'ಎಚ್ಡಿಕೆ ಪಲಾಯನ'
ಕ.ಪ್ರ.ವಾರ್ತೆ ರಾಮನಗರ ಏ.8
ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಈ ಕ್ಷೇತ್ರವೇ ಬೇಡವೆಂದು ಹೋಗಿದ್ದಾರೆ. ಇನ್ನು ನಾವಿಲ್ಲಿ ಹೋರಾಟ ಮಾಡುವುದಾದರೂ ಏನಿದೆ, ಯಾರ ವಿರುದ್ಧ ಹೋರಾಟ ನಡೆಸಬೇಕು...
ಹೀಗೆಂದು, ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ರಾಮನಗರ ತಾಲೂಕಿನ ಕೂಟಗಲಲ್ಜಿ.ಪಂ. ಕ್ಷೇತ್ರದ ವಿವಿಧೆಡೆ ಮಂಗಳವಾರ ಮತಯಾಚನೆ ನಡೆಸಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತದಾರರನ್ನುದ್ದೇಶಿಸಿ ಪ್ರಶ್ನಿಸಿದರು.
ಈ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಡಿ.ಕೆ. ಸುರೇಶ್ ಅವರಿಗೆ ಪ್ರಬಲ ಪ್ರತಿಸ್ಪರ್ಧಿಯೇ ಇಲ್ಲ. ಒಬ್ಬರು ಜಿ.ಪಂ., ವಿಧಾನಸಭೆಗೆ ಸ್ಪರ್ಧಿಸಿ ಸೋಲು ಕಂಡವರು. ಮತ್ತೊಬ್ಬರು ಕಾರ್ಪೋರೇಟ್ ಕೂಡ ಆಗಲಾಗದ ವ್ಯಕ್ತಿ.
ಇಂಥವರಿಂದ ನಮಗೆ ಪ್ರಬಲ ಸ್ಪರ್ಧೆಯೇ ಉಳಿದಿಲ್ಲ ಎಂದು ಆತ್ಮವಿಶ್ವಾಸದಿಂದ ಬೀಗಿದರು. ಚುನಾವಣೆ ಪ್ರಚಾರದ ನೆಪದಲ್ಲಿ ಕ್ಷೇತ್ರಾದ್ಯಂತ ಮತದಾರರನ್ನು ಭೇಟಿಯಾಗುತ್ತಿದ್ದೇವೆ. ಈ ಜಿಲ್ಲೆ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿ ಪ್ರಮುಖವಾಗಿ ಜೆಡಿಎಸ್ ಮತ್ತು ಇತರೆ ಪಕ್ಷದ ಕಾರ್ಯಕರ್ತರು, ಮತದಾರರು ಪಕ್ಷಭೇದ ಮರೆತು ಸುರೇಶ್ ಅವರನ್ನೇ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಎಚ್‌ಡಿಕೆ ನೀಡಿದ ಸ್ಥಾನ: ಸುರೇಶ್ ದಿಢೀರ್ ರಾಜಕೀಯ ಪ್ರವೇಶಿಸಿ, ಸಂಸದರಾಗಲು ಅವಕಾಶ ಕಲ್ಪಿಸಿದ್ದು ಕುಮಾರಸ್ವಾಮಿ. ಈ ಕ್ಷೇತ್ರ ಮತ್ತು ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆಂದು ಬೀಗುವ ಅವರು ಇಲ್ಲೇ ಏಕೆ ಚುನಾವಣೆಗೆ ಸ್ಪರ್ಧಿಸಬಾರದಿತ್ತು ಎಂದು ಶಿವಕುಮಾರ್ ಪ್ರಶ್ನಿಸಿದರು.
