ಸಣ್ಣ ಕಥೆ ಮನಸ್ಸನ್ನು ಬೇಗನೆ ಮುಟ್ಟುತ್ತದೆ
ಕ.ಪ್ರ.ವಾರ್ತೆ ತುಮಕೂರು ಏ.20
ಒತ್ತಡದ ಬದುಕಿನ ಈ ಕಾಲಘಟ್ಟದಲ್ಲಿ ಸಣ್ಣಕತೆಗಳು ಜನರ ಮನಸ್ಸನ್ನು ಬೇಗನೆ ಮುಟ್ಟುತ್ತದೆ ಎಂದು ಸಾಹಿತಿ ಜಿ.ಕೆ.ಕುಲಕರ್ಣಿ ವ್ಯಾಖ್ಯಾನಿಸಿದರು.
ಅನನ್ಯ ಪ್ರಕಾಶನದ ವತಿಯಿಂದ ಇತ್ತೀಚೆಗೆ ನಗರದ ತ್ರಿನೇತ್ರ ಸ್ಕೂಲ್ ಆಫ್ ಡ್ಯಾನ್ಸ್‌ನಲ್ಲಿ ಆಯೋಜಿಸಿದ್ದ ಕಥಾಸ್ಪರ್ಧೆ ಬಹುಮಾನ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು.
ಸಣ್ಣಕತೆಗಳು ಹೇಳಲಿಕ್ಕೆ ಸುಲಭ. ಆದರೆ ಅದರಲ್ಲಿ ದೊಡ್ಡ ಶಕ್ತಿ ಅಡಗಿರುತ್ತದೆ. ಕಾದಂಬರಿ ಸರಳೀಕರಣವಾದಂತೆ ಸಣ್ಣಕತೆಗಳನ್ನು ಬರೆಯುವುದು ತ್ರಾಸವಾದ ಕೆಲಸ. ಈ ಕಥೆಗಳಲ್ಲಿ ಸಾಧ್ಯವಾದಷ್ಟು ಗೌಪ್ಯತೆ ಕಾಪಾಡಿಕೊಳ್ಳಬೇಕು ಎಂದರು.
ನಿರಂತರವಾಗಿರಲಿ: ಲೇಖಕಿ ಎಂ.ಸಿ.ಲಲಿತ ಅವರು ತಮ್ಮ ದಿ. ಪತಿ ಸಾಂಬಶಿವಪ್ಪ ಹೆಸರಿನಲ್ಲಿ ಪ್ರತಿವರ್ಷ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆ ಮೂಲಕ ಸಾಹಿತ್ಯ ಚಟವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಒಂದು ಕುಟುಂಬದಲ್ಲಿ ಆಗಬೇಕಾದ ಕಾರ್ಯಕ್ರಮವನ್ನು ಇಡೀ ಸಮಾಜಕ್ಕೆ ಪರಿಚಯಿಸುತ್ತಾ ಪತಿಯನ್ನು ಸ್ಮರಿಸುವ ಹಾಗೆಯೇ ಸಾಹಿತ್ಯ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ವಿಶಾಲ ಹೃದಯದ ಎಂ.ಸಿ.ಲಲಿತ ಅವರ ಸಾಮಾಜಿಕ ಹಾಗೂ ಸಾಹಿತ್ಯ ಪ್ರೋತ್ಸಾಹ ನಿರಂತರವಾಗಿರಲಿ ಎಂದು ಹಾರೈಸಿದರು. ಸಾಹಿತಿ ಎನ್. ನಾಗಪ್ಪ ಮಾತನಾಡಿ ಬರಹಗಾರನಿಗೆ ಅನುಭವ ಮುಖ್ಯ. ಅನುಭವ ಇಲ್ಲದ ಬರವಣಿಗೆ ಹೆಚ್ಚು ಆಕರ್ಷಿತವಾಗಲಾರದು ಎಂದರು.
ಹಿರಿಯ ಲೇಖಕಿ ಬಾ.ಹಾ.ರಮಾಕುಮಾರಿ ಮಾತನಾಡಿ ಪ್ರಕೃತಿ ನಾಶವಾಗುತ್ತಿರುವ ಈ ದಿನಗಳಲ್ಲಿ ಪ್ರಕೃತಿಯನ್ನು ಉಳಿಸಿ-ಬೆಳೆಸುವ ನಿಟ್ಟಿನತ್ತ ಎಲ್ಲರೂ ಯೋಚಿಸಬೇಕಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಅನನ್ಯ ಪ್ರಕಾಶನದ ಮುಖ್ಯಸ್ಥೆ ಎಂ.ಸಿ.ಲಲಿತ ಅವರು ಉದಯೋನ್ಮುಖರನ್ನು ಪ್ರೋತ್ಸಾಹಿಸುವ ಜೊತೆಗೆ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಒಂದು ಕಡೆ ಕೂಡಿಸಿ ಅದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಕಾಶನವು ಕೆಲಸ ಮಾಡುತ್ತಿದೆ ಎಂದರು.