕಟ್ಟಡ ಕಾರ್ಮಿಕರ ಫೆಡರೇಷನ್ ಅಧ್ಯಕ್ಷ ಬಿ. ಉಮೇಶ್, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಜಿ. ಕಮಲ, ಜಿಲ್ಲಾ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಸಿ. ವೆಂಕಟೇಶ್, ಹಮಾಲಿ ಕಾರ್ಮಿಕರ ಫೆಡರೇಷನ್ನ ಪೋತರಾಜು, ಕೈಗಾರಿಕಾ ಕಾರ್ಮಿಕರ ಸಂಘದ ಷಣ್ಮುಖಪ್ಪ, ಜಿಲ್ಲಾ ಬೀಡಿ ಕಾರ್ಮಿಕರ ಸಂಘದ ಮಹಮದ್ ದಸ್ತಗೀರ್, ರಾಜ್ಯ ರಸ್ತೆ ನೌಕರರ ಫೆಡರೇಷನ್ನ ದೇವರಾಜು, ತುಮಕೂರು ಫುಟ್ಪಾತ್ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಇಬ್ರಾಹಿಂ, ಜಿಲ್ಲಾ ತಾಂತ್ರಿಕ ಸಂಸ್ಥೆಗಳ ಬೋಧಕೇತರರ ಸಂಘದ ಟಿ.ಜಿ. ಶಿವಲಿಂಗಯ್ಯ ಜಿಲ್ಲಾ ಗ್ರಾಪಂ ನೌಕರರ ಸಂಘದ ಅಧ್ಯಕ್ಷ ರಾಮಚಂದ್ರಶರ್ಮ ಇತರರು ಉಪಸ್ಥಿತರಿದ್ದರು.
ಕರ್ತವ್ಯ ಮರೆತ ಸರ್ಕಾರಗಳಿಗೆ ಕ್ಷಮೆಯಿಲ್ಲ
ತುಮಕೂರು: ಕಾರ್ಮಿಕರು, ರೈತರು, ಸಾಮಾನ್ಯರ ಕ್ಷೇಮ ನೋಡಿಕೊಳ್ಳುವುದು ಸರ್ಕಾರದ ಆದ್ಯ ಕರ್ತವ್ಯ. ಸರ್ಕಾರ ನಡೆಯುತ್ತಿರುವುದೇ ಸಾಮಾನ್ಯರ ತೆರಿಗೆ ಹಣದಿಂದ. ಕರ್ತವ್ಯ ಮರೆತ ಸರ್ಕಾರಗಳಿಗೆ ಯಾವುದೇ ಕಾರಣಕ್ಕೂ ಕ್ಷಮೆ ಬೇಡ. ಪ್ರತಿಭಟನೆ ಅನಿವಾರ್ಯ ಮದ್ದು. ಚುನಾವಣೆಯಲ್ಲಿ ಸಂಘಟಿತರಾಗಿ ಪಾಠ ಕಲಿಸುವುದೊಂದೇ ದಾರಿ ಎಂಬುದನ್ನು ಮರೆಯದಿರೋಣ ಎಂದು ಮೀನಾಕ್ಷಿ ಸುಂದರಂ ಕರೆ ನೀಡಿದರು.
ಕ್ರಾಂತಿಯೆಂದರೆ ಹೊಡೆಯೋದು, ಬಡಿಯೋದಲ್ಲ: ಕಾರ್ಮಿಕರು, ರೈತರು, ಸಾಮಾನ್ಯರ ನೀತಿ ತರುವ ಪಕ್ಷಗಳಿಗೆ ಮತ ಹಾಕಬೇಕು. ಇದಕ್ಕಾಗಿ ನಿರಂತರವಾಗಿ ಹೋರಾಟ ಮಾಡಬೇಕು. ಕ್ರಾಂತಿಯೆಂದರೆ ರಕ್ತ ಕ್ರಾಂತಿಯಲ್ಲ. ಹೊಡೆಯೋದು ಬಡಿಯೋದಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಸಿಐಟಿಯು ಕಾರ್ಮಿಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನಿರಂತರವಾಗಿ ಯತ್ನಿಸುತ್ತಲೇ ಇದೆ ಎಂದು ಮೀನಾಕ್ಷಿ ಸುಂದರಂ ಅಭಿಪ್ರಾಯಪಟ್ಟರು.
ಕೈಗಾರಿಕೋದ್ಯಮಿಗಳು ನಾಪತ್ತೆ: ರೈತರ ಭೂಮಿ ಕಿತ್ತುಕೊಂಡು, ಕೈಗಾರಿಕೆ ಸ್ಥಾಪಿಸುವ ಮಂದಿ ಕೆಲ ತಿಂಗಳಲ್ಲೇ ಭೂಮಿ ಮಾರಾಟ ಮಾಡಿ ನಾಪತ್ತೆಯಾಗಿ ಬಿಡುತ್ತಾರೆ. ಆ ಭೂಮಿಯನ್ನು ಮಾರಿದ ರೈತರು ಬೀದಿ ಪಾಲಾಗುತ್ತಿದ್ದಾರೆ. ಕಾರ್ಮಿಕರು ಬೀದಿ ಪಾಲಾಗುತ್ತಿದ್ದಾರೆ. ಆ ಭೂಮಿ ಬಹುರಾಷ್ಟ್ರೀಯ ಕಂಪನಿಗಳ ಪಾಲಾಗುತ್ತಿದೆ. ಇದಕ್ಕೆ ಸರ್ಕಾರದ ಕುಮ್ಮಕ್ಕೂ ಇದೆ ಎಂದು ಮೀನಾಕ್ಷಿ ಸುಂದರಂ ಆರೋಪಿಸಿದರು.
20 ರಂದು ಪ್ರತಿಭಟನೆ: ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸೆ. 20 ರಂದು ಸರ್ಕಾರದ ಕಾರ್ಮಿಕ, ರೈತ ವಿರೋಧಿ ನೀತಿ ವಿರೋಧಿಸಿ, ಕನಿಷ್ಠ ಮಾಸಿಕ 10 ಸಾವಿರ ರು. ಗಳಿಗೆ ಒತ್ತಾಯಿಸಿ, ಗುತ್ತಿಗೆ ಪದ್ಧತಿ ನಿಷೇಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.