ಲೋಕ ಚುನಾವಣೆಗೆ ಜಿಲ್ಲಾಡಳಿತ ಸಜ್ಜು
ಜಿಲ್ಲಾಧಿಕಾರಿ, ಚುನಾವಣಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಘೋಷಣೆ, ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟುನಿಟ್ಟಿನ ಭದ್ರತೆ, ಧೈರ್ಯದಿಂದ ಮತ ನೀಡಲು ಮತದಾರರಿಗೆ ಮನವಿ
ಕನ್ನಡಪ್ರಭ ವಾರ್ತೆ, ತುಮಕೂರು, ಏ.15
ತುಮಕೂರು ಜಿಲ್ಲಾಡಳಿತ ಲೋಕಸಭಾ ಚುನಾವಣೆಗೆ ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಯೂ ಆಗಿರುವ ಕೆ.ಎಸ್. ಸತ್ಯಮೂರ್ತಿ ತಿಳಿಸಿದರು. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಾಟಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 20,94,812 ಮತದಾರರಿದ್ದು, ಅವರಲ್ಲಿ 10,57,426 ಮಂದಿ ಪುರುಷ ಮತದಾರರು, 10,37,235 ಮಂದಿ ಮಹಿಳಾ ಮತದಾರರಿದ್ದು, 151 ಮಂದಿ ಇತರೆ ಮತದಾರರಿದ್ದಾರೆ.
ಇದರಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 8 ತಾಲೂಕುಗಳಲ್ಲಿ ಒಟ್ಟು 15,181,44 ಮಂದಿ ಮತದಾರರಿದ್ದು, ಇವರಲ್ಲಿ 7,63,260 ಮಂದಿ ಪುರುಷ ಮತದಾರರು, 753,766 ಮಹಿಳಾ ಮತದಾರರು, 118 ಮಂದಿ ಇತರೆ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.
ತುಮಕೂರು ಲೋಕಸಭಾ ಕ್ಷೇತ್ರದ ತಾಲೂಕುವಾರು ಮತದಾರರ ವಿವರ ಇಂತಿದೆ. ಚಿಕ್ಕನಾಯಕನಹಳ್ಳಿ 1,01,924 ಮಂದಿ ಪುರುಷರು, 1,00,290 ಮಹಿಳೆಯರು, ಇತರರು 2 ಒಟ್ಟು 2,02216. ತಿಪಟೂರು 87,010 ಪುರುಷರು, 89,377 ಮಹಿಳೆಯರು, ಇತರರು 23, ಒಟ್ಟು 1,76,410. ತುರುವೇಕೆರೆ 89,371 ಪುರುಷರು, 89,891 ಮಹಿಳೆಯರು ಇತರರು 4, ಒಟ್ಟು 1,79266. ತುಮಕೂರು ನಗರ 1,16400 ಪುರುಷರು, 1,15,699 ಮಹಿಳೆಯರು, 33 ಇತರರು. ಒಟ್ಟು 2,32,132. ತುಮಕೂರು ಗ್ರಾಮಾಂತರ 92,702 ಪುರುಷರು, 89,959 ಮಹಿಳೆಯರು, ಇತರರು 12, ಒಟ್ಟು 1,82,472. ಕೊರಟಗೆರೆ 95,695 ಪುರುಷರು, 92,702 ಮಹಿಳೆಯರು, 21 ಇತರರು, ಒಟ್ಟು 1,88,418. ಗುಬ್ಬಿ 87,382 ಪುರುಷರು, 85,092 ಮಹಿಳೆಯರು, ಇತರರು 19. ಒಟ್ಟು 1,72,493. ಮಧುಗಿರಿ 93,977 ಪುರುಷರು, 90,756 ಮಹಿಳೆಯರು 4 ಇತರರು, ಒಟ್ಟು 1,84,737.
ಗುಬ್ಬಿಯಲ್ಲಿ ಕಡಿಮೆ, ತುಮಕೂರಿನಲ್ಲಿ ಹೆಚ್ಚು: ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ, ಗುಬ್ಬಿ ವಿಧಾನ ಸಭಾ ಕ್ಷೇತ್ರದಲ್ಲಿ ಕಡಿಮೆ ಅಂದರೆ 1,72,493 ಮತದಾರರಿದ್ದರೆ, ಜಿಲ್ಲೆಯ ಅತಿದೊಡ್ಡ ಮತದಾರರ ಸಂಖ್ಯೆಯಿರುವುದು ತುಮಕೂರು ನಗರದಲ್ಲಿ. ಇಲ್ಲಿ 2,32,132 ಮಂದಿ ಮತದಾರರಿದ್ದಾರೆ. ಒಟ್ಟಾರೆ ಕ್ಷೇತ್ರದ ಸರಾಸರಿ ಮತದಾರರ ಸಂಖ್ಯೆ 1,89,768.
ಪಾವಗಡ, ಶಿರಾ, ಕುಣಿಗಲ್: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ಸಿರಾದಲ್ಲಿ 1,057,47 ಪುರುಷರು, 1,02017 ಮಂದಿ ಮಹಿಳಾ ಮತದಾರರಿದ್ದಾರೆ. 14 ಮಂದಿ ಇತರ ಮತದಾರರಿದ್ದು ಒಟ್ಟು 2,07778 ಮತದಾರರಿದ್ದಾರೆ.
ಇದೇ ಚಿತ್ರದುರ್ಗ ಕ್ಷೇತ್ರಕ್ಕೊಳಪಡುವ ಜಿಲ್ಲೆಯ ಮತ್ತೊಂದು ವಿಧಾನಸಭಾ ಕ್ಷೇತ್ರ ಪಾವಗಡದಲ್ಲಿ 97,875 ಮಂದಿ ಪುರುಷ ಮತದಾರರಿದ್ದು, 93,778 ಮಹಿಳಾ ಮತದಾರರಿದ್ದು, 3 ಮಂದಿ ಇತರ ಮತದಾರರಿದ್ದು, ಒಟ್ಟು 1,91,656 ಮಂದಿ ಮತದಾರರಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸೇರುವ
ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ 89,544 ಪುರುಷರು, 87,674 ಮಂದಿ ಮಹಿಳಾ ಮತದಾರರಿದ್ದು, 16 ಮಂದಿ ಇತರರು, ಒಟ್ಟು 1,77,234 ಮತದಾರರಿದ್ದಾರೆ.
ಮತದಾನ ಕೇಂದ್ರಗಳ ವಿವರ: ತುಮಕೂರು ಜಿಲ್ಲೆಯಲ್ಲಿ ಒಟ್ಟು 2599 ಮತದಾನ ಕೇಂದ್ರಗಳಿವೆ. ವಿವರ ಇಂತಿದೆ. ಚಿಕ್ಕನಾಯಕನಹಳ್ಳಿಯಲ್ಲಿ 258, ತಿಪಟೂರಿನಲ್ಲಿ 225, ತುರುವೇಕೆರೆಯಲ್ಲಿ 228, ಕುಣಿಗಲ್ ನಲ್ಲಿ 263, ತುಮಕೂರು ನಗರದಲ್ಲಿ 222, ತುಮಕೂರು ಗ್ರಾಮಾಂತರದಲ್ಲಿ 204, ಕೊರಟಗೆರೆಯಲ್ಲಿ 236, ಗುಬ್ಬಿಯಲ್ಲಿ 211, ಸಿರಾದಲ್ಲಿ 264, ಪಾವಗಡದಲ್ಲಿ 246, ಮಧುಗಿರಿಯಲ್ಲಿ 242.
ಮತಗಟ್ಟೆ ಸಿಬ್ಬಂದಿ ನೇಮಕಾತಿ ವಿವರ: ಪ್ರತಿ ಮತಗಟ್ಟೆಗೆ ಒಬ್ಬ ಪಿಆರ್ಓ, ಎಪಿಆರ್ಓ, ಮತ್ತು ಇಬ್ಬರು ಮತಗಟ್ಟೆ ಸಿಬ್ಬಂದಿಯಂತೆ ಒಟ್ಟು 10,396 ಮತ್ತು ಮೀಸಲು ಸಿಬ್ಬಂದಿ ಸೇರಿ 11,556 ಮತಗಟ್ಟೆ ಸಿಬ್ಬಂದಿಯನ್ನು ನೇಮಿಸಲಾಗಿದೆ.
