ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಡ್ಡಾಯ ಮತದಾನ ಮಾಡಿ

Srinivasa Murthy VN
Updated On : 11 Apr 2014, 12:15 pm

ಗುಬ್ಬಿ: ಮತದಾರರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸ್ವೀಪ್ ಸಮಿತಿ ರಚನೆಯಾಗಿದ್ದು ಇದರ ಜಿಲ್ಲಾಮಟ್ಟದ ಅಧ್ಯಕ್ಷರಾಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದರಾಜು  ಗುಬ್ಬಿ ತಾಲೂಕಿನ ಅಡಗೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ತಾಯಂದಿರಿಗೆ ಮತದಾನದ ಜಾಗೃತಿ ಬಗ್ಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ  ಕಡ್ಡಾಯ ಮತದಾನ ಮಾಡಲು ಕರೆ ನೀಡಿದರು. ಮತದಾನ ಬೆಳಿಗ್ಗೆ 7.00 ರಿಂದ ಸಾಯಂಕಾಲ 6.00 ಗಂಟೆಗೆ  ನಡೆಯಲಿದ್ದು ಎಲ್ಲರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಹಾಗೂ ನಮ್ಮ ಮತ-ನಮ್ಮ ಹಕ್ಕು- ನಮ್ಮ ಕರ್ತವ್ಯ ಎಂದು ತಿಳಿಯಬೇಕೆಂದು ತಿಳಿಸಿದರು.ಕಲಾ ತಂಡದಿಂದ ಬೀದಿ ನಾಟಕ, ಅರಿವು ಮೂಡಿಸುವ ಸಂಬಂಧ ಕಾರ್ಯಕ್ರಮ ನಡೆಸಲಾಯಿತು.

ವ್ಯಕ್ತಿ ಆತ್ಮಹತ್ಯೆ
ಹುಳಿಯಾರು: ಆಗಾಗ ಬರುತ್ತಿದ್ದ ಹೊಟ್ಟೆನೋವು ತಾಳಲಾರದೆ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೋಬಳಿಯ ಸೀಗೆಬಾಗಿ ಗ್ರಾಮದಲ್ಲಿ ಗುರುವಾರ ಘಟಿಸಿದೆ.
 45 ವಯಸ್ಸಿನ  ರಂಗನಾಥಪ್ಪ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ತಮ್ಮ ಜಮೀನಿಗೆ ತೆರಳಿ ಅಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ, ಇದನ್ನು ಕಂಡ ಮನೆಯವರು ಈತನನ್ನು ಬೆಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದಿದ್ದು ಚಿಕಿತ್ಸೆ ಫಲಿಸದೆ ಆತ ಅಲ್ಲಿಯೇ ಮೃತಪಟ್ಟಿದ್ದಾನೆ. ಪ್ರಕರಣ ಹುಳಿಯಾರು ಠಾಣೆಯಲ್ಲಿ  ದಾಖಲಾಗಿದೆ

ಬೇಸಿಗೆ ಶಿಬಿರ
ಹುಳಿಯಾರು: ಪಟ್ಟಣದ ವಿದ್ಯಾವಾರಿಧಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಏ.14ರ ಸೋಮವಾರದಿಂದ ಏ.30ರ ಬುಧವಾರದ ವರೆಗೆ ಬೇಸಿಗೆ ಶಿಬಿರವನ್ನು ಅಯೋಜಿಸಲಾಗಿದೆ. ಶಿಬಿರದಲ್ಲಿ ಪ್ರತಿ ದಿನ ಬೆಳಿಗ್ಗೆ 10.30 ರಿಂದ 3.30 ರವರೆಗೆ ಸ್ಪೋಕನ್ ಇಂಗ್ಲಿಷ್, ಗ್ರಾಮರ್, ವೇದಗಣಿತ, ಅಬಾಕಸ್, ನೃತ್ಯ, ಸಂಗೀತ, ಕ್ರೀಡೆ, ಚಿತ್ರಕಲೆ ಸೇರಿದಂತೆ ವಿವಿಧ ಆಟೋಟಗಳು ಹಾಗೂ ಪಠ್ಯೇತರ ಚಟುವಟಿಗೆಳನ್ನು ಮಕ್ಕಳಿಗೆ ಕಲಿಸಿಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ ಕವಿತಾಕಿರಣ್ ಕುಮಾರ್ (9448950857), ಪ್ರಾಂಶುಪಾಲರಾದ ರವಿ (9141141989)ಅವರನ್ನು ಸಂಪರ್ಕಿಸಲು ಕೋರಲಾಗಿದೆ.

