ಮಧುಗಿರಿ ಮರೆಯಲಾರೆ: ಪರಮೇಶ್ವರ್
ಮಧುಗಿರಿ: ಮಧುಗಿರಿ ಕ್ಷೇತ್ರದ ಜನತೆ ಕಾಂಗ್ರೆಸ್ಗೆ ಮತ ಹಾಕುವ ಮೂಲಕ ನನಗೆ ರಾಜಕೀಯ ಜನ್ಮ ಕೊಟ್ಟು ಸಾಕಿ ಬೆಳೆಸಿದೆ. ಎಂದಿಗೂ ನಾ ಇದನ್ನು ಮರೆಯಲಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನುಡಿದರು.
ತುಮಕೂರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡರ ಪರ ಡಾ.ಜಿ.ಪರಮೇಶ್ವರ್, ಶಾಸಕ ಕೆ.ಎನ್.ರಾಜಣ್ಣ, ನಟ ಶಶಿಕುಮಾರ್, ಜಿಲ್ಲಾ ಸಮಿತಿ ಅಧ್ಯಕ್ಷ ಷಫಿ ಅಹಮದ್ ಮತ್ತಿತರೆ ಕಾಂಗ್ರೆಸ್ ಗಣ್ಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ರೋಡ್ ಶೋ ನಡೆಸುವ ಮೂಲಕ ಮತಯಾಚಿಸಿ ಮಾತನಾಡುತ್ತಿದ್ದರು.
ದೇಶದ ಭವಿಷ್ಯ ನಿರ್ಮಾಣ ಮಾಡುವ ಈ ಮಹಾ ಚುನಾವಣೆ ಸ್ವಾಭಿಮಾನದ ಬದುಕು ಶಾಂತಿ, ನೆಮ್ಮದಿ ಜೀವನ ನಡೆಸಲು ಎಲ್ಲ ವರ್ಗದ ಜನರನ್ನು ಒಟ್ಟಿಗೆ ಕೊಂಡೊಯ್ಯುವ ಶಕ್ತಿ, ಸಾಮರ್ಥ್ಯ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದ ಪರಮೇಶ್ವರ್, ಜಾತಿ, ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಬಿಜೆಪಿಯನ್ನು ತಿರಸ್ಕರಿಸಿ. ಈ ದೇಶದಲ್ಲಿ ಬಿಜೆಪಿ ಗೆಲ್ಲಬಾರದು, ನಮೋ ಪ್ರಧಾನಿ ಆಗ ಬಾರದು.ಎಲ್ಲರೂ ಕಾಂಗ್ರೆಸ್ಗೆ ಮತ ಹಾಕಿ ಮುದ್ದಹನುಮೇಗೌಡರನ್ನು ಗೆಲ್ಲಿಸುವಂತೆ ಪರಮೇಶ್ವರ್ ಮನವಿ ಮಾಡಿದರು. ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ದೇಶದ ಹಿತ ರಕ್ಷಣೆಗೆ ಕಾಂಗ್ರೆಸ್ ಬದ್ಧ, ಮಧುಗಿರಿ ಕ್ಷೇತ್ರಕ್ಕೆ ಇನ್ನು ಹೆಚ್ಚು ಅಭಿವೃದ್ಧಿ ಕೆಲಸ ಮಾಡಲು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕು ಎಂದರು. ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಬಸವರಾಜು 5 ವರ್ಷ ಸಂಸದರಾಗಿ ತಮ್ಮ ಸಾಧನೆ ಮುಂದಿಟ್ಟು ಮತ ಕೇಳಬೇಕುಎಂದರು.ಕ್ಷೇತ್ರದ ಜನತೆ ನನಗೆ ಒಂದು ಅವಕಾಶ ಕೊಡಿ. ನಿಮ್ಮ ನಿರೀಕ್ಷೆಗೆ ಮೀರಿ ಕೆಲಸ ಮಾಡುತ್ತೇನೆ ಎಂದರು. ವಿಧಾನ ಪರಿಷತ್ ಸದಸ್ಯ ಎಂ.ಆರ್. ಸೀತಾರಮು, ಜಿಲ್ಲಾ ಅಧ್ಯಕ್ಷ ಷಫೀ ಅಹಮದ್, ನಟ ಶಶಿಕುಮಾರ್ ಮಾತನಾಡಿದರು.