ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ
ಪಾವಗಡ: ಮಾಜಿ ಸಚಿವ ವೆಂಕಟರಮಣಪ್ಪ, ಜಿಪಂ ಸದಸ್ಯ ಎಚ್.ವಿ.ವೆಂಕಟೇಶ್ ಹಾಗೂ ತಾ.ಕಾಂಗ್ರೆಸ್ ಅಧ್ಯಕ್ಷ ಸುದೇಶ್ಬಾಬು ನೇತೃತ್ವದಲ್ಲಿ ಬಿಜೆಪಿ ಹಿರಿಯ ಮುಖಂಡ ಜಿ.ವಿ. ವಿಜಯರಾಜ್ ಸೇರಿದಂತೆ ಅನೇಕ ಮಂದಿ ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಮಾಜಿ ಸಚಿವ ವೆಂಕಟರಮಣಪ್ಪ ಅಧ್ಯಕ್ಷತೆಯಲ್ಲಿ ತಾಲೂಕಿನ ಗುಜ್ಜನಡು ಗ್ರಾಮದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಮುಖಂಡ ಹಾಗೂ ಕಳೆದ ಪಾವಗಡ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ವರ್ಧಿಸಿ ಸೋತ ಗುಜ್ಜನಡು ಜಿ.ವಿ.ವಿಜಯರಾಜ್ ಮತ್ತು ಇತರ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಇದೇ ಸಂದರ್ಭದಲ್ಲಿ ಮಾತನಾಡಿದ ವಿಜಯರಾಜ್ ಮಾಜಿ ಸಚಿವ ವೆಂಕಟರಮಣಪ್ಪ ಮತ್ತು ಅವರ ಪುತ್ರ ಎಚ್.ವಿ.ವೆಂಕಟೇಶ್ ಜನಪರ ಆಡಳಿತಗಾರರು ಮತ್ತು ದಲಿತರ ಬಗ್ಗೆ ಕಾಳಜಿಯುಳ್ಳವರು. ಅಭಿವೃದ್ಧಿ ಚಿಂತಕರು ಎಂದು ಬಣ್ಣಿಸಿ ವೆಂಕಟರಮಣಪ್ಪ ಶಾಸಕರಾಗಿದ್ದ ಸಂದರ್ಭದಲ್ಲಿ ತಾಲೂಕಿನ ಅಭಿವೃದ್ಧಿಗೆ ಸುಮಾರು 700ಕೋಟಿ ಅನುದಾನ ವಿನಿಯೋಗಿಸಿರುವುದಾಗಿ ತಿಳಿಸಿ ತಾ.ಪ್ರಗತಿಗಾಗಿ ವೆಂಕಟರಮಣಪ್ಪ ಅವರಂತಹ ನಾಯಕರ ಅವಶ್ಯಕತೆ ಇದೆ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗಿರುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ವಿ.ಎನ್ ಗೋಪಾಲರೆಡ್ಡಿ, ಎಲ್. ಜಗನ್ನಾಥ್, ಡಿ. ಮಜುನಾಥ್, ಜಿ.ಎಚ್ ವೆಂಕಟೇಶ್, ಸಿ.ಬಿ. ಶ್ರೀರಾಮ್, ಮರಿದಾಸನಹಳ್ಳಿ ಹನುಮಂತರಾಯಪ್ಪ, ದವಡಬೆಟ್ಟ ಮಧುಇದ್ದರು.
