ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಾಂಗ್ರೆಸ್ ಕಥೆ ಮುಗಿದ ಅಧ್ಯಾಯ: ಆರ್. ಅಶೋಕ್ ಭವಿಷ್ಯ

Srinivasa Murthy VN
Updated On : 11 Apr 2014, 12:15 pm

ಕೊರಟಗೆರೆ: ಯಪಿಎ ಸರ್ಕಾರದ 10 ಮಂದಿ ಸಚಿವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವುದನ್ನು ನೋಡಿದರೆ ಶವಕ್ಕೆ ಚಟ್ಟಕಟ್ಟುವ ರೀತಿ ಕಾಂಗ್ರೆಸ್‌ಗೆ ಚಟ್ಟ ಕಟ್ಟಿ ಸಿದ್ಧಮಾಡಿದಂತೆ ಕಾಣುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಕುಟುಕಿದರು.
ಅವರು ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ಪರವಾಗಿ ಮತಯಾಚಿಸಿ ಮಾತನಾಡಿ ದೇಶಕ್ಕೆ ವೀರಾವೇಶದಿಂದ ಹೋರಾಡುವಂತಹ ಪ್ರಧಾನಿ ಅಭ್ಯರ್ಥಿ ಬೇಕು ಎಂದರು. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ದೇಶದಲ್ಲಿ 360 ಕಡೆ ಸಾರ್ವಜನಿಕ ಸಭೆ ನಡೆಸಿದ್ದಾರೆ. ಆದರೆ 10 ವರ್ಷ ದೇಶ ಆಳಿದ ಪ್ರಧಾನಿ ಮನಮೋಹನ್ ಸಿಂಗ್ ಜನರ ಬಳಿಗೆ ಬರದೇ ಕೇವಲ ನಾನು ಪ್ರಧಾನಿ  ಎಂದು ತೆರೆ ಹಿಂದೆ ಕಂಡಿದ್ದಾರೆ ಎಂದರು. ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವಂತಹ ಕಾಂಗ್ರೆಸ್ (ಪಾರ್ಥೇನಿಯಂ) ಕಿತ್ತು ಹಾಕುತ್ತಾರೆ. ಅದೇ ರೀತಿ 57 ವರ್ಷದಿಂದ ದೇಶ ಆಳಿದ ಕಾಂಗ್ರೆಸ್ ಆಡಳಿತವನ್ನು ಈ ಬಾರಿ ದೇಶದಿಂದಲೇ ಕಿತ್ತು ಹಾಕಿ ದೇಶವನ್ನು ಇವರ ಕಪಿಮುಷ್ಟಿಯಿಂದ ರಕ್ಷಿಸಬೇಕು. ಒಂದೆಡೆ ದೇಶದ ಸೈನಿಕರ ಹತ್ಯೆಯಾಗುತ್ತಿದ್ದರೆ ಪ್ರಧಾನಿ ಸಿಂಗ್ ಮೌನ ಸಿಂಗ್ ಆಗಿದ್ದಾರೆ ಇಂತಹವರಿಂದ ದೇಶದ ರಕ್ಷಣೆ ಹಾಗೂ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಏ.17 ರಂದು ಮತಕೇಂದ್ರದಲ್ಲಿ ಬಿಜೆಪಿ ಗುಂಡಿ ಒತ್ತುವ ಮೂಲಕ ಕಾಂಗ್ರೆಸ್‌ಗೆ ವಿದಾಯ ಹೇಳಿ ಎಂದರು. ಟೀ ಮಾರುವ ವ್ಯಕ್ತಿ ದೇಶ ಆಳಲು ಸಾಧ್ಯವೇ ಎಂದು ಕಾಂಗ್ರೆಸ್ ಪಕ್ಷ ಬಡವರನ್ನು ಹೀಯಾಳಿಸಿದ ಪರಿಣಾಮ ಇಂದು ದೇಶದಲ್ಲಿ ಮೋದಿಯ ಅಲೆ ಸೃಷ್ಟಿಯಾಗಿದೆ ಚಿನ್ನದ ಚಮದಲ್ಲಿ ಊಟ ಮಾಡುವ ರಾಹುಲ್ ಗಾಂಧಿಗೆ ಈ ದೇಶದ ಬಡವರ ಸಮಸ್ಯೆ ತಿಳಿದಿಲ್ಲ ಬಡವರ ಅಭಿವೃದ್ಧಿಯಾಗಬೇಕಾದರೆ ಮೋದಿಯನ್ನು ಪ್ರಧಾನಿ ಮಾಡುವಂತೆ ಮನವಿ ಮಾಡಿದ ಅವರು 2 ಸ್ಥಾನ ಗೆಲ್ಲುವ ಜೆಡಿಎಸ್ ನಿಂದ ಈ ದೇಶಕ್ಕೆ ಏನನ್ನು ಮಾಡಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.
ಮಾಜಿ ಸಚಿವ ವಿ. ಸೋಮಣ್ಣ, ಜಿಲ್ಲಾಧ್ಯಕ್ಷ ಸುರೇಶ್ ಗೌಡ, ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ, ಮಾಜಿ ಎಂಎಲ್‌ಸಿ ನೀಲಯ್ಯ, ಮಾಜಿ ಶಾಸಕ ವೀರಭದ್ರಯ್ಯ, ತಾಲೂಕು ಅಧ್ಯಕ್ಷ ಎಸ್ ಪವನ್ ಕುಮಾರ್, ರಾಜ್ಯ ಕಾರ್ಯದರ್ಶಿ ನಂದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಮ್ಮಜ್ಜ, ಪೆದ್ದರಾಜು, ವಾಲೆ ಚಂದ್ರಯ್ಯ, ಅಂದಾನಪ್ಪ, ವಿಜಯ್ ಕುಮಾರ್, ವಿಶ್ವನಾಥ್, ಪ್ರಸನ್ನಕುಮಾರ್, ನಟರಾಜು, ರವಿಪ್ರಸಾದ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement