ಸೌಲಭ್ಯ ಕೊರತೆಯ ಸರ್ಕಾರಿ ಕ್ರೀಡಾಂಗಣ
ಸರ್ಕಾರದ ಯೋಜನೆಗಳಿಂದ ಜನಸಾಮಾನ್ಯರಿಗೆ ಪ್ರಯೋಜನವಾಗುವಂತಿರಬೇಕು. ಇಲ್ಲದಿದ್ದರೆ ಅವು ಬೊಕ್ಕಸದ ಹಣ ನುಂಗುವ ಬಿಳಿಯಾನೆಗಳಾಗುತ್ತವೆಂಬುದಕ್ಕೆ ಚಿಕ್ಕನಾಯಕನಹಳ್ಳಿ ಪಟ್ಟಣದ ಸ್ವಾಮಿವಿವೇಕಾನಂದ ಕ್ರೀಡಾಂಗಣ ಉದಾಹರಣೆಯಾಗಿದೆ.
ಇದೊಂದು ಕ್ರೀಡಾಂಗಣವೆನಿಸಿಕೊಳ್ಳಲು ಆಗಬೇಕಾಗಿರುವ ಸೌಲಭ್ಯಗಳ ಪಟ್ಟಿಯನ್ನು ಮಾಡುತ್ತಾ ಹೋದರೆ ಅದು ಆಂಜನೇಯನ ಬಾಲದ ರೀತಿ ಬೆಳೆಯುತ್ತದೆ. ಮನುಷ್ಯ ತನ್ನ ಆರೋಗ್ಯ ರಕ್ಷಣೆ ಮಾಡಿಕೊಳ್ಳುವಲ್ಲಿ ಕ್ರೀಡೆ ಬಹುಮುಖ್ಯವಾಗಿದೆ. ಮೊದಲಿಗೆ ಪ್ರತಿನಿತ್ಯ ಅಲ್ಲಿ ಅಭ್ಯಾಸ ಮಾಡುವ ಕ್ರೀಡಾಪಟುಗಳಿಗೆ ಕುಡಿಯುವ ನೀರಿಗೆ ಗತಿಯಿಲ್ಲ. ಕೊಳವೆ ಬಾವಿ ಇದ್ದರೂ ಅದ್ಕಕ ಪಂಪ್ ಮೋಟಾರು ಅಳವಡಿಸಿ ನೀರಿನ ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ಕ್ರೀಡಾ ಇಲಾಖೆ ಮಾಡಿಲ್ಲ. ಮಳೆ ಬಂದಾಗ ಹೊರಗಿನ ನೀರು ಕ್ರೀಡಾಂಗಣದೊಳಕ್ಕೆ ಬಾರದಂತೆ ಸುತ್ತ ಕಾಲುವೆ ಮಾಡಿಲ್ಲದಿರುವುದರಿಂದ ಮಳೆ ನೀರು ಕ್ರೀಡಾಂಗಣ ತುಂಬ ಹರಿಯುವುದರಿಂದ ಭೂಮಿ ಕುಸಿದು ಕ್ರೀಡಾಂಗಣದ ಮೇಲ್ಮೈ ಸಮತಟ್ಟು ಹಾಳಾಗುತ್ತಿದೆ.
