ಜಿಲ್ಲಾಧಿಕಾರಿ ಜೊತೆ ಅನುಚಿತ ವರ್ತನೆ: ವ್ಯಕ್ತಿ ಬಂಧನ
ಪಾವಗಡ: ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಅನುಚಿತ ವರ್ತನೆ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಿದ ಘಟನೆ ಪಾವಗಡ ಪೊಲೀಸ್ ಠಾಣೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಅನುಚಿತ ವರ್ತನೆ ಹಿನ್ನೆಲೆಯಲ್ಲಿ ಬಂಧಿತ ವ್ಯಕ್ತಿ ಕಡಮಲಕುಂಟೆ ಯುವ ಮುಖಂಡ ಧರ್ಮಪಾಲ್ ಯಾದವ್ ಎಂಬುವರು. ತಾ.ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚೌದರಿ ಎಂಬುವವರು ಸ್ಥಳೀಯ ಚುನಾವಣಾ ಅಧಿಕಾರಿಗಳಾಗಿ ನಿಯೋಜಿತರಾಗಿದ್ದು ಮಂಗಳವಾರ ರಾತ್ರಿ ಪಟ್ಟಣದ ಹೊರವಲಯದ ರೊಪ್ಪ ಗ್ರಾಮದಲ್ಲಿ ಸಮೀಕ್ಷೆ ಕಾರ್ಯದಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಕಡಮಲಕುಂಟೆ ಗ್ರಾಮದ ವಾಸಿ ಧರ್ಮಪಾಲ್ ಯಾದವ್ ಅಧಿಕಾರಿಯೊಂದಿಗೆ ತಗಾದೆ ತೆಗೆದು ನೀವು ಜೆಡಿಎಸ್ ಪರ ಕೆಲಸ ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಮಾಜಾಯಿಶಿ ನೀಡಿದ ತಹಸೀಲ್ದಾರ್ ಪಕ್ಷದ ಪರ ಕೆಲಸ ಮಾಡಿರುವ ಬಗ್ಗೆ ದಾಖಲೆ ಇದ್ದರೆ ತಲುಪಿಸಿ ಎಂದರು. ಪರಿಶೀಲಿಸಿ ಕ್ರಮ ಜರಗಿಸುವುದಾಗಿ ಜಲ್ಲಾಧಿಕಾರಿಗಳು ತಿಳಿಸಿದರೂ ಬಿಡದ ಯಾದವ್ ಜಿಲ್ಲಾಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿ ಅವರ ವಿರುದ್ಧ ಏಕ ವಚನ ಪದ ಪ್ರಯೋಗ ಮಾಡಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕ್ರಮಕ್ಕೆ ಪಾವಗಡ ವೃತ್ತ ಸಿಪಿಐ ಭಾನುಪ್ರಕಾಶ್ ಅವರಿಗೆ ಡಿಸಿ ಆದೇಶಿಸಿದರು.