ಪ್ರಗತಿಪರರ ವಿರುದ್ಧ ಮರಿದೇವರು ಟೀಕೆ
ತುಮಕೂರು: ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿಯನ್ನು ಸೋಲಿಸುವುದೇ ತಮ್ಮ ಗುರಿ ಎಂಬ ಪ್ರಗತಿಪರ ಸಾಹಿತಿಗಳ ಹೇಳಿಕೆಗೆ ಕಲ್ಪತರು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹಾಗೂ ಲೇಖಕ ಪ್ರೊ. ಸಿ.ಎಚ್. ಮರಿದೇವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಗತಿ ಎಂಬ ಶಬ್ದದ ಅರ್ಥವೇ ಗೊತ್ತಿಲ್ಲದ ಎಸ್.ಜಿ. ಸಿದ್ದರಾಮಯ್ಯ, ಕೆ. ಮರುಳಸಿದ್ದಪ್ಪ, ಕೆ.ಟಿ. ಶಿವಪ್ರಸಾದ್, ಕೆ.ಬಿ. ಸಿದ್ದಯ್ಯ, ಮಾವಳ್ಳಿ ಶಂಕರ್ ಅವರು ನರೇಂದ್ರ ಮೋದಿಯನ್ನು ಸೋಲಿಸುವ ಮಾತನಾಡಿದ್ದಾರೆ. ಈ ಎಲ್ಲಾ ಪ್ರಗತಿಪರರು ಓಟು ಕೊಡದಿದ್ದರೂ ಮೋದಿ ಪ್ರಧಾನಿಯಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಇಂತಹ ಸೂಡೋ ಸಾಹಿತಿಗಳ ಓಟಿನಿಂದ ಮೋದಿ ಸೋಲುತ್ತಾರೆ ಎಂಬ ಕನಸು ಇನ್ನು ಕೆಲವೇ ದಿನಗಳಲ್ಲಿ ನುಚ್ಚು ನೂರಾಗುತ್ತದೆ. ಇಂತಹ ಪ್ರಗತಿಪರರು ಮೋದಿಯಂತ ಧೀಮಂತ ವ್ಯಕ್ತಿಯನ್ನು ಸೋಲಿಸುವ ಕನಸು ಕಾಣುವುದೇ ಹಾಸ್ಯಾಸ್ಪದ ಎಂದಿದ್ದಾರೆ. ಈ ಎಲ್ಲಾ ಪ್ರಗತಿಪರರನ್ನು ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
'ಕಾಂಗ್ರೆಸ್‌ನಲ್ಲಿ ಮಹಾನ್ ನಾಯಕರಿದ್ದಾರೆ'
ಹುಳಿಯಾರು: ಕಾಂಗ್ರೆಸ್ ಪಕ್ಷದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಅವಿರತ ಹೋರಾಟ ನಡೆಸಿ ಮಡಿದ ಮಹಾನ್ ವ್ಯಕ್ತಿಗಳಿದ್ದಾರೆ, ಆದರೆ ಈಗ ಹುಟ್ಟಿ ಬೆಳೆದು ಬೊಬ್ಬೆ ಹೊಡೆಯುತ್ತಿರುವ ಬಿಜೆಪಿ, ಜೆಡಿಎಸ್ ಪಕ್ಷದಲ್ಲಿ ಈ ರೀತಿ ಹೋರಾಟಗಳನ್ನು ಮಾಡಿದ ವ್ಯಕ್ತಿ ಅಥವಾ ಒಂದು ನಿದರ್ಶನವನ್ನು ನಮ್ಮ ಮುಂದಿಡಿ ನೋಡೋಣವೆಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಸವಾಲು ಹಾಕಿದರು. ಹುಳಿಯಾರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಮುದ್ದಹನುಮೆಗೌಡ ಪರ ಪ್ರಚಾರಕ್ಕಾಗಿ ಆಗಮಿಸಿದ ಅವರು ರೋಡ್ ಶೋ ನಡೆಸಿ ನಂತರ ಮಾತನಾಡಿದರು. ಅಭ್ಯರ್ಥಿ ಮುದ್ದಹನುಮೇಗೌಡ ಮಾತನಾಡಿ, ಕಳೆದ ನಾಲ್ಕು ಬಾರಿಯಿಂದ ಸಂಸತ್ತಿನಲ್ಲಿರುವ ಜಿ.ಎಸ್.ಬಸವರಾಜು ಕ್ಷೇತ್ರಕ್ಕಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿ ತಮ್ಮನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು. ಜಿಲ್ಲಾ ಕಾಂಗ್ರೆಸ್ ಸದಸ್ಯ ವೈ.ಸಿ.ಸಿದ್ದರಾಮಯ್ಯ, ಅಶೋಕ್, ಧನುಷ್ ರಂಗನಾಥ್, ವೆಂಕಟೇಶ್, ಚಂದ್ರಶೇಖರ್, ಕೆಂಕೆರೆ ಶಿವಕುಮಾರ್, ಸಾಸಲು ಸತೀಶ್, ರಹಮತ್ ಉಲ್ಲಾ, ಡಿಶ್ ಬಾಬು, ಮೀಸೆ ರಂಗಪ್ಪ ಇದ್ದರು.