ಪೊಲೀಸ್ ದೌರ್ಜನ್ಯ: ಯುವಕ ಆತ್ಮಹತ್ಯೆ
ಮಳವಳ್ಳಿ: ಮಳವಳ್ಳಿ ಗ್ರಾಮಾಂತರ ಠಾಣೆಯ ಪಿಎಸ್‌ಐ ಸುಬ್ಬಯ್ಯರಿಂದ ಮಾನಸಿಕವಾಗಿ ನೊಂದ ತಾಲೂಕಿನ ಕೆಂಬೂತಗೆರೆ ಅಣ್ಣಹಳ್ಳಿ ಗ್ರಾಮದ ರಾಜೇಶ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.
ಅಣ್ಣಹಳ್ಳಿ ಗ್ರಾಮದ ಚಿಕ್ಕಶೆಟ್ಟಿ ಎಂಬುವವರ ಮಗ ರಾಜೇಶ್(20) ಆತ್ಮಹತ್ಯೆ ಮಾಡಿಕೊಂಡಿದ್ದು, ಈತ ಬೆಂಗಳೂರಿನ ಪ್ರತಿಷ್ಠಿತ ಮಾರ್ಕೆಟ್ ಹಾಲ್‌ನಲ್ಲಿ ಸೇಲ್ಸ್‌ಮೆನ್ ಆಗಿ ಕೆಲಸ ಮಾಡುತ್ತಿರುವುದಾಗಿ ತಿಳಿದು ಬಂದಿದೆ.
ಕಳೆದ ಎರಡು ವರ್ಷಗಳ ಹಿಂದೆ ಹಾಸನ ಜಿಲ್ಲೆಯ ವಾಸಿ ದಿಲೀಪ್ ಎಂಬುವವರು ಈತನಿಗೆ ಬೆಂಗಳೂರಿನಲ್ಲಿ ಪರಿಚಯವಾಗಿದ್ದು, ಆತನೊಂದಿಗೆ ಹಣಕಾಸಿನ ವ್ಯವಹಾರವಿತ್ತೆಂದು ತಿಳಿದು ಬಂದಿದೆ. ದಿಲೀಪ್ ಈತನ ವಿರುದ್ಧ ಮಳವಳ್ಳಿ ಗ್ರಾಮಾಂತರ ಠಾಣೆ ಪಿಎಸ್‌ಐ ಸುಬ್ಬಯ್ಯ ಅವರಿಗೆ ದೂರವಾಣಿ ಮುಖಾಂತರ ದೂರು ನೀಡಿದ್ದಾನೆ ಎನ್ನಲಾಗಿದೆ.
ಇದರಿಂದ ಪಿಎಸ್‌ಐ ಸುಬ್ಬಯ್ಯ ಮಂಗಳವಾರ ಬೆಳಗ್ಗೆ ಸಿಬ್ಬಂದಿಯೊಂದಿಗೆ ಅಣ್ಣಹಳ್ಳಿಗೆ ತೆರಳಿ ಆತನನ್ನು ಬಂಧಿಸಲು ಯತ್ನಿಸಿದ್ದರೆನ್ನಲಾಗಿದೆ. ಅಷ್ಟರಲ್ಲಿ ಸ್ಥಳೀಯ ಜನ ಪ್ರತಿನಿಧಿಗಳು ರಾಜೇಶನನ್ನು ತಾವೇ ಕರೆದುಕೊಂಡು ಬರುವುದಾಗಿ ತಿಳಿಸಿ ಬೆಳಗ್ಗೆ 10.30ಕ್ಕೆ ಮಳವಳ್ಳಿ ಗ್ರಾಮಾಂತರ ಠಾಣೆಗೆ ಕರೆ ತಂದಿದ್ದು ದಿಲೀಪ್ ಹಾಸನ ಜಿಲ್ಲೆಯ ಹೊಳೆ ನರಸೀಪುರ ತಾಲೂಕಿನವನಾಗಿದ್ದು, ಪಿಎಸ್‌ಐ ಸುಬ್ಬಯ್ಯ ಅದೇ ಜಿಲ್ಲೆಯವರಾದ್ದರಿಂದ ರಾಜೇಶ್, ಆತನ ಸೋದರಮಾವ ಚಂದ್ರು ಹಾಗೂ ಜನ ಪ್ರತಿನಿಧಿಗಳ ವಿರುದ್ಧ ಹರಿಹಾಯ್ದು ರಾಜೇಶ್‌ನ ಫೋಟೊ ತೆಗೆಸಿ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ.
ಆತನ ಮೊಬೈಲ್ ನಂಬರ್ ಪಡೆದು, ಠಾಣೆಯಲ್ಲಿ ಪೋಟೊ ತೆಗೆಸಿ ಕ್ರಮ ಕೈಗೊಳ್ಳುವ ಬೆದರಿಕೆಯೊಡ್ಡಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದು, ಈ ಘಟನೆ ನಂತರ ರಾಜೇಶ್ ಮನನೊಂದು ಮರಣ ಪತ್ರ ಬರೆದಿಟ್ಟು ಗ್ರಾಮದ ಹೊರವಲಯದಲ್ಲಿ ನನ್ನ ಸಾವಿಗೆ ಮಳವಳ್ಳಿ ಗ್ರಾಮಾಂತರ ಪಿಎಸ್‌ಐ ಸುಬ್ಬಯ್ಯನೇ ಕಾರಣ. ದಿಲೀಪ್ ನನಗೆ ದುಡ್ಡು ಕೊಟ್ಟಿರುವ ವಿಚಾರದಲ್ಲಿ ನನ್ನ ಮಾವನಾದ ಚಂದ್ರುರವರಿಗಾಗಲಿ ಭಾವ ರಮೇಶ್ ಗಾಗಲಿ ಯಾವುದೇ ರೀತಿಯ ಸಂಬಂಧವಿಲ್ಲ. ಸುಬ್ಬಯ್ಯ ನನ್ನ ಮೇಲೆ ಇಲ್ಲ ಸಲ್ಲದ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಪಿಎಸ್‌ಐ ಸುಬ್ಬಯ್ಯ ಕಾರಣ ಎಂದು ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿರುವ ರಾಜೇಶನ ಶವವನ್ನು ಗ್ರಾಮಾಂತರ ಠಾಣೆಯ ಮುಂದೆ ಇರಿಸಿ ಸಂಬಂಧಿಕರು ನ್ಯಾಯ ಸಿಗುವ ವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಹಠ ಹಿಡಿದು ಧರಣಿ ಮುಂದುವರೆಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆ ಸ್ಥಳೀಯ ಮುಖಂಡರು ಹಾಗೂ ಸಂಬಂಧಿಕರ ಮನವೊಲಿಸಲು ವಿಫಲವಾಗಿದ್ದು ನ್ಯಾಯ ಸಿಗುವವರೆಗೂ ಹೋರಾಟ ನಡೆಸುವುದಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೆ ಪಿಎಸ್‌ಐ ಸುಬ್ಬಯ್ಯರನ್ನು ಅಮಾನತ್ತುಗೊಳಿಸಬೇಕು, ಮರಣ ಪತ್ರ ಆಧರಿಸಿ ಪಿಎಸ್‌ಐ ಸುಬ್ಬಯ್ಯರ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕು, ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಮಳವಳ್ಳಿ ಠಾಣೆಯಲ್ಲಿ ನಡೆಯುತ್ತಿರುವ ದೌರ್ಜನ್ಯಗಳನ್ನು ತಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.