ಪರಮೇಶ್ವರ್ಗೆ ಮತ್ತೊಮ್ಮೆ ಹಿನ್ನೆಡೆ ನಿಶ್ಚಿತ: ಬಸವರಾಜು
ಕನ್ನಡಪ್ರಭ ವಾರ್ತೆ, ತುಮಕೂರು, ಏ.8
ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರು ತುಮಕೂರು ಲೋಕಸಭೆ ಕ್ಷೇತ್ರವನ್ನು ಗೆಲ್ಲಲ್ಲೇಬೇಕೆಂಬ ಪ್ರತಿಜ್ಞೆಮಾಡಿದ್ದು ರಾಜ್ಯದ ಉಳಿದ 27 ಲೋಕಸಭಾ ಕ್ಷೇತ್ರಗಳಿಗಿಂತ ಹೆಚ್ಚಿನ ಮಹತ್ವವನ್ನು ತುಮಕೂರು ಲೋಕಸಭೆಗೆ ನೀಡಿದ್ದು ಅವಿರತ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ತುಮಕೂರು ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ಹೇಳಿದರು.
ಅವರು ಬಿಜೆಪಿ ಚುನಾವಣಾ ಕಚೇರಿಯಲ್ಲಿ 19ನೇ ಹಾಗೂ 20ನೇ ವಾರ್ಡ್ನ ದಲಿತ ಮುಖಂಡರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.
ಕೊರಟಗೆರೆ ಕ್ಷೇತ್ರದ ಶಾಸಕರಾದ ಸಂದರ್ಭದಲ್ಲಿ ಕ್ಷೇತ್ರದ ಕಡೆ ತಿರುಗಿ ಸಹ ನೋಡದ ಮಹಾಶಯರು ಕಳೆದ ವಿಧಾನಸಭೆಯಲ್ಲಿ ಹೀನಾಯ ಸೋಲು ಕಾಣಬೇಕಾಯಿತು. ರಾಜ್ಯದ ಆಡಳಿತ ಪಕ್ಷದ ರಾಜ್ಯಾಧ್ಯಕ್ಷರಾದ ಅವರು ಕಳೆದ ಹತ್ತು ತಿಂಗಳಲ್ಲಿ ಕ್ಷೇತ್ರದ ಅಭಿವೃದ್ಧಿಯ ಕಡೆ ಗಮನವಹಿಸದೆ ಲೋಕಸಭಾ ಚುನಾವಣೆಗೆ ಮತ ಕೇಳಲು ಕೊರಟಗೆರೆ ಬಂದಿದ್ದಾರೆ. ಈ ಬಾರಿಯೂ ಕ್ಷೇತ್ರದ ಜನತೆ ಅವರ ಪಕ್ಷವನ್ನು ತಿರಸ್ಕರಿಸುತ್ತಾರೆ ಎಂದರು.
ಕೃಷ್ಣಪ್ಪ ಹೊರಗಿನವರು: ಮತ್ತೊಂದು ಪಕ್ಷ ಜೆಡಿಎಸ್ನ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪನವರು ಆರ್ಥಿಕವಾಗಿ ಸ್ಥಿತಿವಂತರು ಎಂಬ ಒಂದೇ ಕಾರಣಕ್ಕಾಗಿ ದೇವೆಗೌಡರು ಅವರನ್ನು ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಕ್ಷೇತ್ರದ ಪರಿಚಯವಿಲ್ಲದೇ ಇರುವ ಎ. ಕೃಷ್ಣಪ್ಪನವರು ಸಂಸದರಾಗುವ ಕನಸಿನಲ್ಲಿ ಏನೇನೋ ಮಾತನಾಡುತ್ತಿದ್ದಾರೆ ಎಂದು ತುಮಕೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಸಮರ್ಥ ಪ್ರಧಾನಿ ಅಭ್ಯರ್ಥಿಯೇ ಇಲ್ಲ, ಕೆಜೆಪಿ ಬಿಜೆಪಿ ಎಂಬ ಎರಡು ಬಣಗಳಿಂದ ತುಮಕೂರು ನಗರದಲ್ಲಿ ನಾವು ಸೋಲಬೇಕಾಯಿತು. ಆದರೆ ನಮ್ಮ ತಪ್ಪುಗಳನ್ನು ತಿದ್ದಿಕೊಂಡಿದ್ದೇವೆ.
