10 ವರ್ಷಗಳ ಯುಪಿಎ ಸಾಧನೆ ಕ್ರಾಂತಿಕಾರಕ
ಕನ್ನಡಪ್ರಭ ವಾರ್ತೆ, ತುಮಕೂರು, ಏ.12
10 ವರ್ಷಗಳ ಕಾಂಗ್ರೆಸ್ ನೇತೃತ್ವದ ಕೇಂದ್ರ ಯುಪಿಎ ಸರ್ಕಾರದ ಸಾಧನೆ ಕ್ರಾಂತಿಕಾರಕ. ಜನಪರ ಆಡಳಿತಕ್ಕೆ ದ್ಯೋತಕ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಉಪಸಭಾಪತಿ ವಿ.ಆರ್. ಸುದರ್ಶನ್ ಅಭಿಪ್ರಾಯಪಟ್ಟರು.
ಅವರು ತುಮಕೂರಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಏರ್ಪಾಟಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ 10 ತಿಂಗಳ ಆಡಳಿತ, ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ 10 ವರ್ಷಗಳ ಆಡಳಿತದ ಸಾಧನೆ ಮುಂದಿಟ್ಟು, ಕಾಂಗ್ರೆಸ್ ಇತಿಹಾಸ, ಪರಂಪರೆ ಆಧಾರದ ಮೇಲೆ ಲೋಕಸಭಾ ಚುನಾವಣೆಯಲ್ಲಿ ಮತಯಾಚಿಸಲಾಗುತ್ತಿದ್ದು, ಗೆಲ್ಲುವ ವಿಶ್ವಾಸವಿದೆ ಎಂದರು.
ಸಮಾಜದ ಎಲ್ಲ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ, ಅಂತಾರಾಷ್ಟ್ರೀಯ ಏರು ಪೇರಿಗೆ ಅನುಗುಣವಾಗಿ ಆಡಳಿತ ನೀಡುವ ಛಾತಿ ಕಾಂಗ್ರೆಸ್ ಪಕ್ಷಕ್ಕಿದೆ. ಇದಕ್ಕೆಲ್ಲಾ ಅನುಭವ ಅಗತ್ಯವಾಗಿದ್ದು, ಅನುಭವ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಭ್ರಷ್ಟಾಚಾರ: ರಾಜ್ಯ ಬಿಜೆಪಿ ಸರ್ಕಾರದ 5 ವರ್ಷಗಳ ಆಡಳಿತ ದುಃಸ್ವಪ್ಪದಂತಿದ್ದು, ಹಿಂದೆಂದೂ ಕಾಣದಷ್ಟು ಭ್ರಷ್ಟಾಚಾರ, ಆರಾಜಕತೆ ತಾಂಡವವಾಡಿತ್ತು. ರಾಜ್ಯ ಬಿಜೆಪಿ ಸರ್ಕಾರದಲ್ಲಿ ಹಗರಣಗಳ ಸರಮಾಲೆಯೇ ನಡೆದಿತ್ತು. ಕಾಂಗ್ರೆಸ್ ಟೀಕಿಸುವ ನೈತಿಕ ಹಕ್ಕು ಬಿಜೆಪಿಗಿಲ್ಲ. ಸಾಧನೆ ಮುಂದಿಟ್ಟು ಮತಕೇಳಲು ಮುಖವಿಲ್ಲದ ಬಿಜೆಪಿ, ಮೋದಿ ಹೆಸರೇಳಿ ಮತಯಾಚಿಸುತ್ತಿದೆ. ಅಷ್ಟಕ್ಕೂ ಗುಜರಾತ್ ಮಾದರಿ ಎಂದರೆ ಒಂದು ಗಾಂಧಿ ವಿಚಾರಧಾರೆ. ಇನ್ನೊಂದು ಸರ್ಧಾರ್ ಪಟೇಲ್ ನೆನಪು ಮಾಡಿಕೊಳ್ಳುವುದಾಗಿದೆಯೇ ಹೊರತು, ಮೋದಿ ಮಾಡೆಲ್ ಅಲ್ಲ ಎಂದು ಸುದರ್ಶನ್ ನುಡಿದರು.
ಲೋಕಾಯುಕ್ತ ಸ್ಧಾಪನೆಗೆ ಹಿಂದೇಟು ಹಾಕಿ, ಸುಪ್ರೀಂಕೋರ್ಟ್ನಿಂದ ಛಿಮಾರಿ ಹಾಕಿಸಿಕೊಂಡು, ರಾಜ್ಯಪಾಲರ ಮಧ್ಯಪ್ರವೇಶದಿಂದ ಲೋಕಾಯುಕ್ತ ಸ್ಥಾಪನೆ ಮಾಡಿದ್ದು ಗುಜರಾತ್ ಮಾದರಿಯೇ ಎಂದು ಪ್ರಶ್ನಿಸಿದ ಸುದರ್ಶನ್, 10 ವರ್ಷಗಳ ಹಿಂದೆಯೇ ಲೋಕಾಯುಕ್ತ ಸ್ಥಾಪಿಸಿದ್ದರೆ, ಮೋದಿ ಸರ್ಕಾರದ ಭ್ರಷ್ಟಾಚಾರ, ಹಗರಣಗಳು, ಹುಳುಕುಗಳು ಬೀದಿಗೆ ಬಂದು, ಹಲವು ಮಂತ್ರಿಗಳು ಜೈಲು ಸೇರಬೇಕಾಗುತ್ತಿತ್ತು. ಇವುಗಳನ್ನು ಮುಚ್ಚಿಡಲು, ಲೋಕಾಯುಕ್ತ ಸ್ಥಾಪನೆಗೆ ಹಿಂದೇಟು ಹಾಕಿದ್ದು ಮೋದಿ ಸಾಧನೆಯೇ ಸರಿ ಎಂದು ಸುದರ್ಶನ್ ವ್ಯಂಗ್ಯವಾಡಿದರು. ಮೋದಿ ವಿವಾಹ ವಿವಾದ ಸೃಷ್ಟಿಸಿದ್ದು ಕಾಂಗ್ರೆಸ್ ಪಕ್ಷವಲ್ಲ. ಅವರಾಗೇ ಸೃಷ್ಟಿಸಿಕೊಂಡಿದ್ದು. ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಲೋಕಸಭಾ ಅಭ್ಯರ್ಥಿಯಾದವರು ಪತ್ನಿಗೆ ಸಂಬಂಧಿಸಿದ ಕಾಲಂ ಭರ್ತಿ ಮಾಡಬೇಕಾಗಿರುವುದು ಅನಿವಾರ್ಯವಾಗಿತ್ತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ಶಿಕ್ಷಿಸಿದೆ: ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಹೋಲಿಸಿದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಉತ್ತಮ. ಅಂಕಿ-ಅಂಶಗಳೇ ಇದಕ್ಕೆ ಸಾಕ್ಷಿ. ಕಾಂಗ್ರೆಸ್ಸೇತರ ಸರ್ಕಾರಗಳಿಂದ ಸ್ಥಿರತೆ ಸಾಧ್ಯವಿಲ್ಲ ಎಂದರು. ಭ್ರಷ್ಟಾಚಾರದಲ್ಲಿ ಸಿಲುಕಿದವರನ್ನು ಕಾಂಗ್ರೆಸ್ ಶಿಕ್ಷಿಸಿದರೆ, ಬಿಜೆಪಿ ಹಾಗೆ ಉಳಿಸಿಕೊಂಡಿದೆ. ಇದೇ ಕಾಂಗ್ರೆಸ್, ಬಿಜೆಪಿಗಿರುವ ವ್ಯತ್ಯಾಸ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾಪ್ರಭುತ್ವ ನಿಂತ ನೀರಲ್ಲ: ಅನುಭವಿ ಜಾಫರ್ ಷರೀಫ್ಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದು ಏಕೆ ಎಂಬ ಪ್ರಶ್ನೆಗೆ, ಷರೀಫ್ಗೆ ಇಂದಿರಾಗಾಂಧಿಯವರ ಕಾಲದಿಂದಲೂ ಟಿಕೆಟ್ ನೀಡಿಕೊಂಡೇ ಬರಲಾಗಿದೆ. ಈಗ ಅವರಿಗೆ ವಯಸ್ಸಾಗಿದೆ. ಅವರು ಪಕ್ಷದಲ್ಲಿ, ಸರ್ಕಾರದಲ್ಲಿ ಅಧಿಕಾರ ಅನುಭವಿಸಿದ್ದಾರೆ. ಬೇರೆಯವರಿಗೆ ಅವಕಾಶ ಮಾಡಿಕೊಡಲಾಗಿದೆ. ಪ್ರಜಾಪ್ರಭುತ್ವ ನಿಂತ ನೀರಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಎಂಎಲ್ಸಿ ಎಂ.