ವಾಹನಗಳ ನಿಯೋಜನೆ: ಈ ಬಾರಿಯ ಲೋಕಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಒಟ್ಟು 372 ಬಸ್ಗಳು, 104 ಮ್ಯಾಕ್ಸಿಕ್ಯಾಬ್, 342 ಜೀಪುಗಳನ್ನು ಬಳಸಲಾಗುವುದು.
ಮೈಕ್ರೋ ಅಬ್ಸರ್ವರ್ಸ್ಗಳ ನೇಮಕಾತಿ: ತುಮಕೂರು ಜಿಲ್ಲೆಯಲ್ಲಿನ ಆಯ್ದ ಮತಗಟ್ಟೆಗಳಿಗೆ 869 ಮತ್ತು ಮೀಸಲು ಒಟ್ಟು ಸೇರಿ 103 ಮೈಕ್ರೋ ಅಬ್ಸರ್ವರ್ಗಳನ್ನು ನೇಮಕಾತಿ ಮಾಡಲಾಗಿದೆ. ಇವರು ಏ.17 ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ ಬಗ್ಗೆ ತೀವ್ರ ನಿಗಾವಹಿಸಲಿದ್ದಾರೆ.
ವಿಡಿಯೋ ಕ್ಯಾಮೆರಾಗಳ ಅಳವಡಿಕೆ: ಚುನಾವಣೆಯಲ್ಲಿ ಒಟ್ಟು 390 ವಿಡಿಯೋ ಕ್ಯಾಮೆರಾಗಳನ್ನು ಉಪಯೋಗಿಸಲು ಕ್ರಮ ವಹಿಸಲಾಗಿದೆ. 17 ರಂದು ನಡೆಯಲಿರುವ ಚುನಾವಣೆಯಲ್ಲಿ ಆಯ್ದ ಮತಗಟ್ಟೆಗಳಲ್ಲಿ ನಡೆಯಲಿರುವ ಎಲ್ಲ ಘಟನೆಗಳ ಬಗ್ಗೆ ವಿಡಿಯೋ ಚಿತ್ರೀಕರಣ ಮಾಡಲಾಗುವುದು. 65 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಮತದಾನದ ಸಮಯ: ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಏ. 17 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. 6 ಗಂಟೆ ಸಮಯದಲ್ಲಿ ಮತದಾನ ಮಾಡಲು ಮತದಾನ ಕೇಂದ್ರದ ಬಳಿ ಕ್ಯೂ ನಿಂತಿರುವ ಎಲ್ಲ ಮತದಾರರಿಗೆ ಟೋಕನ್ ನೀಡಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಮಾಹಿತಿ ನೀಡಿದರು.