ತುಮಕೂರು ನಗರದಲ್ಲಿ 80 ಸಾವಿರಕ್ಕೂ ಹೆಚ್ಚು ಮತಗಳನ್ನು ಈ ಲೋಕಸಭಾ ಚುನಾವಣೆಯಲ್ಲಿ
ಪಡೆಯುತ್ತೇವೆ. ಜಿಲ್ಲೆಯ ಯುವ ಸಮೂಹ ನರೇಂದ್ರ ಮೋದಿಯವರ ನಾಯಕತ್ವವನ್ನು ಒಪ್ಪಿ ಸ್ವಯಂ ಪ್ರೇರಿತರಾಗಿ ಚುನಾವಣಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ನರೇಂದ್ರ ಮೋದಿಯವರ ಕೈ ಬಲಪಡಿಸಲು ನಾನು ತುಮಕೂರಿನಿಂದ ಲೋಕಸಭೆಗೆ ಆರಿಸಿ ಹೋಗುತ್ತೇನೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಮಹತ್ವದ ಚುನಾವಣೆ: ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ರವಿ ಹೆಬ್ಬಾಕ ಮಾತನಾಡಿ ಈ ಲೋಕಸಭಾ ಚುನಾವಣೆಯು ದೇಶದ ಮಹತ್ವ ಚುನಾವಣೆಯಾಗಿದೆ. 60 ವರ್ಷಗಳ ಕಾಂಗ್ರೆಸ್ ದುರಾಡಳಿತವನ್ನು ಕೊನೆಗಾಣಿಸಿ, 60 ತಿಂಗಳಿಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷಕ್ಕೆ ಮತ ಹಾಕುವುದರ
ಜೊತೆಗೆ ತುಮಕೂರು ಜಿಲ್ಲೆಯಲ್ಲಿರುವ ನಿಮ್ಮ ಬಂಧು-ಮಿತ್ರರ ಮತಗಳನ್ನು ಬಿಜೆಪಿ ಹಾಕಿಸುವುದರ ಮೂಲಕ ಹಿಂದುಳಿದ ವರ್ಗ ಹಾಗೂ ಶೋಷಿತ ವರ್ಗದವರನ್ನು ಮುನ್ನೆಡೆಸುವ ಸಮರ್ಥ ನಾಯಕ ನರೇಂದ್ರ ಮೋದಿ ಪ್ರಧಾನಿ ಮಾಡಲು ಸಹಕಾರಿ ನೀಡಿ ಎಂದು ತಿಳಿಸಿದರು.
ಬಿಜೆಪಿ ಸೇರ್ಪಡೆ: ತುಮಕೂರು ನಗರದ 19ನೇ ಹಾಗೂ 20ನೇ ವಾರ್ಡಿನ ಮುಂಖಡ ನಗರಸಭಾ ಮಾಜಿ ಸದಸ್ಯ ಬಸವರಾಜು, ಡಿ.ಎಸ್.ಎಸ್. ಅಧ್ಯಕ್ಷ ಶಿವಕುಮಾರ್, ಹಮಾಲಿ ಸಂಘದ ಅಧ್ಯಕ್ಷ ಲಕ್ಷ್ಮಣ್, ಜೆಡಿಎಸ್ ಮುಖಂಡರಾದ ಗೋವಿಂದಯ್ಯ, ಲಕ್ಷ್ಮೀನಾರಾಯಣ್, ಮಂಜುನಾಥ್ ಬಿಜೆಪಿ ಸೇರಿದರು.