ಹತಾಶ ಮನೋಭಾವದ ಪ್ರತೀಕ
ಕುಣಿಗಲ್: ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ರೋಡ್ ಶೋ ಮೇಲೆ ಕಲ್ಲು ತೂರಾಟ ಪ್ರಕರಣ ನಿಜವಾಗಿಯೂ ವಿರೋಧ ಪಕ್ಷಗಳ ಕಾರ್ಯಕರ್ತರ ಹತಾಶೆ ಮನೋಭಾವ ತೋರಿಸುತ್ತಿದ್ದು, ಚುನಾವಣೆಯಲ್ಲಿ ಇಂತಹ ಘಟನೆಗಳಿಗೆ ಯಾವುದೇ ಪಕ್ಷದ ಮುಖಂಡರು ಕುಮ್ಮಕ್ಕು ನೀಡುವುದು ಆರೋಗ್ಯಕರ ಬೆಳವಣಿಗೆ ಅಲ್ಲ ಎಂದು ಬಿಜೆಪಿ ಮುಖಂಡ, ವಿಧಾನಪರಿಷತ್ ಮುಖ್ಯಸಚೇತಕ ಶಿವಯೋಗಿ ಸ್ವಾಮಿ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಚುನಾವಣೆಗಳಲ್ಲಿ ಯಾವುದೇ ಪಕ್ಷದ ಮುಖಂಡರಿರಲಿ, ಕಾರ್ಯಕರ್ತರಿರಲಿ ಪಕ್ಷದ ತತ್ವ, ಸಿದ್ಧಾಂತ ಆಧಾರದ ಹಿನ್ನೆಲೆಯಲ್ಲಿ ಮತಯಾಚನೆ ಮಾಡಬೇಕು, ಮತದಾರ ಪ್ರಭು ತನಗೆ ಸರಿ ಅನಿಸಿದ ಪಕ್ಷಕ್ಕೆ ಮತ ಹಾಕುತ್ತಾನೆ. ಆದರೆ ಕಲ್ಲು ತೂರಾಟದಂತಹ ಪ್ರಕರಣಗಳು ಮುಕ್ತ ಹಾಗೂ ಪಾರದರ್ಶಕ ಚುನಾವಣೆ ಮತ್ತು ಮತದಾನ ಪ್ರಕ್ರಿಯೆಗೆ ಮಾರಕವಾಗಿದೆ. ಅಲ್ಲದೆ ರಾಜಕೀಯ ವ್ಯವಸ್ಥೆಯ ಬಗ್ಗೆ ಮತದಾರರು ವಿಮುಖರಾಗುವಂತಾಗುತ್ತದೆ. ಇಂತಹ ಘಟನೆಗಳಿಗೆ ಯಾರೂ ಕುಮ್ಮಕ್ಕು ನೀಡಲೂ ಬಾರದು,
ತಾಲೂಕು ಆಡಳಿತ ಕೂಡಲೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಯನ್ನು ಜಾತಿ ಆಧಾರದ ಮೇಲೆ ವಿಂಗಡಿಸುವಂತೆ ಕೃತ್ಯದಲ್ಲಿ ತೊಡಗಿದೆ.ಇದು ಮುಂದಿನ ದಿನಗಳಲ್ಲಿ ಮಾರಕವಾಗಲಿದೆ, ಕೇವಲ ಚುನಾವಣೆ ಲಾಭಕ್ಕಾಗಿ ಜವಾಬ್ದಾರಿ ಸ್ಥಾನದಲ್ಲಿರುವವವರು ಇಂತಹ ಕೃತ್ಯಕ್ಕೆ ಇಳಿಯುವುದು ನಿಜಕ್ಕೂ ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕವಾಗಿದೆ. ರಾಜ್ಯದ ಮತದಾರರು ಪ್ರಜ್ಞಾವಂತರಾಗಿದ್ದು ಕೇವಲ ಮತ ಸ್ವಾರ್ಥಕ್ಕಾಗಿ, ಅಧಿಕಾರ ಸ್ವಾರ್ಥಕ್ಕಾಗಿ ಸಮಾಜ ಒಡೆಯುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ತಕ್ಕಪಾಠ ಕಲಿಸಲು ಮತ್ತು ಸಮೃದ್ಧ, ಸ್ವಾಭಿಮಾನ ಭಾರತ ನಿರ್ಮಾಣಕ್ಕೆ ಬದ್ಧವಾಗಿರುವ ಬಿಜೆಪಿ ಬೆಂಬಲಿಸಲಿದ್ದಾರೆಂದರು.
ಮುಖಂಡರಾದ ರೇಣುಕಪ್ಪ, ತಿಮ್ಮಪ್ಪ,ಗೌರಮ್ಮ, ಪದ್ಮ ಇತರರು ಉಪಸ್ಥಿತರಿದ್ದರು.