'ಮೋದಿಯಿಂದ ದೇಶದ ಉಳಿವು'
ಕಿಬ್ಬನಹಳ್ಳಿ: ರಾಷ್ಟ್ರವನ್ನು ಜಾತಿ ಆಧಾರದ ಮೇಲೆ ಹರಿದು ಹಂಚುವ ಕಾರ್ಯದಲ್ಲಿ ನಿರತವಾಗಿರುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಟ್ಟರೆ ಮಾತ್ರ ದೇಶದ ಭವಿಷ್ಯ ಉಳಿಯಬಲ್ಲದು ಎಂದು ತಿಪಟೂರಿನ ಮಾಜಿ ಶಾಸಕ ಬಿ.ಸಿ.ನಾಗೇಶ್ ನುಡಿದರು. ಅವರು ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್ಬಳಿ ಮನೆ ಮನೆ ಪ್ರಚಾರಕಾರ್ಯದಲ್ಲಿ ಮಾತನಾಡುತ್ತಿದ್ದರು. ದೇಶದ ಇತಿಹಾಸದಲ್ಲಿ ಒಂದು ಜಾತಿಯನ್ನು ಓಲೈಸಿಕೊಂಡು ಆಡಳಿತ ನಡೆಸುವ ಪಕ್ಷದಿಂದ ರಾಷ್ಟ್ರದ ಹಿತರಕ್ಷಣೆ ಸಾಧ್ಯವಿಲ್ಲ. ಆದ್ದರಿಂದ ಜಾತಿ ಜಾತಿಯ ನಡುವೆ ಕಂದಕ ನಿರ್ಮಿಸುವ ಹೀನ ಪ್ರವೃತ್ತಿಯನ್ನು ಕೊನೆಗಾಣಿಸಬೇಕಾಗಿದೆ. ಆದ್ದರಿಂದ ನರೇಂದ್ರ ಮೋದಿಯಂತಹ ಸಮರ್ಥ ನಾಯಕತ್ವವಿರುವ ಬಿಜೆಪಿಗೆ ಮತಹಾಕಬೇಕೆಂದರು.
ಇಂದು ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ
ಶೆಟ್ಟಿಹಳ್ಳಿ (ತುಮಕೂರು ತಾ.): ಏಪ್ರಿಲ್ 15ರಂದು ಮಂಗಳವಾರ ಮಧ್ಯಾಹ್ನ 12.55ರಿಂದ 1.20 ಗಂಟೆಗೆ ಸಲ್ಲುವ ಅಭಿಜಿನ್ ಲಗ್ನದಲ್ಲಿ ತುಮಕೂರು ತಾಲ್ಲೂಕು ಶೆಟ್ಟಿಹಳ್ಳಿಯ ಶ್ರೀ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ಸರ್ಕಾರದ ವತಿಯಿಂದ ಮತ್ತು ಗ್ರಾಮಸ್ಥರ ವತಿಯಿಂದ ನಡೆಯಲಿದೆ. ರಥೋತ್ಸವ ದಿನದಂದು ದೇವರಿಗೆ ಅಭಿಷೇಕ ಮತ್ತು ಬೆಳಿಗ್ಗೆ 7 ಗಂಟೆಗೆ. ಏಪ್ರಿಲ್ 15ರಂದು ರಾತ್ರಿ ಪಲ್ಲಕ್ಕಿ ಉತ್ಸವ ಇರುವುದಿಲ್ಲ.
ಪಾದಯಾತ್ರೆ ಮೂಲಕ ಮತ ಬೇಟೆ
ತಿಪಟೂರು: ಪಟ್ಟಣದ ಗಾಂಧಿನಗರ ಸೇರಿದಂತೆ ಮತ್ತಿತರ ಬಡಾವಣೆಗಳಲ್ಲಿ ಶಾಸಕ ಕೆ.ಷಡಕ್ಷರಿ ನೇತೃತ್ವದ ಕಾರ್ಯಕರ್ತರು ಪಾದಯಾತ್ರೆಯ ಮೂಲಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಸ್.ಪಿ. ಮುದ್ದಹನುಮೇಗೌಡರ ಪರ ಮತ ಯಾಚಿಸಿದರು. ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ಸಿ.ಬಿ.ಶಿಶಧರ್, ನಗರಸಭೆ ಸದಸ್ಯರಾದ ಅಮಾನುಲ್ಲಾಖಾನ್,ಅಬ್ದುಲ್ ಖಾದರ್, ಜಹಿರಾ ಜುಬೇರ್, ರೋಷನ್ ಖಾನ್ ಮತ್ತಿತರರಿದ್ದರು.