ಸಾಲಬಾಧೆ: ಟೈಲರ್ ಆತ್ಮಹತ್ಯೆ
ಕುಣಿಗಲ್: ಸಾಲಬಾಧೆಯಿಂದಾಗಿ ಟೈಲರ್ ಒಬ್ಬ ತನ್ನ ಮಳಿಗೆಯಲ್ಲಿ ನೇಣಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಪುರಸಭೆ ಐಡಿಎಸ್ಎಂಟಿ ಮಳಿಗೆಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ, ಆತ್ಮಹತ್ಯೆಗೆ ಶರಣಾದ ಟೈಲರ್ನನ್ನು ಮಂಗಳೂರು ಮೂಲದ ಜಾಸ್ಮಿನ್ ಟೈಲರ್ಸ್ ಮಾಲೀಕ ರಾಜೀವ ಸುವರ್ಣ (45) ಎಂದು ಗುರುತಿಸಲಾಗಿದೆ.
ಮಂಗಳೂರಿನ ಪೊಳಲಿ ಸಮೀಪದ ಅಗ್ಗಿಯೂರಿನ ನಿವಾಸಿಯಾಗ್ಗಿದು, ಕಳೆದ ಮೂವತ್ತು ವರ್ಷಗಳಿಂದಲೂ ಪಟ್ಟಣದಲ್ಲಿ ಟೈಲರ್ ವೃತ್ತಿ ನಡೆಸುತ್ತಾ ಜನಾನುರಾಗಿಯಾಗಿದ್ದರು. ಇತ್ತೀಚೆಗೆ ವ್ಯವಹಾರದಲ್ಲಿ ನಷ್ಟಕ್ಕೆ ಸಿಲುಕಿದ್ದು, ಇದರೊಂದಿಗೆ ಕೆಲ ಸ್ನೇಹಿತರೊಡಗೂಡಿ ಚೀಟಿ ವ್ಯವಹಾರ ಸಹ ನಡೆಸುತ್ತಿದ್ದು, ಇವರ ಸ್ನೇಹಿತ ಉಡುಪಿಯ ಆಶೋಕ್ ಎಂಬಾತ ಹಣ ಪಡೆದು ಕಟ್ಟದೆ ಹೋಗಿದ್ದು, ವ್ಯವಹಾರದಲ್ಲಿನ ನಷ್ಟಭರಿಸಲು ಮಾಡಿದ ಸಾಲದ ಬಾಧೆಯಿಂದ ಬೇಸತ್ತು, ಶುಕ್ರವಾರ ಬೆಳಗ್ಗೆ ತಮ್ಮ ಮಳಿಗೆಗೆ ಆಗಮಿಸಿ, ಗ್ರಾಹಕರೊಬ್ಬರು ಹೊಲೆಯಲು ನೀಡಿದ್ದ ಸೀರೆಯಿಂದ ಮಳಿಗೆಯ ಫ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಳಿಗೆಯ ಮತ್ತೊಂದು ಭಾಗದಲ್ಲಿ ತಮ್ಮಪತ್ನಿಗೆ ಬ್ಯೂಟಿ ಪಾರ್ಲರ್ ನಡೆಸಲು ವ್ಯವಸ್ಥೆ ಮಾಡಿಕೊಟ್ಟಿದ್ದು, ಇಬ್ಬರೂ ದುಡಿಯುತ್ತಿದ್ದರು. ಶುಕ್ರವಾರ ಬೆಳಗ್ಗೆ 8 ಗಂಟೆ ಸಮಯದಲ್ಲಿ ಅಂಗಡಿಯಲ್ಲಿ ಕೆಲಸಕ್ಕಿದ್ದ ಹುಡುಗರು ಬಂದು ನೋಡಿದಾಗ ಮಾಲೀಕ ನೇಣಿಗೆ ಶರಣಾಗಿದ್ದು ಪತ್ತೆಯಾಯಿತು. ಪತ್ನಿ ಅಮಿತಾರಾಜ್ ಸುವರ್ಣ, ನೀಡಿದ ದೂರಿನ ಮೇರೆಗೆ ಪಿಎಸೈ ಗುರುಪ್ರಸಾದ್ ಮತ್ತು ಸಿಬ್ಬಂದಿ ಸ್ಥಳಕ್ಕಾಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಮತಯಾಚನೆ
ಮಧುಗಿರಿ: ಬಿಜೆಪಿ ನಾಯಕ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ಬಿಜೆಪಿ ಬೆಂಬಲಿಸಿ ಎಂದು ಶಾಸಕ ಸುರೇಶ್ಗೌಡ ಮನವಿ ಮಾಡಿದರು. ಇಲ್ಲಿನ ಲಾಸ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ತಾಲೂಕು ಬಿಜೆಪಿ ಘಟಕ ಏರ್ಪಡಿಸಿದ್ದ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಮಾಜಿ ಸಚಿವ ರಾಮಚಂದ್ರಗೌಡ ಮಾತನಾಡಿ, ದೇಶದ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಬಿಜೆಪಿ ಗೆಲ್ಲಿಸಿ ನಮೋ ಪ್ರಧಾನಿಯಾದರೆ ದೇಶ ಸುಭಿಕ್ಷವಾಗುತ್ತದೆ ಎಂದರು. ಅಭ್ಯರ್ಥಿ ಜಿ.ಎಸ್.ಬಸವರಾಜು ಮತಯಾಚಿಸಿದರು. ತಾಲೂಕು ಬಿಜೆಪಿ ಅಧ್ಯಕ್ಷ ಲಕ್ಷ್ಮೀಪತಿ, ವಾಲೇಚಂದ್ರಯ್ಯ, ಸಿ.ವಿ.ಮಹದೇವಯ್ಯ, ರಾಜ್ಯ ಕಾರ್ಯದರ್ಶಿ ನಂದೀಶ್, ಮಹಿಳಾ ಅಧ್ಯಕ್ಷೆ ಪ್ರೇಮಾ ಹಗ್ಗಡೆ, ಜ್ಯೋತಿನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
'ಕುಂಚಿಟಿಗರನ್ನು ಓಬಿಸಿಗೆ ಸೇರಿಸಿ'
ತುಮಕೂರು: ಕುಂಚಿಟಿಗ ಜನಾಂಗದವರನ್ನು ಓಬಿಸಿ ಪಟ್ಟಿಗೆ ಸೇರಿಸಲು ಬಿಜೆಪಿ ನರೇಂದ್ರ ಮೋದಿಯನ್ನು ಬೆಂಬಲಿಸುವಂತೆ ಬಿಜೆಪಿ ಮುಖಂಡ ನೇರಲಗುಡ್ಡ ಶಿವಕುಮಾರ್ ಮನವಿ ಮಾಡಿದ್ದಾರೆ.
ಕುಂಚಿಟಿಗ ಸಮುದಾಯ ರಾಜ್ಯದಲ್ಲಿ ಸುಮಾರು 30 ಲಕ್ಷ ಜನಸಂಖ್ಯೆಯಲ್ಲಿ ಇದ್ದಾರೆ. ತುಮಕೂರು, ಚಿತ್ರದುರ್ಗ,ಮೈಸೂರು, ಶಿವಮೊಗ್ಗ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ. ಕುಂಚಿಟಿಗ ಜನಾಂಗದವರು ಹೆಚ್ಚಾಗಿ ಬರಪೀಡಿತ ಪ್ರದೇಶಗಳಲ್ಲಿ ವ್ಯವಸಾಯವೇ ಮುಖ್ಯ ಕಸುಬಾಗಿ ವಾಸಿಸುತ್ತಾ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದಾರೆ ಹಾವನೂರು ವರದಿಯಲ್ಲಿ ಉಲ್ಲೇಖವಾಗಿರುವ ಬಹುತೇಕ ಒಕ್ಕಲಿಗ ಒಳ ಪಂಗಡಗಳನ್ನು ಕೇಂದ್ರ ಸರ್ಕಾರ ಓಬಿಸಿ ಪಟ್ಟಿಯಲ್ಲಿ ಸೇರಿಸಿರುತ್ತದೆ. ವಿಪರ್ಯಾಸವೆಂದರೆ ಕೇಂದ್ರ ಸರ್ಕಾರದ ಅಧಿಕಾರಗಳ ನಿರ್ಲಕ್ಷ್ಯತೆ ಹಾಗೂ ಬೇಜವಾಬ್ದಾರಿಯಿಂದ ಕುಂಚಿಟಿಗ ಮಾತ್ರ ಈ ಪಟ್ಟಿಗೆ ಸೇರಿಸಲಿಲ್ಲ.
ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗದ ನಾಯಕ ಮೋದಿಯನ್ನು ಬೆಂಬಲಿಸಿದರೆ ಕುಂಚಿಟಿಗರನ್ನು ಓಬಿಸಿಗೆ ಸೇರಿಸುತ್ತಾರೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.