ಇರುವ ಮಣ್ಣನ್ನು ಕೊಚ್ಚಿಕೊಂಡು ಹೋಗಿರುವುದರಿಂದ, ಭೂಮಿಯ ಕಲ್ಲುಗಳು ಮೇಲೆದ್ದ ಪರಿಣಾಮ, ಅಭ್ಯಾಸ ನಿರತರಿಗೆ ಬಹ ಹಿಂಸೆಯಾಗುತ್ತಿದೆ. ಇದರ ಜೊತೆಗೆ ಮೈದಾನದ ತುಂಬ ನೀರು ಇಂಗುವುದರಿಂದ ಭೂಮಿ ಕುಸಿದು ಸಮತಟ್ಟು ಹಾಳಾಗಿದೆ. ಕ್ರೀಡಾಂಗಣಕ್ಕೆ ಸಮರ್ಪಕವಾದ ಕಾವಲಿಡದಿರುವುದರಿಂದ ಸಂಜೆಯ ವೇಳೆ ಇಲ್ಲಿ ಕುಡುಕರಿಗೆ ನೆಮ್ಮದಿಯ ತಾಣವಾಗಿದೆ. ಕುಡಿದ ಬಾಟಲಿಗಳನ್ನು ಅಲ್ಲಿಯೇ ಬಿಸಾಡಿ ಹೋಗುತ್ತಾರೆ. ಆವರಣದ ಸುತ್ತ ಗಿಡ ಹಾಕಿರುವ ಅರಣ್ಯ ಇಲಾಖೆಯವರು,ಇದುವರೆಗು ತಿರುಗಿ ನೋಡಿಲ್ಲವೆಂಬುದಕ್ಕೆ ಗಿಡಗಳ ಸ್ಥಿತಿಯೇ ಹೇಳುತ್ತದೆ. ನಿರ್ವಹಣೆಯಿಲ್ಲದೆ ಅವು ಸೊರಗುತ್ತಿವೆ, ಕೆಲವು ಮುರಿದು ಭೂಮಿಗೆ ಬಿದ್ದಿವೆ. ಇನ್ನು ಅತಿ ಅವಶ್ಯಕವಾದ ಕ್ರೀಡಾಸಾಮಗ್ರಿಗಳನ್ನು ಕೇಳುವಂತಿಲ್ಲ. ಇಲ್ಲಿ ಯಾವುದೇ ಕ್ರೀಡಾಸಾಮಗ್ರಿಗಳ ದಾಸ್ತಾನನ್ನು ಇಟ್ಟಿಲ್ಲ. ಶೌಚಾಲಯವಿದ್ದರೂ, ಅದಕ್ಕೆ ನೀರಿನ ಸೌಕರ್ಯ ಮಾಡಿಲ್ಲದಿರುವುದು, ಅಭ್ಯಾಸಕ್ಕೆ ಬರುವ ಹೆಣ್ಣು ಮಕ್ಕಳಿಗೆ ಬಹಳ ಹಿಂಸೆಯಾಗಿದೆ. ಅಥ್ಲೆಟಿಕ್ ಟ್ರಾಕ್ ಸುತ್ತ ಇಂಗು ಗುಂಡಿ ಮಾಡಿಲ್ಲ. ಪರಿಣಾಮ ಟ್ರಾಕ್ ಓಟಗಾರರಿಗೆ ಕಾಣಿಸುವುದಿಲ್ಲ. ಸುತ್ತ ತಂತಿ ಬೇಲಿಮಾಡಿ ಗೇಟ್ ಅಳವಡಿಸಿಲ್ಲವಾದ್ದರಿಂದ ಸಂತೆದಿವಸ ಬರುವ ಸರಕುವಾಹನಗಳ ಮಂದಿ ಅಂದು ತಮ್ಮ ನಿಲ್ದಾಣವನ್ನಾಗಿ ಮಾಡಿಕೊಳ್ಳುತ್ತಾರೆ. ಆರೋಗ್ಯದ ದೃಷ್ಟಿಯಿಂದ
ಬೆಳಗಿನ ವೇಳೆ ಹರಿಯ ನಾಗರಿಕರು ವಾಕ್ ಮಾಡಲು ವಾಕಿಂಗ್ ಪಾಥ್ ನಿರ್ಮಿಸಿಲ್ಲ. ಇಂತಹ ವ್ಯವಸ್ಥೆಯಲ್ಲಿ ಕ್ರೀಡಾಪಟುಗಳು ಮತ್ತು ಕ್ರೀಡಾಂಗಣ ಹೇಗೆ ಉದ್ಧಾರವಾಗಲು ಸಾಧ್ಯ?