ಈಡೇರದ ಭರವಸೆಗಳೇ ಮತ್ತೆ ಮತ್ತೆ ಪ್ರಸ್ತಾಪ
ದೇಶ, ರಾಜ್ಯದ ಸಂಪರ್ಕದ ಅತಿಮುಖ್ಯ ಕೊಂಡಿಯಾಗಿರುವ ತುಮಕೂರಿನಲ್ಲಿ ಸಮಸ್ಯೆಗಳ ಮಹಾಪೂರ
ಕನ್ನಡಪ್ರಭ ವಾರ್ತೆ ತುಮಕೂರು ಏ.14
ರಾಜಧಾನಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ತುಮಕೂರು ಜಿಲ್ಲೆ 11 ತಾಲೂಕುಗಳನ್ನೊಳಗೊಂಡ ರಾಜ್ಯದ ಎರಡನೇ ಅತಿದೊಡ್ಡ ಜಿಲ್ಲೆ. ದೇಶ ಹಾಗೂ ರಾಜ್ಯದ ಸಂಪರ್ಕದ ಅತಿಮುಖ್ಯ ಕೊಂಡಿಯಾಗಿರುವ ತುಮಕೂರಿನಲ್ಲಿ ಸಮಸ್ಯೆಗಳೂ ಕೂಡ ದೊಡ್ಡ ಮಟ್ಟದಲ್ಲೇ ಇವೆ. ಆದರೆ ಪ್ರತಿ ಚುನಾವಣೆಯಲ್ಲಿ ಭರವಸೆ ಬಿಟ್ಟರೆ, ಬೇರೇನೂ ಸಿಕ್ಕಿಲ್ಲ. ಈಡೇರದ ಭರವಸೆಗಳನ್ನೇ ಮತ್ತೆ- ಮತ್ತೆ ಪ್ರಸ್ತಾಪಿಸುವುದನ್ನು ಬಿಟ್ಟು ಇನ್ನೇನೂ ಆಗಿಲ್ಲ. ಬಯಲು ಸೀಮೆ, ಬರಪೀಡಿತ ಜಿಲ್ಲೆ ಎಂದೇ ಖ್ಯಾತಿಯಾಗಿರುವ ತುಮಕೂರು ಜಿಲ್ಲೆಗೆ ಭರವಸೆಗಳ ಮಹಾಪೂರವೇ ಹರಿದು ಬಂದಿದೆ. ಆದರೆ ಜಾರಿಯಾಗಿಲ್ಲ. ಕಾಂಗ್ರೆಸ್, ಬಿಜೆಪಿ, ಸಂಸದರನ್ನು ಪೂರ್ಣಾವಧಿಗೆ ಕಂಡಿರುವ, ಜನತಾದಳ ಸಂಸದರನ್ನು ಒಂದೂವರೆ ವರ್ಷದ ಮಟ್ಟಿಗೆ ಕಂಡಿರುವ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಯಾವೊಂದು ಅಭಿವೃದ್ಧಿ ಕಾಮಗಾರಿಯೂ ಸಂರ್ಪೂರ್ಣವಾಗಿ, ತಕರಾರಿಲ್ಲದೆ ಮುಗಿದ ಉದಾಹರಣೆ ಸಿಗುವುದು ಕಷ್ಟ. ಇಡೀ ಜಿಲ್ಲೆಗೆ ಮಾದರಿಯಾಗಿರಬೇಕಿದ್ದ ತುಮಕೂರು ನಗರ ಅವ್ಯವಸ್ಥೆಯ ಆಗರವಾಗಿದ್ದು, ಸಮಸ್ಯೆಗಳನ್ನೇ ಹೊದ್ದು ಕೂತಿದೆ. ನೀರು, ಬಡಜನರ ಸೂರು, ಉದ್ಯಾನವನ, ರಸ್ತೆ ಸೇರಿದಂತೆ ಯಾವುದೊಂದು ಕೂಡ ಸರಿಯಾಗಿಲ್ಲ. ಹೇಮಾವತಿ ಕುಡಿಯುವ ನೀರಿನ ಯೋಜನೆಯ ಫಲ ನಗರದ ಎಲ್ಲ ಜನತೆಗೆ ದಕ್ಕಿಲ್ಲ. ಉಪ್ಪಾರಹಳ್ಳಿ ರೇಲ್ವೆ ಮೇಲ್ಸೇತುವೆ ಕಾಮಗಾರಿ ಅರೆ -ಬರೆಯಾಗಿದೆ. ಶೆಟ್ಟಿಹಳ್ಳಿ ಅಂಡರ್ ಪಾಸ್ ಕಾಮಗಾರಿ ಕುಂಟುತ್ತಾ ಸಾಗಿದ್ದು, ಶೆಟ್ಟಿಹಳ್ಳಿ ಮಾರ್ಗದ ಜನತೆ ಸಮಸ್ಯೆ ಎದುರಿಸುತ್ತಿದ್ದಾರೆ. ಡಾಂಬರು ರಸ್ತೆಗಳು ಗುಂಡಿಗಳಿಂದ ತುಂಬಿ ಹೋಗಿದ್ದು, ಅರೆ-ಬರೆ ಕಾಮಗಾರಿಗೆ ಖ್ಯಾತಿಯಾಗಿವೆ. ಹೊಸದಾಗಿ ರಸ್ತೆ ಮಾಡುವುದೇ ತಡ, ಯಾವುದೋ ಕಾಮಗಾರಿಯ ನೆಪಮಾಡಿ ಹೊಸ ರಸ್ತೆ ಅಗೆಯುವುದು ತುಮಕೂರಿನಲ್ಲಿ ಮಾಮೂಲಿಯಾಗಿದೆ. ಆದರೆ ಅಗೆದ ರಸ್ತೆಯನ್ನು ಮುಚ್ಚುವ ಗೋಜಿಗೆ ಇರುವುದರಿಂದ ಅಪಘಾತಗಳು ನಡೆಯುವುದು, ಜನತೆ ಸಮಸ್ಯೆ ಎದುರಿಸುವುದು ನಿರಂತರವಾಗಿದೆ. ಸೂರಿಲ್ಲದ ಬಡಜನತೆಗೆ ತುಮಕೂರಿನಲ್ಲಿ ನಿವೇಶನ, ಮನೆ ನೀಡಿ 20 ವರ್ಷಗಳೇ ಕಳೆದಿವೆ. ಆದರೆ ಈ ವರೆವಿಗೆ ಶಾಸಕರು, ಸಂಸದರು ತಲೆಕೆಡಿಸಿಕೊಂಡಿಲ್ಲ. ಸರ್ಕಾರಿ ಜಾಗಗಳು ತುಮಕೂರು ನಗರಸಭೆಯ ಸರ್ಕಾರಿ ಜಾಗಗಳು ರಾಜಾರೋಷವಾಗಿ ಒತ್ತುವರಿಯಾಗಿದ್ದರೂ, ಆಗುತ್ತಿದ್ದರೂ ಶಾಸಕರು, ಸಂಸದರು ಚಕಾರವೆತ್ತದೆ ಸುಮ್ಮನಿದ್ದಾರೆ.
ಆದರ್ಶ ಉದ್ಯಾನವನವಿಲ್ಲ
ನಗರಸಭೆ ವ್ಯಾಪ್ತಿಯಲ್ಲಿ 450 ಕ್ಕೂ ಹೆಚ್ಚು ಉದ್ಯಾನವನಗಳಿದ್ದರೂ, ಹೇಳಿಕೊಳ್ಳಲು ಒಂದು ಆದರ್ಶ ಉದ್ಯಾನವನವಿಲ್ಲ. ಎಲ್ಲ ಉದ್ಯಾನವನಗಳಲ್ಲೂ ನೀರಿನ ಟ್ಯಾಂಕ್ಗಳು ಕಡ್ಡಾಯವೇನೋ ಎಂಬಂತಿವೆ. ಡಾ. ಶಿವಕುಮಾರಸ್ವಾಮಿಗಳ ವೃತ್ತದಲ್ಲಿರುವ ಉದ್ಯಾನವನದಲ್ಲಿ ದಿನನಿತ್ಯ ಕಸ ಸುರಿದು, ಮುಚ್ಚಲಾಗುತ್ತಿದ್ದರೂ, ಶಾಸಕರು, ಸಂಸದರು ತಮಗೆ ಸಂಬಂಧವಿಲ್ಲದಂತಿದ್ದಾರೆ. ಸುಮಾರು 14 ಕೋಟಿ ರು. ಗೂ ಹೆಚ್ಚು ವೆಚ್ಚದಲ್ಲಿ ನವೀಕರಣಗೊಂಡಿರುವ, ತುಮಕೂರಿನ ಜೀವನಾಡಿಯಂತಿರಬೇಕಿದ್ದ 500 ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿರುವ ಅಮಾನಿಕೆರೆ ನೀರಿಲ್ಲದೆ ಬಣಗುಡುತ್ತಿದೆ. ಅಮಾನಿಕೆರೆ ಹೇಮಾವತಿ ನೀರನ್ನೇ ಅವಲಂಬಿಸಿದ್ದು, ಈ ವರ್ಷ ನೀರಿಲ್ಲದೆ ಬಣಗುಡುತ್ತಿದೆ. ಪರಿಣಾಮ ಅಂತರ್ಜಲ ಬತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ.
ವಿವಿಗೆ ಜಾಗವಿಲ್ಲ
ತುಮಕೂರು ವಿವಿ ಆರಂಭಗೊಂಡು ಒಂದು ದಶಕ ಕಳೆದರೂ ಇನ್ನೂ ವಿವಿಗೆ ಕಾಯಂ ಜಾಗ ಸಿಕ್ಕಿಲ್ಲ. ಜಾಗದ ಸಮಸ್ಯೆಯಿಂದಾಗಿ ವಿವಿ ನರಳುತ್ತಿದೆ. ಈ ಕುರಿತು ತುಮಕೂರು ಜಿಲ್ಲೆಯ ರಾಜಕಾರಣಿಗಳಿಗೆ ಕಿಂಚಿತ್ತೂ ಕಾಳಜಿಯಿಲ್ಲದಿರುವುದು ಕಣ್ಣಿಗೆ ರಾಚುತ್ತಿದೆ. ರಾಜಕಾರಣಿಗಳ ವೈಯಕ್ತಿಕ, ಸಂಬಂಧಿಕರ ಲೇಔಟ್ಗಳು ಸದ್ದಿಲ್ಲದೆ ಎದ್ದೇಳುತ್ತಿದ್ದರೂ, ವಿವಿ ಮಾತ್ರ ಜಾಗವಿಲ್ಲದೆ ನರಳುತ್ತಿದೆ.
ಪರಮಶಿವಯ್ಯ ವರದಿ ನೆನೆಗುದಿಗೆ
ಬಯಲು ಸೀಮೆಯ 9 ಜಿಲ್ಲೆಗಳ ಕುಡಿಯುವ ನೀರಿನ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ ಪರಮಶಿವಯ್ಯ ವರದಿ ಅಕ್ಷರಶಃ ನೆನೆಗುದಿಗೆ ಬಿದ್ದಿದೆ. ತುಮಕೂರು ಜಿಲ್ಲೆಯ ಮೂಲಕ ಹಾದು ಹೋಗಬೇಕಿರುವ ಪರಮಶಿವಯ್ಯ ವರದಿ ಜಾರಿಗೆ ಸಂಬಂಧಿಸಿದಂತ ಜಿಲ್ಲೆಯ ರಾಜಕಾರಣಿಗಳು ಪಕ್ಷಾತೀತವಾಗಿ ಹೋರಾಟ ಮಾಡಲೇ ಇಲ್ಲ.
