ಮುದನೀಡಿದ ವಿದ್ಯಾಭೂಷಣರ ಭಕ್ತಿಸೌರಭ
ಕುಣಿಗಲ್: ಲೋಕಸಭೆ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಚಾರ, ಆರೋಪ, ಪ್ರತ್ಯಾರೋಪಗಳ ಭರಾಟೆಯಿಂದ ಬಳಲಿದ್ದ ಪಟ್ಟಣದ ನಾಗರಿಕರಿಗೆ ಮಂಗಳವಾರ ರಾತ್ರಿ ಖ್ಯಾತ ಗಾಯಕರಾದ
ಡಾ. ವಿದ್ಯಾಭೂಷಣರ ಭಕ್ತಿಸೌರಭ ದಾಸರಪದ, ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ಮುದ ನೀಡಿತು.
ಪಟ್ಟಣದ ರಮಣ ಬ್ಲಾಕ್ನಲ್ಲಿರುವ ಶ್ರೀರಾಮಮಂದಿರದಲ್ಲಿ ಕಳೆದ ಸಾಲಿನಂತೆ ಈ ಬಾರಿಯೂ ಶ್ರೀರಾಮನವಮಿ ಅಂಗವಾಗಿ ಶ್ರೀರಾಮೋತ್ಸವ ಕಾರ್ಯಕ್ರಮವನ್ನು ಏ.8ರಿಂದ 18ರವರಗೆ ಶ್ರೀರಾಮ ಸೇವಾ ಮಂಡಳಿ ಟ್ರಸ್ಟ್, ಜಾನಕಿ ಮಹಿಳಾ ಸಂಘ ಮತ್ತು ರಾಮಸೇವಾ ಮಂಡಳಿ ಹಾಗೂ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ದಿನ ಸಂಜೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.ಇದರಂತೆ ಮಂಗಳವಾರ ಸಂಜೆ ಡಾ.ವಿದ್ಯಾಭೂಷಣರು ಮತ್ತು ಸಂಗಡಿಗರಿಂದ ಭಕ್ತಿ ಸೌರಭ ದಾಸಸಾಹಿತ್ಯ ಮತ್ತು ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಕೇಳುಗರ ಮನಸೂರೆಗೊಂಡಿತು.
ವಿದ್ಯಾಭೂಷಣರ ಗಾಯನಕ್ಕೆ ಅಕಾಶವಾಣಿ ಕಲಾವಿದರುಗಳಾದ ಗೋವಿಂದ ರಾಜು - ವೈಲೀನ್, ಮೃದಂಗ- ಎಂ.ಆರ್. ಸಾಯಿನಾಥ್ ಹಾಗೂ ಘಟ -ಎಂ.ಕೆ. ಭಾಸ್ಕರ್ ನುಡಿಸುವ ಮೂಲಕ ಕಾರ್ಯಕ್ರಮದ ಮೆರೆಗು ಇಮ್ಮಡಿಯಾಗುವಂತೆ ಮಾಡಿದ್ದರು. ಕಾರ್ಯಕ್ರಮದಲ್ಲಿ ಸೇವಾ ಮಂಡಳಿ ಟ್ರಸ್ಟ್ನ ಪದಾಧಿಕಾರಿಗಳು ಸೇವಾಕರ್ತರು ಇತರರು ಪಾಲ್ಗೊಂಡಿದ್ದರು.
ಮಳೆ ಗಾಳಿಗೆ ಉರುಳಿದ ಮರ
ಚಿಕ್ಕನಾಯಕನಹಳ್ಳಿ: ನಿನ್ನೆ ರಾತ್ರಿ ಇಲ್ಲಿ ಬಿದ್ದ ಮಳೆಯಿಂದಾಗಿ ಭುವಿಗೆ ತಂಪನ್ನೆರೆಯಿತು. ಗಾಳಿ ಮಳೆಯಿಂದಾಗಿ ಪಟ್ಟಣದ ಪೆಟ್ರೋಲ್ ಬಂಕ್ ಬಳಿಯಿರುವ ಹೆಬ್ಬೇವಿನ ಮರ ಉರುಳಿದ ಪರಿಣಾಮ, ನಾಲ್ಕು ವಿದ್ಯುತ್ ಕಂಬಗಳು ಜಕಂ ಆಗಿವೆ. ಹಳೆಯೂರು ಬಳಲಿ ಅಗಸರ ಹೊಳೆಯ ಬಳಿಯೂ ಮರ ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ, ಪಟ್ಟಣದಲ್ಲಿ ವಿದ್ಯುತ್ ವ್ಯವಸ್ಥೆ ಅಸ್ಥವ್ಯಸ್ಥವಾಗಿದೆ. ಮತ್ತೆ ಆನೆಗಳ ಆಗಮನ: ಇದರ ಜೊತೆಗೆ ರಾತ್ರಿ ತಾಲೂಕಿಗೆ ಪುನಃ ಗಜಪಡೆಯ ಆಗಮನವಾಗಿದ್ದು, ಕಂದಿಕೆರೆ ಹೋಬಳಿಯ ರಾಮನಹಳ್ಳಿ, ಸಿದ್ದನಕಟ್ಟೆ ಸುತ್ತಮುತ್ತ ಸಂಚರಿಸಿ, ಕೊನೆಗೆ ಬೋರನಕಣಿವೆಯ ಸುತ್ತ ಅಡ್ಡಾಡುತ್ತಿರುವುದಾಗಿ ವರದಿಯಾಗಿದೆ.