ಆರ್. ಸೀತಾರಾಂ ಮಾತನಾಡಿ, ತಾವು ತುಮಕೂರು ಜಿಲ್ಲೆಯಲ್ಲಿ ಕಳೆದ 4 ದಿನಗಳಿಂದ ಪ್ರಚಾರ ಕೈಗೊಂಡಿದ್ದು, ಕಾಂಗ್ರೆಸ್ಗೆ ಉತ್ತಮ ವಾತಾವರಣ ಕಂಡು ಬಂದಿದೆ. ಗೆಲವು ಖಚಿತ. ರಾಜ್ಯದ ದಕ್ಷಿಣದ 5 ಕ್ಷೇತ್ರಗಳಲ್ಲಿ ಗೆಲವಿನ ಸನಿಹದಲ್ಲಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕರಾದ ನೆ.ಲ. ನರೇಂದ್ರಬಾಬು, ಮಾಜಿ ಶಾಸಕ ಎಚ್. ನಿಂಗಪ್ಪ, ಸಿಮೆಂಟ್ ಮಂಜುನಾಥ್, ಡಾ. ಯಲ್ಲಪ್ಪ, ಅಲ್ಪಸಂಖ್ಯಾತರ ವಿಭಾಗದ ಮುಷ್ತಾಕ್ ಅಹಮದ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಜಕಣಾಚಾರ್, ರಾಜ್ಯ ಕಾಂಗ್ರೆಸ್ ಕಾನೂನು ವಿಭಾಗದ ನಿರಂಜನ್ ಇತರರಿದ್ದರು.
ಕಾಂಗ್ರೆಸ್ಗೆ ಕೀರ್ತಿ
1991 ರಲ್ಲಿ ಚಿನ್ನ ಅಡವಿಟ್ಟು, ದೇಶ ನಿಭಾಯಿಸುವ ದುಃಸ್ಥಿತಿ ಬಂದಿತ್ತು. ದೇಶವನ್ನು ಈ ಆತಂಕದಿಂದ ಪಾರು ಮಾಡಿದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ಹಾಗೆಯೇ ಬ್ಯಾಂಕ್ ರಾಷ್ಟ್ರೀಕರಣ, ಬಡವರ, ಜನಪರ ಕಾರ್ಯಕ್ರಮಗಳನ್ನು ರೂಪಿಸಿದ ಕೀರ್ತಿಯೂ ಕಾಂಗ್ರೆಸ್ಗೆ ಸಲ್ಲಬೇಕು. ಪ್ರಧಾನಿ ಇಂದಿರಾಗಾಂಧಿಯವರ ಆಡಳಿತ ಸ್ಮರಣೀಯ. ಹಾಗೆಯೇ ರಾಜ್ಯದಲ್ಲಿ ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ದೇವರಾಜ ಅರಸು, ವೀರೇಂದ್ರ ಪಾಟೀಲ್, ಎಸ್.ಎಂ. ಕೃಷ್ಣ ಅವರ ಆಡಳಿತ ನೆನಪಿನಲ್ಲಿಡುವಂತದ್ದು. ಹಾಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಜನಪರ, ಉತ್ತಮ ಆಡಳಿತ ನೀಡುತ್ತಿದ್ದು, ಇನ್ನು 4 ವರ್ಷ ಆಡಳಿತ ನಡೆಸಲಿದ್ದಾರೆ ಎಂದು ವಿ.ಆರ್. ಸುದರ್ಶನ್ ತಿಳಿಸಿದರು.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ 10 ತಿಂಗಳ ಆಡಳಿತ, ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ 10 ವರ್ಷಗಳ ಆಡಳಿತದ ಸಾಧನೆ ಮುಂದಿಟ್ಟು, ಕಾಂಗ್ರೆಸ್ ಇತಿಹಾಸ, ಪರಂಪರೆ ಆಧಾರದ ಮೇಲೆ ಲೋಕಸಭಾ ಚುನಾವಣೆಯಲ್ಲಿ ಮತಯಾಚಿಸಲಾಗುತ್ತಿದ್ದು, ಗೆಲ್ಲುವ ವಿಶ್ವಾಸವಿದೆ
-ವಿ.ಆರ್. ಸುದರ್ಶನ್