ವಿಜ್ಞಾನಗುಡ್ಡ ಚಕಾರವಿಲ್ಲ
ತುಮಕೂರು ಹೊರವಲಯದ, ಕೇಂದ್ರೀಯ ವಿದ್ಯಾಲಯದ ಬಳಿ ಸ್ಥಾಪನೆಯಾಗಬೇಕಿದ್ದ ವಿಜ್ಞಾನಗುಡ್ಡ ಒತ್ತುವರಿ ಸಮಸ್ಯೆಯಿಂದ ಕುಂಟುತ್ತಾ ಸಾಗಿದೆ. ಈ ಕುರಿತು ಕನ್ನಡಪ್ರಭ 5 ದಿನಗಳ ಕಾಲ ವರದಿ ಪ್ರಕಟಿಸಿ ತಿಂಗಳುಗಳೇ ಕಳೆದರೂ ಒತ್ತುವರಿ ತೆರವಿನ ಕುರಿತು ಯಾವುದೇ ತೀರ್ಮಾನವಾಗಿಲ್ಲ. ಶಾಸಕರು, ಸಂಸದರ ಮೌನ ಅನುಮಾನಕ್ಕೆಡೆ ಮಾಡಿಕೊಟ್ಟಿದೆ.
ರೇಲ್ವೆ ಯೋಜನೆ
ತುಮಕೂರು ರಾಯದುರ್ಗ, ದಾವಣಗೆರೆ ಮಾರ್ಗದ ರೇಲ್ವೆ ಯೋಜನೆಗಳು ಸಹ ಕುಂಟುತ್ತಾ ಸಾಗಿವೆ.
ಕನಸಾಗಿಯೇ ಉಳಿದ ಪ್ರವಾಸೋದ್ಯಮ
ಇತಿಹಾಸ ಪ್ರಸಿದ್ಧ ತುಮಕೂರು ಜಿಲ್ಲೆ ಪ್ರವಾಸೋದ್ಯಮ ಕೇಂದ್ರವಾಗಿ ದಶಕಗಳೇ ಕಳೆಯಬೇಕಿತ್ತು. ಆದರೆ ಪ್ರತಿ ಸರ್ಕಾರ ಬಂದಾಗಲೂ ಮಧುಗಿರಿ, ತುಮಕೂರು, ಕುಣಿಗಲ್ ಸೇರಿದಂತೆ ಇತರೆ ಪ್ರೇಕ್ಷಣಿಯ ಸ್ಥಳಗಳನ್ನು ಹೊಂದಿರುವ ತಾಲೂಕುಗಳಿಗೆ ವಿಶೇಷ ಬಸ್ ಸೌಲಭ್ಯ, ಪ್ರವಾಸಿಗರಿಗೆ ಸಕಲ ಸೌಲಭ್ಯ ಕಲ್ಪಿಸುವ ಭರವಸೆ ನೀಡಲಾಗುತ್ತಿದೆ. ಆದರೆ ಈ ವರೆಗೆ ಜಾರಿಯಾಗಿಲ್ಲ.
ಪರಿಸರ ಅಧೋಗತಿಗೆ
ಅಕ್ರಮ ಗಣಿಗಾರಿಕೆಗೆ ಕುಖ್ಯಾತಿ ಪಡೆದ ಜಿಲ್ಲೆಗಳಲ್ಲಿ ತುಮಕೂರು ಸಹ ಒಂದು. ಪರಿಣಾಮ ಜಿಲ್ಲೆಯ ಪರಿಸರ ಹಾಳಾಗಿದೆ. ಇದರ ಪರಿವೆಯೇ ಇಲ್ಲದಂತೆ ರಾಜಕಾರಣಿಗಳು ವರ್ತಿಸುತ್ತಿರುವುದು ದುರಂತದ ಸಂಗತಿ. ಪ್ರತಿವರ್ಷ ಮಳೆ ಕಡಿಮೆಯಾಗುತ್ತಿದ್ದು, ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಪಾವಗಡ, ಮಧುಗಿರಿ, ಶಿರಾ, ಚಿಕ್ಕನಾಯಕನಹಳ್ಳಿಯಂತಹ ಕಡೆ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚುತ್ತಿದ್ದು, ತಾಯಿಯ ಎದೆಹಾಲು ಹಾಲಾಹಲವಾಗಿರುವುದು ಕಣ್ಣೆದುರಿಗಿದೆ.