ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಸೂಕ್ತವಲ್ಲ: ಸಚಿವ ಜಯಚಂದ್ರ

Srinivasa Murthy VN
Updated On : 13 Apr 2014, 12:42 pm

ತುಮಕೂರು: ತುಮಕೂರು ನಗರದಲ್ಲಿ ಸಚಿವರು, ಶಾಸಕರ ನೇತೃತ್ವದಲ್ಲಿ ಪಾದಯಾತ್ರೆ, ಮತಯಾಚನೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ನಿಜವಾದ ಬಣ್ಣ ಬಯಲಾಗುತ್ತಿದೆ. ಹಲವು ಮಾಧ್ಯಮಗಳ ವರದಿ ಹಾಗೂ ಬಿಜೆಪಿಯ ಕೆಲವು ಮುಖಂಡರುಗಳೇ ಹೇಳುವ ಪ್ರಕಾರ, ಪ್ರಧಾನಿ ಹುದ್ದೆಗೆ ನರೇಂದ್ರಮೋದಿ ಸೂಕ್ತವಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಅಭಿಪ್ರಾಯಪಟ್ಟರು.
ತುಮಕೂರು ನಗರದ ಹಲವು ವಾರ್ಡ್‌ಗಳಲ್ಲಿ ತುಮಕೂರು ವಿಧಾನಸಭಾ ಸದಸ್ಯ ಡಾ.ರಫೀಕ್ ಅಹಮದ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಅವರ ಪರ ಪ್ರಚಾರ ಹಾಗೂ ಮತಯಾಚನೆ ಬಳಿಕ ಅವರು ಮಾತನಾಡಿದರು.
ದೇಶದ ಹೆಣ್ಣುಮಕ್ಕಳ ರಕ್ಷಣೆ ಬಗ್ಗೆ ಮಾತನಾಡುವ ನರೇಂದ್ರ ಮೋದಿಯವರು, ತಮ್ಮ ಪತ್ನಿಯ ಹೆಸರನ್ನೇ ಎಲ್ಲೂ ಹೇಳದಿರಲು ಕಾರಣವೇನು. ತಮ್ಮ ಹೆಂಡತಿಗೇ ಸೂಕ್ತವಾದ ರಕ್ಷಣೆ, ನ್ಯಾಯ ಒದಗಿಸದ ಮೋದಿ ದೇಶದ ಹೆಣ್ಣುಮಕ್ಕಳಿಗೆ ಹೇಗೆ ರಕ್ಷಣೆ ನೀಡಲು ಸಾಧ್ಯ ಎಂದು ವ್ಯಂಗ್ಯವಾಡಿದರು.
ಕಾಗ್ರೆಸ್ ಅನಿವಾರ್ಯ: ಹಲವು ಚುನಾವಣೆಗಳ ಸಮಯದಲ್ಲಿ ಹೆಂಡತಿಯ ಹೆಸರನ್ನೇ ಸೂಚಿಸದ ಮೋದಿ ಮಹಾ ಸುಳ್ಳುಗಾರ. ಇಂತಹ ಸುಳ್ಳುಗಾರನಿಂದ ದೇಶದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ ಅವರು, ಎಲ್ಲ ವರ್ಗ, ಜಾತಿ, ಸಮುದಾಯದ ಜನರು ಶಾಂತಿ ಹಾಗೂ ನೆಮ್ಮದಿಯಿಂದ ಜೀವನ ಸಾಗಿಸಲು ದೇಶದಲ್ಲಿ ಕಾಂಗ್ರೆಸ್ ಅನಿವಾರ್ಯವಾಗಿದೆ. ಹಾಗಾಗಿ ಎಲ್ಲ ಮತದಾರರು ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ ಅವರಿಗೆ ಮತಹಾಕುವಂತೆ ಜನರಲ್ಲಿ ಮನವಿ ಮಾಡಿದರು.
ಕಾಂಗ್ರೆಸ್‌ನಿಂದ ಜಿಲ್ಲೆಯ ಅಭಿವೃದ್ಧಿ: ಬಡವರ, ದೀನದಲಿತರ, ಅಲ್ಪಸಂಖ್ಯಾತರ ಪರವಾಗಿ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದ ಕಾಂಗ್ರೆಸ್ ಸರ್ಕಾರದ 9 ತಿಂಗಳ ಸಾಧನೆಗಳನ್ನು ಜನತೆಯ ಮುಂದಿಟ್ಟು, ಜಿಲ್ಲೆಯ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ ಅವರನ್ನು ಬೆಂಬಲಿಸುವಂತೆ ತುಮಕೂರು ನಗರ ಶಾಸಕ ಡಾ.ರಫೀಕ್ ಅಹಮದ್ ಮತದಾರರಲ್ಲಿ ಮನವಿ ಮಾಡಿದರು.
ಕಾರ್ಯಕರ್ತರು ಹಾಗೂ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಆಹಾರ ಭದ್ರತೆ, ಕ್ಷೀರಭಾಗ್ಯ, ಆರ್‌ಟಿಐ, ಆರ್‌ಟಿಇ ಜಾರಿ, ರೈತರ, ಹಿಂದುಳಿದ ಹಾಗೂ ಎಸ್‌ಸಿ, ಎಸ್ಟಿ ಕೋಟ್ಯಂತರ ರು. ಸಾಲಮನ್ನಾ, ತುಮಕೂರು ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿದ ಕೀರ್ತಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಪ್ರಮುಖ ಸಾಧನೆಎಂದರು. ತುಮಕೂರು ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರು ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದ ಕಾಂಗ್ರೆಸ್ ಸರ್ಕಾರಕ್ಕೆ ಜನರು ಹೆಚ್ಚಿನ ಮತಗಳನ್ನು ಹಾಕುವ ಮೂಲಕ ಬೆಂಬಲಿಸಬೇಕು. ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ  ಎಸ್.ಪಿ.ಮುದ್ದಹನುಮೇಗೌಡ ಅವರು ಸಂಸದರಾದರೆ, ಕೇಂದ್ರದಿಂದ ಮತ್ತಷ್ಟು ಹೆಚ್ಚಿನ ಅನುದಾನ ತಂದು ಜಿಲ್ಲೆಯ ಪ್ರಗತಿ ಮಾಡಬಹುದು ಎಂದು ಶಾಸಕರು ತಿಳಿಸಿದರು. ಪಾಲಿಕೆ ಸದಸ್ಯರಾದ ಎಂ.ಪಿ. ಮಹೇಶ್, ಸುಧೀಶ್ವರ್, ನಯಾಜ್ ಅಹಮದ್, ನದೀಮ್ ಪಾಷ, ಅಸ್ಲಂಪಾಷ, ಕಾಂಗ್ರೆಸ್ ಮುಖಂಡರಾದ ಮೆಹಬೂಬ್ ಪಾಷ, ಇಷಾಕ್ ಅಹಮದ್, ಮಂಜುನಾಥ್, ಆರ್.ಕಾಮರಾಜ್, ಶಶಿಹುಲಿಕುಂಟೆ, ವಿಜಯ್ ಪ್ರಕಾಶ್ ಮಿರ್ಜಿ, ವಕ್ತಾರ ಜಕಣಾಚಾರ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement