ದೇವೇಗೌಡರು ಮತ್ತೆ ಧೂಳಿನಿಂದ ಎದ್ದು ಬರ್ತಾರೆ
ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಿಶ್ವಾಸ
ತುರುವೇಕೆರೆ: ಸಿದ್ದರಾಮಯ್ಯನವರೇ ದೇವೇಗೌಡರನ್ನು ಹಾಗೂ ಜೆಡಿಎಸ್ ಅನ್ನು ಮುಗಿಸಿ ಬಿಡ್ತೀನಿ ಅಂತ ಡ್ಯಾನ್ಸ್ ಮಾಡ್ಕಂಡ್ ಹೇಳ್ತೀರಲ್ಲ, ನೋಡಿ ನಿಮ್ಮನ್ನು ಬೆಳೆಸಿದ ದೇವೇಗೌಡರು ಮತ್ತೆ ಧೂಳಿನಿಂದಲೇ ಎದ್ದು ಬರ್ತಾರೆ. ಜನರು ಆಶೀರ್ವಾದ ಮಾಡಿದರೆ ಪುನಃ ಈ ರಾಷ್ಟ್ರದ ಪ್ರಧಾನ ಮಂತ್ರಿಯೂ ಆಗ್ತಾರೆ...
ಹೀಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸವಾಲು ಎಸೆದವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. ಪಟ್ಟಣದ ಗುರುಭವನ ಆವರಣದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಸಿದ್ದರಾಮಯ್ಯನವರೇ ನಿಮ್ಮನ್ನು ಮುಖ್ಯಮಂತ್ರಿ ಮಾಡುವ ಮಟ್ಟಕ್ಕೆ ಬೆಳೆಸಿದ್ದು ಈ ದೇವೇಗೌಡರಲ್ಲವೇ. ಇಷ್ಟು ಎತ್ತರಕ್ಕೆ ಬೆಳೆಸಿದ ದೇವೇಗೌಡರ ಬಗ್ಗೆ ಬಹಳ ಲಘುವಾಗಿ ಮಾತನಾಡುತ್ತೀರಲ್ಲ, ಇದು ಸರಿಯೇ, ಮುಖ್ಯಮಂತ್ರಿ ಪದವಿ ಎಂದೂ ಶಾಶ್ವತವಲ್ಲ. ನಾಲಿಗೆ ಇದೆ ಎಂದು ಬಾಯಿಗೆ ಬಂದಂತೆ ಮಾತನಾಡಬೇಡಿ. ದುರಹಂಕಾರ ಒಳ್ಳೆಯದಲ್ಲ. ನಾವು ಹುದ್ದೆಯಲ್ಲಿ ಇದ್ದಾಗ ಮಾಡಿದ ಸಾಧನೆ ಏನು ಎಂಬುದನ್ನು ಮನದಟ್ಟು ಮಾಡಿಕೊಳ್ಳಿ ಎಂದು ಸಿದ್ದರಾಮಯ್ಯನವರಿಗೆ ಸಲಹೆ ನೀಡಿದರು.
ಏಕೆ ಕ್ರಮ ಕೈಗೊಂಡಿಲ್ಲ: ಅಕ್ರಮ ಗಣಿಗಾರಿಕೆ ತಡೆ ಮಾಡಬೇಕು ಎಂದು ಪಾದಯಾತ್ರೆ ಮಾಡಿದ ಸಿದ್ದರಾಮಯ್ಯನವರೇ ನಿಮ್ಮ ಆಡಳಿತದಲ್ಲಿ ಅಕ್ರಮ ಗಣಿಗಾರಿಗೆ ನಡೆಯುತ್ತಿಲ್ಲವೇ, ಏಕೆ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಮತ್ತೆ ದೇವೇಗೌಡರು ಪ್ರಧಾನಿ: ರಾಜ್ಯದಲ್ಲಿ ಕನಿಷ್ಠ 13 ಸ್ಥಾನಗಳು ಸಿಕ್ಕಲ್ಲಿ ಪುನಃ ದೇವೇಗೌಡರು ಪ್ರಧಾನಿ ಆಗುವರು ಎಂದು ಕುಮಾರಣ್ಣ ಭವಿಷ್ಯ ನುಡಿದರು. ಜಿಲ್ಲೆಯ ಸಂಸದ ಸ್ಥಾನಕ್ಕೆ ಸ್ಪರ್ಧಿಸಿರುವ ಎ.ಕೃಷ್ಣಪ್ಪ ನವರ ಗೆಲವಿನೊಂದಿಗೆ ದೇವೇಗೌಡರ ಏಳ್ಗೆಯೂ ಇದೆ ಎಂದು ಈ ಕ್ಷೇತ್ರದ ಜನರು ಮರೆಯಬಾರದು ಎಂದರು. ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಸಿದ್ದರಾಮಯ್ಯನವರ ಬಣ ಹಗಲಿರುಳೂ ಶ್ರಮಿಸುತ್ತಿದೆ. ನಮ್ಮಲ್ಲಿ ಹಣದ ಕೊರತೆ ಇದೆ. ದೇವೇಗೌಡರು ಹಾಗೂ ತಾವು ಸ್ಪರ್ಧಿಸಿರುವ ಕ್ಷೇತ್ರಗಳಿಗೆ ಕಾಂಗ್ರೆಸ್ ಹಣದ ಹೊಳೆಯನ್ನೇ ಹರಿಸುತ್ತಿದೆ. ಆದರೆ ಜನರ ಆಶೀರ್ವಾದ ಇರುವ ತನಕ ಈ ಕಾಂಗ್ರೆಸ್ನ ಹಣದ ಹೊಳೆ, ನೀರಿನಲ್ಲಿ ಹೋಮ ಮಾಡಿದಂತೆ ಆಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.
ಮತದಾನ ಬಹಿಷ್ಕಾರ ಬೇಡ: ತಾಲೂಕಿನ ದಬ್ಬೇಘಟ್ಟ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಏತ ನೀರಾವರಿ ಯೋಜನೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಮತದಾನ ಬಹಿಷ್ಕರಿಸಿರುವ ಕುರಿತು ತಾಲೂಕು ಪಂಚಾಯ್ತಿ ಸದಸ್ಯ ಎಂ.ಡಿ.ರಮೇಶ್ ಗೌಡ ಕುಮಾರಸ್ವಾಮಿಯವರ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ಕುತಂತ್ರದಿಂದ ಏತ ನೀರಾವರಿಗೆ ತೊಂದರೆ ಮಾಡಲಾಗಿದೆ. ಚುನಾವಣೆ ಆದ ಬಳಿಕ ಕಾಮಗಾರಿಗೆ ಚಾಲನೆ ನೀಡಲು ಪ್ರಯತ್ನಿಸಲಾಗುವುದು ಎಂದು ಹೇಳಿದ ಕುಮಾರಸ್ವಾಮಿ ಆ ಭಾಗದ ಜನರು ತಪ್ಪದೇ ಮತದಾನದಲ್ಲಿ ಭಾಗವಹಿಸಬೇಕು ಎಂದು ವಿನಂತಿಸಿಕೊಂಡರು.
ಲೋಕಸಭಾ ಅಭ್ಯರ್ಥಿ ಎ.ಕೃಷ್ಣಪ್ಪ, ಶಾಸಕ ಎಂ.ಟಿ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ಡಾ.ಹುಲಿನಾಯ್ಕರ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎ.ಬಿ.ಜಗದೀಶ್, ಶ್ರೀನಿವಾಸ್, ತಾಲೂಕು ಪಂಚಾಯ್ತಿ ಅಧ್ಯಕ್ಷ ಕೋಳಾಲ ಗಂಗಾಧರ್, ಮಾಜಿ ಅಧ್ಯಕ್ಷ ಎಂ.ಡಿ.ರಮೇಶ್ ಗೌಡ, ಗೋಣಿತುಮಕೂರು ಲಕ್ಷ್ಮೀಕಾಂತ್, ಸದಸ್ಯ ವಿ.ಟಿ.ವೆಂಕಟರಾಮಯ್ಯ, ಕಡೇಹಳ್ಳಿ ಸಿದ್ದೇಗೌಡ ಮೊದಲಾದವರು ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ತಾಲೂಕು ಜೆಡಿಎಸ್ ಅಧ್ಯಕ್ಷ ಸ್ವಾಮಿ ವಹಿಸಿದ್ದರು.