ಗೆಲವು ನನ್ನದೇ: ಮುದ್ದಹನುಮೇಗೌಡ
ಕುಣಿಗಲ್: ತುಮಕೂರು ಲೋಕಸಭೆ ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದು, ಈ ಬಾರಿ ತಮ್ಮನ್ನು ಭಾರಿ ಬಹುಮತಗಳಿಂದ ಆರಿಸಿ ಕಳಿಸುವುದರಲ್ಲಿ ಸಂದೇಹವಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿಎಸ್.ಪಿ. ಮುದ್ದಹನುಮೇಗೌಡ ತಿಳಿಸಿದರು.
ಗುರುವಾರ ನಡೆದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ಕುಣಿಗಲ್ ತಾಲೂಕಿನ ಸೊಬಗಾನಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಪತ್ನಿ ಕಲ್ಪನಾ, ಪುತ್ರ ಗೌರವ್ ಅವರೊಂದಿಗೆ ಮತಚಲಾವಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹತ್ತು ದಿನಗಳಿಂದಲೂ ಕ್ಷೇತ್ರದಾದ್ಯಂತ ಪ್ರಚಾರ ಮಾಡಿದ್ದು, ಈ ಬಾರಿ ಕ್ಷೇತ್ರದ ಜನತೆ ಉತ್ತಮ ಅಭ್ಯರ್ಥಿಯ ಆಯ್ಕೆ ಮತ್ತು ಬದಲಾವಣೆ ಬಯಸಿದ್ದು, ನಾನು ಆಯ್ಕೆ ಆಗುವುದರಲ್ಲಿ ಸಂಶಯವೇ ಇಲ್ಲ ಎಂದರು. ರಾಜ್ಯ ಸರ್ಕಾರದ ಹಲವು ಜನಪರ ಯೋಜನೆಗಳಿಂದ ಮಧ್ಯಮ ಮತ್ತು ಬಡವರ್ಗದ ಜನತೆಯ
ಜೊತೆಯಲ್ಲಿ ಅದೃಶ್ಯ ಮತದಾರರು ಕಾಂಗ್ರೆಸ್ ಪಕ್ಷವನ್ನು ಒಮ್ಮತದಿಂದ ಬೆಂಬಲಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ 20ಕ್ಕೂ ಅಧಿಕ ಸ್ಥಾನ ಗೆಲ್ಲುವ ಜೊತೆಯಲ್ಲಿ ಕೇಂದ್ರದಲ್ಲಿ ಈಬಾರಿ ಯುಪಿಎ-3 ಸರ್ಕಾರ ರಚಿಸಿ, ರಾಹುಲ್ ಗಾಂಧಿ ಪ್ರಧಾನಮಂತ್ರಿ ಆಗಲಿದ್ದಾರೆಂದರು. ಪುರಸಭೆ ಸದಸ್ಯ ಪಾಪಣ್ಣ, ಮುಖಂಡರಾದ ನಂಜೇಶ, ಸುರೇಶ್, ಕಾಳೇಗೌಡ, ಮೂರ್ತಿ, ಕೃಷ್ಣಪ್ಪ, ಅಶೋಕ, ಶ್ರೀನಿವಾಸ ಇತರರು ಉಪಸ್ಥಿತರಿದ್ದರು.
ಮುದ್ದಹನುಮೇಗೌಡರು ಮತದಾನಕ್ಕೆ ತೆರಳುವ ಮುನ್ನ ಗ್ರಾಮದೇವರಾದ ಆಂಜನೇಯಸ್ವಾಮಿ ದೇವಾಲಯದಲ್ಲಿ ಕುಟುಂಬ ಸಮೇತ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.