ಕಳಸ ಮಹೋತ್ಸವ
ಹುಳಿಯಾರು: ಹೋಬಳಿ ಕೆಂಕೆರೆ ಗ್ರಾಮದ ಶ್ರೀಕಾಳಿಕಾಂಭದೇವಿಯ ಜಾತ್ರಾಮಹೋತ್ಸವದ ಅಂಗವಾಗಿ   ಅಮ್ಮನವರ ಪಟ್ಟದ ಕಳಸ ಮಹೋತ್ಸವ ಅಪಾರ ಸಂಖ್ಯೆಯ ಭಕ್ತಾಧಿಗಳ ನಡುವೆ ನೆರವೇರಿತು. ಸಂಜೆ ಉಯ್ಯಾಲೋತ್ಸವ ನಡೆಯಿತು.

ರಥೋತ್ಸವ ನಾಳೆ
ಹುಳಿಯಾರು: ಹೋಬಳಿ ದಸೂಡಿ ಗ್ರಾಮದ ಶ್ರೀಆಂಜನೇಯಸ್ವಾಮಿಯ ಬ್ರಹ್ಮರಥೋತ್ಸವ ಶನಿವಾರ ಮಧ್ಯಾಹ್ನ ನಡೆಯಲಿದೆ. ಇದೇದಿನ ರಾತ್ರಿ ಕುರುಕ್ಷೇತ್ರ ನಾಟಕ ಪ್ರದರ್ಶನವಿದೆ.

ಕಳ್ಳ ಸಾಗಣೆ
ತಿಪಟೂರು: ತಾಲೂಕಿನ ತಡಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬನ್ನೀಹಳ್ಳಿ ಗೇಟ್‌ನಲ್ಲಿ ಅಕ್ರಮವಾಗಿ ಆಫ್ರಿಕನ್ ಕ್ಯಾಟ್ ಫಿಷ್ ಸಾಗಣೆ ಮಾಡುತ್ತಿದ್ದು ವಾಹನವನ್ನು ತಡೆದು ವಾಹನದಲ್ಲಿದ್ದು ಸುಮಾರು 60ಸಾವಿರ ಆಫ್ರಿಕನ್ ಫಿಷ್ ಥಳಿಯನ್ನು ವಶ ಪಡಿಸಿಕೊಳ್ಳಲಾಗಿದೆ. ಬನ್ನೀಹಳ್ಳಿ ಸಮೀಪದ ಸರ್ಕಾರಿ ಜಾಗದಲ್ಲಿ ಜೆಸಿಬಿ ಮೂಲಕ ಗುಂಡಿಯನ್ನು ತೆಗೆದು ತಹಸೀಲ್ದಾರ್ ಮಂಜುನಾಥ್, ವೃತ್ತ ನಿರೀಕ್ಷಕ ನಾಗರಾಜು, ಪಿಡಿಓ ಶಿವರಾಜ್, ಪೊಲೀಸ್ ಸಿಬ್ಬಂದಿ, ಅಬಕಾರಿ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಸ್ಥರ ಸಮಕ್ಷಮದಲ್ಲಿ ಕ್ರಮ ಕೈಗೊಳ್ಳಲಾಯಿತು.

ಅವಿರೋಧ ಆಯ್ಕೆ
ಚಿಕ್ಕನಾಯಕನಹಳ್ಳಿ: ಪಟ್ಟಣದ ಕೆಪಿಟಿಸಿಎಲ್ ನೌಕರರ  ಪ್ರಾಥಮಿಕ ಸಮಿತಿಗೆ 7 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎನ್. ಶ್ರೀಕಂಠಯ್ಯ ಅಧ್ಯಕ್ಷರಾಗಿ, ಜಿ.ಆರ್.ರಘು ಕಾರ್ಯದಶಿಯಾಗಿ ಆಯ್ಕೆಯಾಗಿದ್ದಾರೆ. ಅವರ ಜೊತೆಯಲ್ಲಿ   ಕಿರಿಯ ಎಂಜಿನಿಯರ್ ಆನಂದ್, ಎಚ್.ಆರ್.ನಾಗರಾಜು, ಸಿ.ಎಂ. ಕಿರಣ್, ಎಚ್. ಹನುಮೇಶ್‌ಬಾಬು, ಆರ್.ತಮ್ಮಯ್ಯ ಅವರು ಸಮಿತಿಯ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಲ್ಲರನ್ನು ಅವಿರೋಧವಾಗಿ ಆಯ್ಕೆ ಮಾಡಿದ ಇಲಾಖೆಯ ಸಿಬ್ಬಂದಿ ವರ್ಗದವರನ್ನು ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎನ್. ಶ್ರೀಕಂಠಯ್ಯ ಅಭಿನಂದನೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement