ಸಿಪಿಐ ಅಭ್ಯರ್ಥಿ ಚಿನ್ನಪ್ಪ ಪಾದಯಾತ್ರೆ
ತುಮಕೂರು: ಇದೇ ಮೊದಲ ಬಾರಿಗೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಸಿಪಿಐ (ಭಾರತೀಯ ಕಮ್ಯೂನಿಸ್ಟ್ ಪಕ್ಷ) ತುಮಕೂರಿನ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ, ಪಾದಯಾತ್ರೆ ನಡೆಸಿ, ಮತಯಾಚಿಸಿತು.
ಸಿಪಿಎಂ ಮುಖಂಡರು ಸಿಪಿಐ ಗೆ ಸಾಥ್ ನೀಡಿದರು. ತುಮಕೂರಿನ ಟೌನ್ಹಾಲ್ನಿಂದ ಪಾದಯಾತ್ರೆ ಆರಂಭಗೊಂಡಿತು. ಅಭ್ಯರ್ಥಿ ವಿ. ಚಿನ್ನಪ್ಪ ತುಮಕೂರಿನ ಪ್ರಮುಖ ರಸ್ತೆಗಳಲ್ಲಿ ಕಾರ್ಯಕರ್ತರೊಂದಿಗೆ ಮತಯಾಚಿಸಿದರು. ರೋಡ್ ಶೋ, ಪಾದಯಾತ್ರೆ ಉದ್ಘಾಟಿಸಿದ, ಮೈಸೂರಿನ ಸಿಪಿಐ ಮುಖಂಡ ಹಾಗೂ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಶೇಷಾದ್ರಿ ಮಾತನಾಡಿ, ಬಡವರು, ಹಿಂದುಳಿದವರು, ರೈತರು, ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ, ಸಾಮಾನ್ಯ ಜನತೆಯ ಹಿತಾಸಕ್ತಿ ಕಾಪಾಡಲು ಸಿಪಿಐ ಅಭ್ಯರ್ಥಿ ವಿ. ಚಿನ್ನಪ್ಪ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.
ಕಾಂಗ್ರೆಸ್, ಬಿಜೆಪಿ ದೇಶವನ್ನು ಅಧೋಗತಿಗೆ ತಂದು ನಿಲ್ಲಿಸಿವೆ. ಒಂದೇ ನಾಣ್ಯದ ಎರಡು ಮುಖಗಳಂತಿರುವ ಬಿಜೆಪಿ, ಕಾಂಗ್ರೆಸ್, ಪರಸ್ಪರ ಟೀಕೆ-ಟಿಪ್ಪಣಿ ಮಾಡಿಕೊಳ್ಳುತ್ತಲೇ ದೇಶದ ಹಿತಾಸಕ್ತಿಯನ್ನು ಕಡೆಗಣಿಸಿವೆ.
ಹಾಲಿ ಇರುವ ಆರ್ಥಿಕ ನೀತಿ ಬದಲಾಗದೆ, ಪರ್ಯಾಯ ಆರ್ಥಿಕ ನೀತಿ ಜಾರಿಯಾಗದೆ ದೇಶೋದ್ದಾರ ಸಾಧ್ಯವಿಲ್ಲ. ವಿಶ್ವ ಜಾಗತಿಕ ಆರ್ಥಿಕ ನೀತಿಯ ಪರಿಣಾಮ ದೇಶದಲ್ಲಿ ನಿರುದ್ಯೋಗ, ಆರ್ಥಿಕ ಕುಸಿತ, ರೈತರ ಆತ್ಮಹತ್ಯೆಗಳು ನಿರಂತರವಾಗಿ ನಡೆದಿವೆ. ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಕಾರ್ಮಿಕರ ಸ್ಥಿತಿ-ಗತಿ ಹೀನಾಯವಾಗಿದೆ. ಜನ ಸಾಮಾನ್ಯರು ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಸಾಮಾನ್ಯ ಜನತೆಯ ಗೋಳು ಕೇಳುವವರೇ ಇಲ್ಲದಂತಾಗಿದೆ. ಆದರೆ ಈ ಕುರಿತು ಬಿಜೆಪಿ, ಕಾಂಗ್ರೆಸ್ ತಲೆ ಕೆಡಿಸಿಕೊಂಡಿಲ್ಲ. ಆದರೆ ದೇಶೋದ್ಧಾರದ ಮಾತುಗಳನ್ನು ಈ ಎರಡು ಪಕ್ಷಗಳು ನಿರಂತರವಾಗಿ ಜಪಿಸುತ್ತಲೇ, ಜನಸಾಮಾನ್ಯರನ್ನು ಕಡೆಗಣಿಸುತ್ತಲೇ ಬಂದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬದಲಾವಣೆ ಗಾಳಿ: ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ತುಮಕೂರಿನಲ್ಲಿ ಸಿಪಿಐ ಅಭ್ಯರ್ಥಿ 33 ರ ಯುವಕ ವಿ. ಚಿನ್ನಪ್ಪ ಯುವ ಜನಾಂಗವನ್ನು ಪ್ರತಿನಿಧಿಸುತ್ತಿದ್ದಾರೆ. ಜಿಲ್ಲೆ, ನಗರದ ರೈತ, ಕಾರ್ಮಿಕರ, ಸಾಮಾನ್ಯರ ಸಮಸ್ಯೆಗಳ ಅರಿವಿರುವ ಚಿನ್ನಪ್ಪ ಪ್ರಾಮಾಣಿಕರಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಸಿಪಿಐ ಜನತೆಗೆ ಸ್ಪಂದಿಸುವ ಪಕ್ಷವಾಗಿದೆ ಎಂದು ಶೇಷಾದ್ರಿ ಪ್ರತಿಪಾದಿಸಿದರು. ರೋಡ್ ಶೋ, ಪಾದಯಾತ್ರೆ ವೇಳೆ ಸಿಪಿಐ ಜಿಲ್ಲಾ ಮುಖಂಡರಾದ ಎಐಟಿಯೂಸಿ ಗಿರೀಶ್, ಶಶಿಕಾಂತ್, ಗೌಡರಂಗಪ್ಪ, ಅಶ್ವತ್ ನಾರಾಯಣ, ವಾಸುದೇವ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಗೌಡರಂಗಪ್ಪ, ಎಐಟಿಯೂಸಿ ರಾಜ್ಯ ಉಪಾಧ್ಯಕ್ಷ ಶಿವಣ್ಣ, ಮಹಿಳಾ ಕಾರ್ಯಕರ್ತರು ಇತರರು ಪಾಲ್ಗೊಂಡಿದ್ದರು. ಸಿಪಿಐನ ಬಿ. ಉಮೇಶ್ ಹಾಗೂ ಇತರರು ಪಾದಯಾತ್ರೆ ವೇಳೆ ವಿ. ಚಿನ್ನಪ್ಪ ಪರ ಮತಯಾಚಿಸಿದರು.
ತುಮಕೂರಿನ ಟೌನ್ಹಾಲ್ನಿಂದ ಹೊರಟ ಸಿಪಿಐ ಪಾದಯಾತ್ರೆ ಬಿ.ಎಚ್. ರಸ್ತೆ, ಎಂಜಿ ರಸ್ತೆ, ಅಶೋಕ ರಸ್ತೆ, ಮಂಡಿಪೇಟೆ. ಚಿಕ್ಕಪೇಟೆ, ಕೋತಿ ತೋಪು, ಭದ್ರಮ್ಮ ವೃತ್ತ, ಎಸ್ಎಸ್ ಪುರಂ ಸೇರಿದಂತೆ ಇತರೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.