ನಗರಕ್ಕೆ ರಾಜೀವ್ ಚಂದ್ರಶೇಖರ್ ಇಂದು
ತುಮಕೂರು: 'ಕನ್ನಡಪ್ರಭ', 'ಸುವರ್ಣ ವಾಹಿನಿ' ಮುಖ್ಯಸ್ಥ ಹಾಗೂ ಸಂಸದ ರಾಜೀವ್ ಚಂದ್ರಶೇಖರ್ ಆ.3ರಂದು ತುಮಕೂರಿಗೆ ಆಗಮಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ತುಮಕೂರಿನ ಎಸ್ಐಟಿಯಲ್ಲಿ ಏರ್ಪಡಿಸಿರುವ ಪದವಿ ಪ್ರದಾನ ಸಮಾರಂಭದಲ್ಲಿ ಘಟಕೋತ್ಸವ ಭಾಷಣ ಮಾಡಲಿದ್ದಾರೆ. ಸಾನಿಧ್ಯವನ್ನು ಸಿದ್ಧಗಂಗೆಯ ಹಿರಿಯ ಹಾಗೂ ಕಿರಿಯ ಶ್ರೀಗಳು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಡಾ.ಕೆ. ಸಿದ್ದಪ್ಪ ವಹಿಸಲಿದ್ದಾರೆ. ಎಸ್ಐಟಿ ಪ್ರಾಚಾರ್ಯ ಡಾ.ಶಿವಕುಮಾರಯ್ಯ, ನಿರ್ದೇಶಕ ಡಾ.ಎಂ.ಎನ್. ಚನ್ನಬಸಪ್ಪ, ಸಿಬ್ಬಂದಿ ಉಪಸ್ಥಿತರಿರುವರು.
ಬೈಕ್ ಸವಾರನ ಅಡ್ಡಗಟ್ಟಿ ಹಲ್ಲೆ
ಕೊರಟಗೆರೆ: ತಾಲೂಕಿನ ಮಲ್ಲೇಕಾವು ಗ್ರಾಮದಿಂದ ಗೌಜಗಲ್ಲಿಗೆ ಹೋಗುವ ಮಾರ್ಗದ ಹಲಸಿನ ಮರದ ಗೇಟ್ ಬಳಿ ಸಂಜೆ ನವೀನ್ಕುಮಾರ್ ಎಂಬುವವರು ತಮ್ಮ ಬೈಕ್ನಲ್ಲಿ ತೆರಳುತ್ತಿದ್ದಾಗ ಮಂಜುನಾಥ್, ಯತೀಶ್ ಮತ್ತು ಇತರರು ನವೀನ್ಕುಮಾರ್ ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಈ ಬಗ್ಗೆ ಕೊರಟಗೆರೆ ಪೊಲೀಸ್ ಇನ್ಸ್ಪೆಕ್ಟರ್ ಚಂದ್ರಶೇಖರ್ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಶಾಲಾಭಿವೃದ್ಧಿ ಸಮಿತಿಗೆ ಅವಿರೋಧ ಆಯ್ಕೆ
ಪಾವಗಡ: ತಾಲೂಕಿನ ಕೆ.ಟಿ.ಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ತಿಪ್ಪೇಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಳಿಕ ಮಾತನಾಡಿದ ತಿಪ್ಪೇಸ್ವಾಮಿ, ಶಾಲೆಯ ಅಭಿವೃದ್ಧಿಗೆ ವಿಶೇಷ ಅದ್ಯತೆ ನೀಡಲಾಗುವುದೆಂದರು. ಗ್ರಾಪಂ ಸದಸ್ಯರಾದ ಮಂಜುಳ ಬೋರನಾಯಕ, ಶ್ರೀನಿವಾಸ ನಾಯಕ, ಓಬಳಪತಿ, ಆರ್.ಮಂಜುನಾಥ್ ಹಾಗೂ ದಲಿತಕುಮಾರ್ ಇತರರು ಇದ್ದರು.
ಒಂದೇ ದಿನ ಅರಳಿದ 29 ಬ್ರಹ್ಮ ಕಮಲ ಪುಷ್ಪಗಳು!
ಪಾವಗಡ: ಪಟ್ಟಣದ ಶಾಂತಿ ನಗರದಲ್ಲಿ ನಾಗಪಂಚಮಿ ಹಾಗೂ ಶ್ರಾವಣ ಮಾಸದಲ್ಲಿ ಬ್ರಹ್ಮಕಮಲದ ಗಿಡದಲ್ಲಿ ಅಪರೂಪ ಹೂವುಗಳು ಅರಳಿದ್ದು ಇದನ್ನು ನೋಡಲು ಸಾವಿರಾರು ಜನ ಮುಗಿಬಿದಿದ್ದರು. ಎಳ್ಳೀರು ವೆಂಕಟೇಶಪ್ಪ ಅವರ ಮನೆಯಲ್ಲಿ ಬಾಡಿಗೆಗೆ ಇದ್ದ ದನ್ವಂತರಿ ಅರ್ಯುವೇದ ವೈದ್ಯ ರಾಜಗೋಪಾಲ್ ಎಂಬವರು ಬ್ರಹ್ಮ ಕಮಲದ ಗಿಡ ನೆಟ್ಟಿದ್ದಾರೆ. ಈ ಗಿಡದಲ್ಲಿ ಶ್ರಾವಣ ಶುಕ್ರವಾರ ರಾತ್ರಿ ಸುಮಾರು 9 ಗಂಟೆಗೆ ಒಂದೇ ಬಾರಿಗೆ 29ಬ್ರಹ್ಮಕಮಲ ಪುಷ್ಪಗಳು ಅರಳಿವೆ. ವಿಷಯ ತಿಳಿದು ಸಾವಿರಾರು ಜನ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.