ಹಳ್ಳಿಗಳಿಗೆ ಹಗಲು 5 ಗಂಟೆ ವಿದ್ಯುತ್ ನೀಡಿ: ಒತ್ತಾಯ
ತಿಪಟೂರು: ಗ್ರಾಮೀಣ ಪ್ರದೇಶಗಳಿಗೆ ಹಗಲು ವೇಳೆ ಮೂರು ಗಂಟೆ ತ್ರೀ ಫೇಸ್ ವಿದ್ಯುತ್ ನೀಡುತ್ತೇವೆಂದು ಸರ್ಕಾರ ಹೇಳಿದ್ದು, ಈ ಮೂರು ಗಂಟೆಯಲ್ಲಿ ಹಲವಾರು ಬಾರಿ ವಿದ್ಯುತ್ ಹೋಗಿ ಬರುತ್ತಿದ್ದು, ಇದರಿಂದ ರೈತರು ತೋಟಗಳಿಗೆ ನೀರುಣಿಲು ಹೆಣಗಾಡಬೇಕಾಗಿದೆ. ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಪರಿತಪಿಸುವಂತಾಗಿದೆ ಎಂದು ಬಿಜೆಪಿ ಮುಖಂಡ ಲೋಕೇಶ್ವರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾತ್ರಿ ವೇಳೆ 4ಗಂಟೆ ತ್ರೀಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದ್ದರೂ ಇದು ಸರಿಯಾಗಿ ಚಾಲ್ತಿಯಾಗಿಲ್ಲ. ರಾತ್ರಿ ವೇಳೆ ಎಷ್ಟೇ ವಿದ್ಯುತ್ ನೀಡಿದರೂ ಕಾರ್ಗತ್ತಲಲ್ಲಿ ನೀರು ಹಾಯಿಸಲು ಸಾಧ್ಯವಿಲ್ಲ. ಅಲ್ಲದೆ ಒಂದು ರಾತ್ರಿ ಒಂದು ವೇಳೆಗೆ ವಿದ್ಯುತ್ ಬಂದರೆ, ಮತ್ತೊಂದು ರಾತ್ರಿ ಬರುವುದೇ ಇಲ್ಲ. ಮಗದೊಂದು ರಾತ್ರಿ ಯಾವ ಸಮಯಕ್ಕೆ ತ್ರೀಫೇಸ್ ಕರೆಂಟ್ ಬರುತ್ತದೋ ಎಂಬುದು ತಿಳಿಯುವುದೇ ಇಲ್ಲ. ಇದರಿಂದ ತೋಟಗಳಿಗೆ ನೀರುಣಿಸಲಾಗದೆ ಒಣಗುತ್ತಿವೆ. ಆದ್ದರಿಂದ ಹಗಲು ವೇಳೆ ರೈತರಿಗೆ ನಿರಂತರವಾಗಿ ನಿಗದಿತ ಸಮಯದಲ್ಲಿ ಕನಿಷ್ಠ 5ಗಂಟೆಯಾದರೂ ವಿದ್ಯತ್ ನೀಡಿದರೆ ನೀರು ಸಹ ಪೋಲಾಗದಂತೆ ಗಿಡಮರಗಳಿಗೆ ರೈತರು ಹಾಯಿಸಬಹುದು. ಆದರೆ ರಾತ್ರಿ ವೇಳೆ ರೈತರು ಸರಿಯಾಗಿ ನೀರುಣಿಸಲಾಗದೆ ಅಮೂಲ್ಯವಾದ ನೀರು ಪೋಲಾಗುತ್ತಿದೆ. ಆದ್ದರಿಂದ ರಾತ್ರಿ ವೇಳೆ 2ಗಂಟೆ ಮಾತ್ರ ವಿದ್ಯುತ್ ನೀಡಿ, ಹಗಲು ವೇಳೆ ನಿರಂತರವಾಗಿ 5ಗಂಟೆಯಾದರೂ ವಿದ್ಯುತ್ ನೀಡಬೇಕೆಂದು ಲೋಕೇಶ್ವರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಗ್ರಾಮೀಣರ ಸಮಸ್ಯೆಗಳನ್ನು ಪರಿಹರಿಸಲು ಮುಂದಾದರೂ ಕನಿಷ್ಠ ಹಗಲಿನಲ್ಲಿ 5ಗಂಟೆ, ರಾತ್ರಿ 2ಗಂಟೆಯಾದರೂ ತ್ರೀ ಫೇಸ್ ವಿದ್ಯುತ್ ಸರಬರಾಜು ಮಾಡಬೇಕು. ಇಲ್ಲದಿದ್ದರೆ ತಾಲೂಕು ಬಿಜೆಪಿ ವತಿಯಿಂದ ರೈತರ ಪರವಾಗಿ ಹೋರಾಟ ಅನಿವಾರ್ಯ ಎಂದರು.
ಜಾತ್ರಾ ಮಹೋತ್ಸವ
ಹುಳಿಯಾರು: ಹೋಬಳಿ ಗಾಣದಾಳು ವ್ಯಾಪ್ತಿಯ ವೆಂಕಟಾಬೋವಿಹಟ್ಟಿ, ಗಂಗಾಬೋವಿಹಟ್ಟಿ, ಸೋಮನಹಳ್ಳಿಯ ಮಾರಮ್ಮದೇವಿಯ ನಾಲ್ಕನೇ ವರ್ಷದ ಜಾತ್ರಾ ಮಹೋತ್ಸವ ಏ.24ರಿಂದ 26ರ ವರೆಗೆ ನಡೆಯಲಿದೆ. ಏ.24 ರಂದು ಮಡಲಕ್ಕಿ ಸೇವೆ, ಅಂಕುರಾರ್ಪಣೆ, ಕಂಕಣಧಾರಣೆ ನಡೆದು ರಾತ್ರಿ ಮಧುವಣಗಿತ್ತಿ ಕಾರ್ಯನಡೆಯಲಿದೆ. ಏ.25ರ ರಂದು ಬೆಳಿಗ್ಗೆ ಅಮ್ಮನವರ ಗಂಗಾಸ್ನಾನ ನಡೆದು ಸಂಜೆ ನಡೆಮುಡಿಯಲ್ಲಿ ದೇವಾಲಯದಲ್ಲಿಗೆ ಆಗಮಿಸಲಿದೆ.