ತಾಲೂಕು ಕಾಂಗ್ರೆಸ್ ಕಾರ್ಯಾಧ್ಯಕ್ಷ ರಾಮಯ್ಯ
ತುರುವೇಕೆರೆ: ತುರುವೇಕೆರೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ಎಂ.ಎಸ್.ರಾಮಯ್ಯನವರನ್ನು ನೇಮಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್ ಆದೇಶಿಸಿದ್ದಾರೆ. ಎಂ.ಎಸ್,ರಾಮಯ್ಯ( ಮಾಚೇನಹಳ್ಳಿ ರಾಮಯ್ಯ) ನವರು ತಾಲ್ಲೂಕು ಕೆಜೆಪಿಯ ತಾಲೂಕು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಎಂ.ಎಸ್.ರಾಮಯ್ಯನವರು ತಾಲೂಕು ಕೆಜೆಪಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೆಜೆಪಿಯ ರಾಜ್ಯ ಮುಖಂಡರಾಗಿದ್ದ ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್ ಹಾಗೂ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಮಸಾಲಾ ಜಯರಾಂ ಸಹ ಕೆಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರಿಂದ ಅವರೊಂದಿಗೆ ಎಂ.ಎಸ್.ರಾಮಯ್ಯನವರೂ ಸಹ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು. ಮುಂಬರುವ ದಿನಗಳಲ್ಲಿ ಪಕ್ಷವನ್ನು ತುರುವೇಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಬಲಗೊಳಿಸಬೇಕು ಎಂದು ಷಫಿ ಅಹಮದ್ ತಿಳಿಸಿದ್ದಾರೆ.
ನಾಲೆಗಳಿಗೆ ನೀರು ಹರಿಸಲು ಒತ್ತಾಯಿಸಿ ಧರಣಿ
ಶ್ರೀರಂಗಪಟ್ಟಣ: ಬೆಳೆಗಳಿಗೆ ನೀರು ಉಣಿಸಲು ನಾಲೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಬೆಳಗೊಳ ಗ್ರಾಮದ ರೈತರು ಕೆಆರ್‌ಎಸ್ ನೀರಾವರಿ ಇಲಾಖೆಯ ಕಚೇರಿ ಮುಂದೆ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.
ಕೆಆರ್‌ಎಸ್ ಜಲಾಶಯದ ಕೆಳಗಿನ ನಾಲೆಗಳಾದ ವಿರಿಜಾ, ಸಿಡಿಎಸ್, ಆರ್‌ಬಿಎಲ್‌ಎಲ್ ಸೇರಿದಂತೆ ಇತರೆ ಎಲ್ಲಾ ನಾಲೆಗಳಿಗೆ ನೀರು ಕೊಡಲು ಸರ್ಕಾರದ ಆದೇಶ ಮಾಡಿದೆ. ಮಳೆ ಇಲ್ಲದೆ ಬೇಸಿಗೆ ಬಿಸಿಲಿಗೆ ಅರ್ಧಕ್ಕೆ ಬಂದಿರುವ ಬತ್ತ, ಕಬ್ಬು ಮತ್ತು ರಾಗಿ ಬೆಳೆಗಳು ನೀರಿಲ್ಲದೆ ಒಣಗುವ ಪರಿಸ್ಥಿತಿ ಎದುರಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದೆ 15 ದಿನಕ್ಕೊಮ್ಮೆ ಈಗ ಬೆಳೆದಿರುವ ಬೆಳೆಗಳಿಗೆ ನೀರಿನ ಅವಶ್ಯವಿದೆ. ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು ಎಂದು ರೈತರು ನೀರಾವರಿ ಅಧಿಕಾರಿಗಳಿಗೆ ಒತ್ತಾಯ ಮಾಡಿದರು. ರೈತರಿಂದ ಮನಿವಿ ಸ್ವೀಕರಿಸಿದ ಕೆಆರ್‌ಎಸ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಂಗಮೇಶ್ ಮಾತನಾಡಿ, ಮೇಲಾಧಿಕಾರಿಗಳೊಂದಿಗೆ ಚರ್ಚೆ ಮಾಡಿ ನಾಲೆಗಳಿಗೆ ನೀರು ಹರಿಸುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ತಾಲೂಕಿನ ಬೆಳಗೊಳ ಗ್ರಾಮದ ರೈತ ಮುಖಂಡರಾದ ಹರೀಶ್, ಮಹೇಶ್, ಪರಶುರಾಮು, ಸುನೀಲ್, ವಿಷಕಂಠು ಸೇರಿದಂತೆ ಇತರರು ಭಾಗವಹಿಸಿದರು.