1950 ಟೋಲ್ ಪ್ರೀ: ಚುನಾವಣಾ ಆಯೋಗ 1950 ಎಂಬ ಸಂಖ್ಯೆಯನ್ನು ಟೋಲ್ ಪ್ರೀ ದೂರವಾಣಿ ಸೌಲಭ್ಯವನ್ನು ಒದಗಿಸಿದ್ದು, ಈ ಮೂಲಕವೂ ಅಗತ್ಯ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಎಂಸಿಸಿ ಉಲ್ಲಂಘನೆ ಪ್ರಕರಣಗಳು
ತುಮಕೂರು: ತುಮಕೂರು ಜಿಲ್ಲೆಯಲ್ಲಿ ಇದುವರೆಗೆ 739 ಪ್ರಕರಣಗಳಲ್ಲಿ ರೈಡ್ ಮಾಡಲಾಗಿದೆ. 31 ಮಂದಿಯನ್ನು ಬಂಧಿಸಲಾಗಿದೆ. 466.046 ಲೀ ಐಎಂಎಲ್ ವಶವಡಿಸಿಕೊಂಡಿದ್ದು, ಇದರ ಮೌಲ್ಯ 1,21,792 ರು. ಆಗಿದೆ. 22.730 ಲೀಟರ್ ಬಿಯರ್ ವಶಪಡಿಸಿಕೊಂಡಿದ್ದು, ಇದರ ಮೌಲ್ಯ 3,226 ರು. ಆಗಿದೆ. 18,500 ರು. ಮೌಲ್ಯದ 1850 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. 6 ವಾಹನಗಳನ್ನು ವಶಪಡಿಸಿಕೊಂಡಿದ್ದು, ಇದರ ಮೌಲ್ಯ 16,35,500 ರು ಆಗಿದೆ. ಚೆಕ್ ಪೋಸ್ಟ್ಗಳಲ್ಲಿ 24,81,490 ರು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ತುಮಕೂರು ಜಿಲ್ಲೆಯಲ್ಲಿ ಎಂಸಿಸಿ ಉಲ್ಲಂಘನೆ ಪ್ರಕರಣಗಳಿಂದ 42,60,548 ರು. ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕೆ.ಎಸ್ ಸತ್ಯಮೂರ್ತಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ, ಎಸ್ಪಿ ರಮಣಗುಪ್ತ, ಚುನಾವಣೆಗೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.
ಇತರೆ ಗುರುತಿನ ಚೀಟಿ
ಭಾರತ ಚುನಾವಣಾ ಆಯೋಗದ ಆದೇಶದಂತೆ 2-4-2014 ರಂತೆ ಕೆಳಕಂಡ 11 ದಾಖಲೆಗಳನ್ನು ಎಪಿಕ್ ಕಾರ್ಡ್ಗೆ ಪರ್ಯಾಯವಾಗಿ ಮತದಾರರ ಗುರುತಿನ ಬಗ್ಗೆ ಉಪಯೋಗಿಸಲು ಮಾನ್ಯತೆ ನೀಡಿದೆ. ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್ ಪಾಸ್ ಬುಕ್, ಪಾನ್ ಕಾರ್ಡ್, ಆಧಾರ್ ಕಾರ್ಡ್, ಸ್ಮಾರ್ಟ್ ಕಾರ್ಡ್, ಗ್ರಾಮೀಣ ಉದ್ಯೋಗ ಖಾತ್ರಿ ಕಾರ್ಡ್, ಪಿಂಚಣಿ ಪತ್ರ.
ಮಾದರಿ ಮತಗಟ್ಟೆಗಳ ಸ್ಥಾಪನೆ