ಎಚ್‌ಡಿಕೆ ಕೈಲಾಗಲಿಲ್ಲ: ಶ್ರೀರಂಗ ಯೋಜನೆ ಆಗದ ಕೆಲಸವೆಂದು ಕುಮಾರಸ್ವಾಮಿ ಮತ್ತು ಶಾಸಕ ಬಾಲಕೃಷ್ಣ ಟೀಕಿಸಿದ್ದರು. ಅವರು ಆಗದು ಎಂದಿರುವ ಆ ಯೋಜನೆಯನ್ನು ಕಾರ್ಯಗತಗೊಳಿಸಿ ತೋರಿಸುತ್ತೇವೆ. ಕ್ಷೇತ್ರದ ಪ್ರತಿ ಹಳ್ಳಿಯಲ್ಲೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುತ್ತೇವೆ ಎಂದು ಅವರು ಭರವಸೆ ನೀಡಿದರು. ಈ ಜಿಲ್ಲೆ ಮತ್ತು ಲೋಕಸಭಾ ಕ್ಷೇತ್ರದಲ್ಲಿ ನನ್ನ ಹಾಗೂ ಸುರೇಶ್ ಅವರಿಂದಾಗುತ್ತಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿಯೇ ಕುಮಾರಸ್ವಾಮಿ ಪಲಾಯನ ಮಾಡಿದ್ದಾರೆ. ಹೀಗಿರುವಾಗ ಆ ಪಕ್ಷದ ಕಾರ್ಯಕರ್ತರು ಇನ್ನು ಯಾರಿಗಾಗಿ ಹೋರಾಟ ನಡೆಸಬೇಕಿದೆ ಎಂದರು.
ಪ್ರಚಾರದಲ್ಲಿ ಕಾಂಗ್ರೆಸ್ ಮುಖಂಡರಾದ ಪಿ.ನಾಗರಾಜು, ಎಚ್.ಎಂ.ಕೃಷ್ಣಮೂರ್ತಿ, ಕೆ.ರಮೇಶ್, ಕಾಂತರಾಜ ಪಟೇಲ್ ಇತರರಿದ್ದರು.
ಸಿಂಧ್ಯಾ ಕಾಂಗ್ರೆಸ್‌ಗೆ
ಜೆಡಿಎಸ್ ಪಕ್ಷದಲ್ಲಿ ಮೂಲೆಗುಂಪಾಗಿರುವ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಅವರು ನನ್ನೊಟ್ಟಿಗೆ ಈಗಾಗಲೇ ಮಾತುಕತೆ ನಡೆಸಿದ್ದಾರೆ. ತಮ್ಮ ಬೆಂಬಲಿಗರ ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಸಿಂಧ್ಯಾ ಶೀಘ್ರ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ನಾನು ಮತ್ತು ಸಿಂಧ್ಯಾ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳಾಗಿ ಹೋರಾಡಿದ್ದೆವು. ಈಗ ಒಟ್ಟಿಗೆ ಸೇರುವ ಕಾಲ ಬಂದಿದೆ. ಈಗಾಗಲೇ ಬಿಜೆಪಿಯ ಮಾಜಿ ಸಂಸದ ಎಂ. ಶ್ರೀನಿವಾಸ್ ಸೇರಿದಂತೆ ಹಲವು ಮುಖಂಡರು ಕಾಂಗ್ರೆಸ್ ಸೇರಿದ್ದು, ಇನ್ನೂ ಕೆಲವರು ಸೇರ್ಪಡೆಗೆ ನಿರ್ಧರಿಸಿದ್ದಾರೆ ಎಂದರು.
ರೆಡ್ಡಿಯೂ ಬಂದಿದ್ದರು: ಈಗ ಜೆಡಿಎಸ್ ಅಭ್ಯರ್ಥಿಯಾಗಿರುವ ಪ್ರಭಾಕರರೆಡ್ಡಿ ಕೂಡ ಕೆಲ ದಿನಗಳ ಹಿಂದೆ ತಮ್ಮ ಬಳಿ ಬಂದು ಕಾಂಗ್ರೆಸ್ ಸೇರ್ಪಡೆ ಇಂಗಿತ ವ್ಯಕ್ತಪಡಿಸಿದ್ದರು. ಅಷ್ಟರಲ್ಲಿ ಅವರನ್ನು ಜೆಡಿಎಸ್ ಮುಖಂಡರು ಹಿಡಿದುಕೊಂಡು, ಬಿ ಫಾರಂ ನೀಡಿದ್ದಾರೆ ಎಂದು ಹೇಳಿದರು.