ಪ್ರತಿ ವಿಧಾನಸಭಾ ಕ್ಷೇತ್ರದ ನಗರ ವ್ಯಾಪ್ತಿಯಲ್ಲಿ ತಲಾ ಒಂದರಂತೆ ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ವೈದ್ಯಕೀಯ ಕಿಟ್, ಸ್ವಯಂ ಸೇವಕರು, ಮತದಾನ ಮಾಡಲು ಬರುವ ಮತದಾರರಿಗೆ ನೆರಳಿನ ವ್ಯವಸ್ಥೆ, ಬ್ಯಾಂಕಿಂಗ್ ರೀತಿಯಲ್ಲಿ ಟೋಕನ್ ಸೌಲಭ್ಯ ರೀತಿ ಮತದಾನಕ್ಕೆ ಅವಕಾಶ, ಮತದಾರರ ಫೋಟೋ ತೆಗೆದು ವೆಬ್ನಲ್ಲಿ ಅಪ್ ಲೋಡ್ ಮಾಡುವುದು ಮತ್ತು ಮತದಾನ ಮಾಡಿದ ಮತದಾರರಿಗೆ ವಂದನೆ ಸಲ್ಲಿಸುವ ಸ್ಲಿಪ್ ಹಂಚಿಕೆ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಒಣದಿನ ಘೋಷಣೆ: ಏ. 15 ರಿಂದ 17 ರ ಸಂಜೆ 6 ಗಂಟೆಯವರೆಗೆ ಮದ್ಯಪಾನ ನಿಷೇಧದ ಸಂಬಂಧ ಒಣದಿನ (ಡ್ರೈ ಡೇ) ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮತದಾರರಿಗೆ ಆಮಿಷ, ಶಿಕ್ಷೆ: ಐಪಿಸಿ ಸೆಕ್ಷನ್ 171 ರ ಬಿ ಪ್ರಕಾರ ಮತದಾರರಿಗೆ ಆಮಿಷ ಒಡ್ಡುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ಇದಕ್ಕಾಗಿ ಐಪಿಸಿ ಸೆಕ್ಷನ್ 171 ಇ ಪ್ರಕಾರ ಒಂದು ವರ್ಷ ಜೈಲು, ದಂಡ ವಿಧಿಸಬಹುದಾಗಿದೆ. ಐಪಿಸಿ ಸೆಕ್ಷನ್ 171 ಎಫ್ ಪ್ರಕಾರ ಮತದಾರರ ಮೇಲೆ ಪ್ರಭಾವ ಬೀರುವಂತಹುದು ಕಾನೂನು ಬಾಹಿರವಾಗಿದೆ. ಇದಕ್ಕಾಗಿ 171 ಎಫ್ ಪ್ರಕಾರ ಒಂದು ವರ್ಷದ ಜೈಲು ಅಥವಾ ದಂಡ ಎರಡನ್ನು ವಿಧಿಸಬಹುದಾಗಿದೆ. ಸೆಕ್ಷನ್ 171 ಹೆಚ್ ಪ್ರಕಾರ, ಸಾರ್ವಜನಿಕ ಸಭೆಗಳು ಪ್ರಕಟಣೆ, ಜಾಹಿರಾತುಗಳು, ಇನ್ನಿತರ ಯಾವುದೇ ರೀತಿಯ ಚುನಾವಣಾ ಸಂಬಂಧ ವೆಚ್ಚಗಳಿಗೆ ಅಭ್ಯರ್ಥಿಯ ಲಿಖಿತ ಅನುಮತಿ ಇಲ್ಲಗದೆ ವೆಚ್ಚ ಮಾಡುವುದು ಅಕ್ರಮವಾಗಿದೆ.
ಬಹಿರಂಗ ಪ್ರಚಾರ ಅಂತ್ಯ
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಏ. 15 ರಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ, ಸಭೆಗಳನ್ನು ಅಂತ್ಯಗೊಳಿಸಬೇಕು. ಆದರೆ ಮನೆ-ಮನೆಗೆ ತೆರಳಿ ಮತಯಾಚಿಸಬಹುದಾಗಿದೆ. ಆದರೆ ಮತದಾರರಿಗೆ ಯಾವುದೇ ರೀತಿಯ ಆಮಿಷ ಒಡ್ಡುವಂತಹ ಕಾರ್ಯಗಳನ್ನು, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವಂತಿಲ್ಲ, ಬಹಿರಂಗ ಪ್ರಚಾರ ಮುಕ್ತಾಯವಾದ ನಂತರ ಯಾವುದೇ ಕಾರಣಕ್ಕೂ ಈ ಕ್ಷೇತ್ರ ವ್ಯಾಪ್ತಿಯ ಮತದಾರರನ್ನು ಹೊರತುಪಡಿಸಿ, ಹೊರಗಿನ ವ್ಯಕ್ತಿಗಳು ಏ.15 ರಂದು ಸಂಜೆ 6 ಗಂಟೆಯೊಳಗೆ ವಿಧಾನಸಭಾ ಕ್ಷೇತ್ರಗಳಿಂದ ಹೊರ ಹೋಗಬೇಕು. ಈ ಕುರಿತು ಈಗಾಗಲೇ ಪ್ರಕಟಣೆ ಹೊರಡಿಸಲಾಗಿದ್ದು, ಅದರಂತೆ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.